ರಾಜ್ಯ ಸರಕಾರದಿಂದ ಡಿಸೀಲ್ ಬೆಲೆ 2 ರೂ ಹೆಚ್ಚಳ.. ವಸ್ತುಗಳ ಬೆಲೆ ಹೆಚ್ಚಳ ಶೀಘ್ರ!

ಕರ್ನಾಟಕ ರಾಜ್ಯ ಸರಕಾರ ಡಿಸೀಲ್ ಬೆಲೆಯನ್ನು ಲೀಟರಿಗೆ ಎರಡು ರೂಪಾಯಿ ಹೆಚ್ಚಿಸಿರುವುದನ್ನು ಲಾರಿ ಮಾಲೀಕರ ಸಂಘ, ವಸ್ತು ಸಾಗಾಣಿಕಾ ಲಾರಿಗಳ ಒಕ್ಕೂಟ, ಖಾಸಗಿ ಬಸ್ ಮಾಲೀಕರ ಸಂಘ ಮತ್ತು ಕ್ಯಾಬ್ ಮಾಲೀಕರ ಸಂಘಟನೆ ವಿರೋಧ ವ್ಯಕ್ತಪಡಿಸಿದೆ.
ಕರ್ನಾಟಕ ರಾಜ್ಯ ಸರಕಾರ ಡಿಸೀಲ್ ಮೇಲಿನ ಸೇಲ್ಸ್ ಟ್ಯಾಕ್ಸ್ ಅನ್ನು 18.44% ನಿಂದ 21.17% ಹೆಚ್ಚಿಸಿರುವುದರಿಂದ ತಲಾ ಲೀಟರ್ ಮೇಲೆ ರೂ 2.05 ಹೆಚ್ಚಳವಾಗಿದೆ. ಇಲ್ಲಿ ಡಿಸೀಲ್ ದರ ಹೆಚ್ಚಿಸಿರುವ ರಾಜ್ಯ ಸರಕಾರದ ಈ ನಡೆಯಿಂದ ಆಕ್ರೋಶಿತಗೊಂಡಿರುವ ಈ ಒಕ್ಕೂಟಗಳು ಇದರಿಂದ ಸಾಗಾಣಿಕಾ ವೆಚ್ಚವೂ ಏರಲಿದ್ದು, ಅದು ಜನಸಾಮಾನ್ಯರ ಮೇಲೆ ಪ್ರಭಾವ ಬೀರುವುದಾಗಿ ಹೇಳಿವೆ.
ಕರ್ನಾಟಕ ಲಾರಿ ಮಾಲೀಕರ ಅಸೋಸಿಯೇಶನ್ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು ಸರಕಾರ ರಾಜ್ಯಮಟ್ಟದಲ್ಲಿ ಸಭೆ ನಡೆಸಿ ಈ ದರ ಹೆಚ್ಚಳವನ್ನು ಶೀಘ್ರ ಹಿಂದಕ್ಕೆ ಪಡೆದುಕೊಳ್ಳಬೇಕಾಗಿ ಆಗ್ರಹಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟಗಳ ಅಸೋಸಿಯೇಶನ್ ಅಧ್ಯಕ್ಷ ಜಿ ಆರ್ ಷಣ್ಮುಗಪ್ಪ ಈ ಬೆಲೆ ಹೆಚ್ಚಳದಿಂದ ನಿತ್ಯ 800 ರೂಪಾಯಿಗಳ ಹೆಚ್ಚಿನ ಹೊರೆ ಮತ್ತು ತಿಂಗಳಿಗೆ 24000 ರೂ ಹೊರೆ ನಮಗೆ ತಗಲುತ್ತದೆ. ಇದರಿಂದ ಜನಸಾಮಾನ್ಯರ ದಿನಸಿ ವಸ್ತುಗಳ ಬೆಲೆ ಕೂಡ ಹೆಚ್ಚಾಗಲಿದ್ದು, ಖಾಸಗಿ ವಾಹನಗಳಲ್ಲಿ ದೂರ ಪ್ರಯಾಣವು ದುಬಾರಿಯಾಗಲಿದೆ ಎಂದು ಹೇಳಿದ್ದಾರೆ.
ಈಗಾಗಲೇ ಹಾಲು, ವಿದ್ಯುತ್, ಸರಕಾರಿ ಬಸ್ ಟಿಕೆಟ್ ದರ ಹೆಚ್ಚಳವಾಗಿದ್ದು, ಈಗ ಡಿಸೀಲ್ ದರವೂ ಹೆಚ್ಚಳವಾಗಿರುವುದರಿಂದ ವರ್ತಕರು, ವ್ಯಾಪಾರಿಗಳು ದಿನಸಿ ವಸ್ತುಗಳ ಮತ್ತು ತರಕಾರಿಗಳ ಬೆಲೆಯನ್ನು ಅನಿವಾರ್ಯವಾಗಿ ಹೆಚ್ಚಿಸಲಿದ್ದಾರೆ. ಅವರಿಗೆ ಬೀಳುವ ಹೊರೆಯನ್ನು ಅವರು ಜನಸಾಮಾನ್ಯರ ಮೇಲೆ ಹಾಕಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬೃಹತ್ ಬೆಂಗಳೂರು ಹೋಟೇಲ್ ಅಸೋಸಿಯೇಶನ್ ಅಧ್ಯಕ್ಷ ಪಿ ಸಿ ರಾವ್ ಈಗಾಗಲೇ ಹಾಲಿನ ದರ ಹೆಚ್ಚಳದಿಂದ ಕಾಫಿ, ಟೀ ದರ ಜಾಸ್ತಿ ಮಾಡಬೇಕಿದೆ. ಇನ್ನು ಡಿಸೀಲ್ ದರ ಹೆಚ್ಚಿಸಿರುವುದರಿಂದ ದಿನಸಿ ವಸ್ತುಗಳು, ತರಕಾರಿ, ಹಣ್ಣುಹಂಪಲುಗಳು, ಆಹಾರ ತಯಾರಿಕೆಗೆ ಅಗತ್ಯವಾಗಿ ಬೇಕಾಗುವ ವಸ್ತುಗಳ ಬೆಲೆ ಕೂಡ ಹೆಚ್ಚಳವಾಗಲಿದೆ. ನಾವು ಊಟ, ತಿಂಡಿಯ ಬೆಲೆ ಹೆಚ್ಚಿಸದೇ ವಿಧಿಯಿಲ್ಲ ಎನ್ನುವವ ಪರಿಸ್ಥಿತಿ ಇದೆ. ಇಲ್ಲದಿದ್ದರೆ ಹೋಟೇಲುಗಳು, ಕ್ಯಾಂಟಿನುಗಳು ಮುಚ್ಚುವ ಪರಿಸ್ಥಿತಿ ಬರಲಿದೆ” ಎಂದರು.
ಇನ್ನು ಕರ್ನಾಟಕ ರಾಜ್ಯ ಪ್ರೈವೇಟ್ ಟಾನ್ಸಪೋರ್ಟ್ ಅಸೋಸಿಯೇಶನ್ ಅಧ್ಯಕ್ಷ ನಟರಾಜ್ ಶರ್ಮಾ ಮಾತನಾಡಿ ” ಡಿಸೀಲ್ ಬೆಲೆ ಹೆಚ್ಚಳವಾಗಿರುವುದರಿಂದ ಪ್ರತಿ ವಸ್ತುವಿನ ಬೆಲೆ ಹೆಚ್ಚಳವಾಗುತ್ತದೆ. ಏಕೆಂದರೆ ಸಾಗಾಣಿಕಾ ವೆಚ್ಚ ಹೆಚ್ಚಾದಾಗ ಅದು ಪರೋಕ್ಷವಾಗಿ ವಸ್ತುವಿನ ಬೆಲೆಯನ್ನು ಕೂಡ ಹೆಚ್ಚಿಸುತ್ತದೆ. ಇದರಿಂದ ಕೈಗಾರಿಕೆ ಸಹಿತ ಎಲ್ಲಾ ಕ್ಷೇತ್ರಗಳಲ್ಲಿ ಪರಿಣಾಮ ಬೀರುತ್ತದೆ. ಕೊನೆಯದಾಗಿ ಲಾಭ ಆಗುವುದು ಸರಕಾರಕ್ಕೆ ಮಾತ್ರ ” ಎಂದು ಹೇಳಿದರು.
ಡಿಸೀಲ್ ಹೆಚ್ಚಿಸುವ ಮೊದಲು ಉದ್ಯಮಿಗಳನ್ನು, ವಸ್ತು ಸಾಗಾಟದಲ್ಲಿ ನಿರತರಾಗಿರುವ ಕ್ಷೇತ್ರಗಳ ಪ್ರಮುಖರನ್ನು ಸರಕಾರ ಔಪಚಾರಿಕವಾಗಿಯೂ ಸಂಪರ್ಕಿಸಿಲ್ಲ ಎನ್ನುವ ಬೇಸರ ಅವರಲ್ಲಿದೆ.
ಈ ಡಿಸೀಲ್ ಬೆಲೆ ಹೆಚ್ಚಳದಿಂದ ಲಾರಿಗಳ ಮಾಲೀಕರು ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಡಿಸೀಲ್ ತುಂಬಿಸಲಿದ್ದಾರೆ. ಏಕೆಂದರೆ ಅಲ್ಲಿ ಬೆಲೆ ಕರ್ನಾಟಕಕ್ಕಿಂತ ಕಡಿಮೆ ಇದೆ. ಆದರೆ ತೊಂದರೆಗೆ ಒಳಗಾಗುವವರು ರಾಜ್ಯದಲ್ಲಿಯೇ ವ್ಯವಹಾರ ಮಾಡುವ ಸಂಸ್ಥೆಗಳು ಮತ್ತು ಜನಸಾಮಾನ್ಯರು.
Leave A Reply