34 ವರ್ಷ ಬಳಿಕ ಕಾಶ್ಮೀರದಲ್ಲಿ ಹಿಂದೂ ಮುಸ್ಲಿಮರು ಸೇರಿ ರಾಮನವಮಿ!

1990 ರ ಅವಧಿ. ಕಾಶ್ಮೀರದಲ್ಲಿ ರಾಮ ನವಮಿ ಆಚರಿಸುವುದು ಬಿಡಿ, ಅಲ್ಲಿ ಕಾಶ್ಮೀರಿ ಪಂಡಿತರು ಉಸಿರಾಡುವುದೇ ಕಷ್ಟಸಾಧ್ಯವಾಗಿತ್ತು. ಉಗ್ರಗಾಮಿಗಳ ಉಪಟಳ ಎಷ್ಟರಮಟ್ಟಿಗೆ ಹೆಚ್ಚಾಗಿತ್ತು ಎಂದರೆ ಅಲ್ಲಿನ ದೇವಾಲಯಗಳನ್ನೇ ಮುಚ್ಚುವ ಪರಿಸ್ಥಿತಿ ಇತ್ತು. ಅದಕ್ಕೆ ಜಮ್ಮು – ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬ್ರರಿಂಗ್ನಾನ್ ಕೂಡ ಹೊರತಾಗಿಲ್ಲ.
ಇಲ್ಲಿನ ಭಗವತಿ ಮಂದಿರದಲ್ಲಿ ರಾಮನವಮಿಯನ್ನು 1990 ರ ಮೊದಲು ಆಚರಿಸಲಾಗುತ್ತಿತ್ತು. ಆದರೆ ನಂತರ ಆ ದೇವಾಲಯವನ್ನು ಮುಚ್ಚಲಾಗಿತ್ತು. ಮುಂದೆ ಯಾವತ್ತಾದರೂ ಪರಿಸ್ಥಿತಿ ಸುಧಾರಿಸಿದರೆ ರಾಮನವಮಿ ಆಚರಿಸೋಣ ಎನ್ನುವ ಆಶಾಭಾವನೆ ಅಲ್ಲಿನವರಲ್ಲಿತ್ತು. ಆದರೆ ಅದಕ್ಕೆ ಕಾಲಕೂಡಿಬರಲು ಮೂರು ದಶಕಗಳೇ ಆಗಿಹೋಗಬೇಕಾಯಿತು. ಕೊನೆಗೂ ಈಗ ಆ ಕಾಲ ಕೂಡಿಬಂತು.
ಸದ್ಯ ಅಲ್ಲಿ ಉಗ್ರಗಾಮಿಗಳ ಉಪಟಳ ನಿಯಂತ್ರಣದಲ್ಲಿ ಇರುವುದರಿಂದ ಕಳೆದ ವರ್ಷ ದೇವಾಲಯವನ್ನು ತೆರೆಯಲಾಗಿತ್ತು. ಈ ಬಾರಿ ಅಲ್ಲಿ ರಾಮ ನವಮಿ ಆಚರಿಸಲಾಗಿದೆ. ಹಿಂದೂ ಮತ್ತು ಮುಸ್ಲಿಮರು ಒಟ್ಟಿಗೆ ಸೇರಿ ರಾಮನವಮಿ ಹಬ್ಬ ಆಚರಿಸಿರುವುದು ಇಲ್ಲಿ ವಿಶೇಷವಾಗಿತ್ತು. 34 ವರ್ಷಗಳ ಬಳಿಕ ರಾಮನವಮಿ ಆಚರಿಸುವ ಅವಕಾಶ ಸಿಕ್ಕಿರುವುದರ ಬಗ್ಗೆ ದೇಗುಲದ ಮುಖ್ಯಸ್ಥ ಯಜೀನ್ ಭಟ್ ಹರ್ಷ ವ್ಯಕ್ತಪಡಿಸಿದ್ದಾರೆ.
Leave A Reply