ಕಠಿಣ ಕ್ರಮ ಎಂದರೆ ಇದು… ಕರ್ನಾಟಕದಲ್ಲಿ ಅತ್ಯಾಚಾರ ಮಾಡಿ ಕೊಲೆ ಮಾಡಿದವ ಆವತ್ತೇ ಎನ್ಕೌಂಟರ್!

ಕರ್ನಾಟಕದ ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಪ್ರಕರಣದ ಆರೋಪಿಯು ಪೊಲೀಸರ ಗುಂಡೇಟಿಗೆ ಸತ್ತಿದ್ದಾನೆ. ಆರೋಪಿಯನ್ನು ಬಿಹಾರ ಮೂಲದ ಆರೋಪಿ ರಕ್ಷಿತ ಕುಮಾರ ಕ್ರಾಂತಿ ಎಂದು ಗುರುತಿಸಲಾಗಿದೆ. ಮಹಿಳಾ ಪಿಎಸ್ ಐ ಅನ್ನಪೂರ್ಣ ಅವರ ಗುಂಡೇಟಿಗೆ ತೀವ್ರವಾಗಿ ಗಾಯಗೊಂಡಿದ್ದ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಪ್ರಕರಣ ಏನು?
ಹುಬ್ಬಳ್ಳಿ ಅಶೋಕ ನಗರದ ವಿಜಯನಗರ ಬಳಿ ಮನೆ ಬಳಿ ಆಟವಾಡುತ್ತಿದ್ದ 5 ವರ್ಷದ ಬಾಲಕಿಗೆ ತಿಂಡಿ ಕೊಡಿಸುವ ಆಸೆ ತೋರಿಸಿ ಸೈಕೋಪಾತ್ ರಕ್ಷಿತ ಕುಮಾರ ಕ್ರಾಂತಿ ಆಕೆಯನ್ನು ಎತ್ತಿಕೊಂಡು ಹೋಗಿದ್ದ. ಬಾಲಕಿಯನ್ನು ಆರೋಪಿ ಕರೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಬಳಿಕ ಶೆಡ್ ವೊಂದಕ್ಕೆ ಮಗುವನ್ನು ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಗು ಕಿರುಚಿಕೊಂಡಿದೆ. ಮಗು ಚೀರಾಟದಿಂದ ವಿಷಯ ಬಹಿರಂಗಗೊಳ್ಳುತ್ತೆ ಎಂದು ಹೆದರಿದ ಆರೋಪಿ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ನಂತರ ಮಗುವಿನ ತಾಯಿ ಬಂದಾಗ ಮಗು ಕಣ್ಮರೆಯಾಗಿದ್ದು, ಹುಡುಕಿದಾಗ ಅಲ್ಲಿಯೇ ಪಕ್ಕದ ಶೌಚಾಲಯದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ನಂತರ ಅಕ್ಕಪಕ್ಕದಲ್ಲಿದ್ದವರು ಸ್ಥಳಕ್ಕೆ ಧಾವಿಸಿದ್ದಾರೆ.
ಕೃತ್ಯ ಖಂಡಿಸಿ ಸ್ಥಳೀಯರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು. ಆರೋಪಿಯನ್ನು ತಕ್ಷಣ ಗಲ್ಲಿಗೆ ಏರಿಸಬೇಕು ಅಥವಾ ನಮ್ಮ ಕೈಯಲ್ಲಿ ಕೊಡಬೇಕು, ನಾವು ಒಂದು ಗತಿ ಕಾಣಿಸುತ್ತೇವೆ ಎಂದು ಆಗ್ರಹಿಸಿದ್ದರು. ಸಾರ್ವಜನಿಕ ತೀವ್ರ ಪ್ರತಿಭಟನೆಯಿಂದ ಒತ್ತಡಕ್ಕೊಳಗಾದ ಪೊಲೀಸ್ ಆಯುಕ್ತರು, ಆರೋಪಿ ಪತ್ತೆಗೆ 5 ತಂಡಗಳನ್ನು ರಚಿಸಿ ಶೋಧಕಾರ್ಯ ಶುರು ಮಾಡಿದರು. ಆರೋಪಿ ವಾಸವಾಗಿದ್ದ ಅಲ್ಲಿನ ತಾರಿಹಾಳ ಬ್ರಿಡ್ಜ್ ಬಳಿಯ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದಾಗ ಆತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಪ್ರಯತ್ನ ನಡೆಸಿದ್ದ. ಪೊಲೀಸ್ ವಾಹನಕ್ಕೆ ಕಲ್ಲೆಸೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದ.
ಈ ವೇಳೆ ಅಶೊಕನಗರ ಮಹಿಳಾ ಠಾಣೆಯ ಮಹಿಳಾ ಪಿಎಸ್ ಐ ಅನ್ನಪೂರ್ಣಾ 2 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಸೆರೆಂಡರ್ ಆಗುವಂತೆ ಎಚ್ಚರಿಸಿದ್ದಾರೆ. ಆದರೆ ಕಲ್ಲು ಎಸೆದು ಪರಾರಿಯಾಗುವ ಪ್ರಯತ್ನ ಮುಂದುವರೆಸಿದ್ದಾನೆ. ನಂತರ ಪಿಎಸ್ ಐ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ನಂತರ ಇನ್ನೊಂದು ಗುಂಡು ಹೊಡೆದಿದ್ದು, ಅದು ಬೆನ್ನಿಗೆ ತಾಗಿ ಆರೋಪಿ ತೀವ್ರವಾಗಿ ಗಾಯಗೊಂಡಿದ್ದಾನೆ. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಒಟ್ಟಿನಲ್ಲಿ ಈ ಘಟನೆಯಿಂದ ಸಾರ್ವಜನಿಕ ವಲಯದಲ್ಲಿ ಪೊಲೀಸ್ ಅಧಿಕಾರಿ ಅನ್ನಪೂರ್ಣ ಹಾಗೂ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರ ಕ್ರಮದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಹಿಂದೆ ಇಂತಹ ಘಟನೆಗಳಾದಾಗ ಜನಪ್ರತಿನಿಧಿಗಳಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎನ್ನುವ ಹೇಳಿಕೆ ಬರುತ್ತಿತ್ತು. ಆಡಳಿತ ಪಕ್ಷದವರಿಂದ ಪ್ರತಿ ಬಾರಿ ಅದೇ ಮಾತು ಹೇಳಲಾಗುತ್ತಿತ್ತು. ಈ ಬಾರಿ ಪ್ರಥಮ ಬಾರಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಜನರು ಶ್ಲಾಘಿಸಿದ್ದಾರೆ.
Leave A Reply