ಹಳೇ ಜೈಲಿನಿಂದ ಜಾಮರ್ ಕಾಟ.. ಬೂತ್ ಬಂಗ್ಲೆಯಂತಾದ ಹೊಸ ಜೈಲು ಕಟ್ಟಡ..!

ಸರಕಾರ ನಡೆಸುವವರಿಗೆ ಪ್ರಬಲ ಇಚ್ಚಾಶಕ್ತಿ ಇದ್ದಿದ್ದರೆ ಇಷ್ಟೊತ್ತಿಗೆ ಮಂಗಳೂರು ನಗರದ ನಟ್ಟನಡುವಿನಲ್ಲಿರುವ ಜಿಲ್ಲಾ ಕಾರಾಗೃಹ ಮಂಗಳೂರಿನ ಹೊರವಲಯದ ಬಂಟ್ವಾಳ ವ್ಯಾಪ್ತಿಯ ಮುಡಿಪು ಸಮೀಪದ ಚೆಲ್ಲೂರು – ಕುರ್ನಾಡು ಪ್ರದೇಶದಲ್ಲಿ ಕಾರ್ಯಾಚರಿಸಬೇಕಿತ್ತು. ಆದರೆ ಹಾಗೆ ಆಗಿಲ್ಲ. ಬೆಳೆಯುತ್ತಿರುವ ಮಂಗಳೂರು ನಗರದ ನಡುವೆ ಜೈಲು ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಸುತ್ತಮುತ್ತಲೂ ಮೂರು ಕಿ.ಮೀ ವ್ಯಾಪ್ತಿಯ ಜನರಿಗೆ ತುಂಬಾ ತೊಂದರೆ ಆಗುತ್ತಿದೆ. ಜೈಲಿನಲ್ಲಿ ಕೈದಿಗಳು ಮೊಬೈಲ್ ಫೋನ್ ಬಳಸಬಾರದು ಎನ್ನುವ ಕಾರಣ 5ಜಿ ಜಾಮರ್ ಅಳವಡಿಸಲಾಗಿದೆ.
ಇದರಿಂದ ಏನಾಗಿದೆ ಎಂದರೆ ಜೈಲಿನ ಸುತ್ತಮುತ್ತಲಿನ ವಾಣಿಜ್ಯ ಕಟ್ಟಡಗಳಲ್ಲಿ ಉದ್ಯಮ ನಡೆಸುವವರಿಗೆ ಫೋನ್ ಸಂಪರ್ಕ, ಇಂಟರ್ ನೆಟ್ ಸಂಪರ್ಕ ಇಲ್ಲದೇ ವಿಪರೀತ ತೊಂದರೆಯಾಗುತ್ತಿದೆ. ಇದರಿಂದ ಅವರ ವ್ಯಾಪಾರ, ವ್ಯವಹಾರಕ್ಕೂ ನಿರಂತರವಾಗಿ ನಷ್ಟ ಉಂಟಾಗುತ್ತಿದೆ. ಇನ್ನು ಜೈಲ್ ಆಸುಪಾಸಿನಲ್ಲಿ ಬ್ಯಾಂಕುಗಳು, ಶಿಕ್ಷಣ ಸಂಸ್ಥೆಗಳು, ವಸತಿ ಸಮುಚ್ಚಯಗಳು ಕೂಡ ಇದ್ದು, ಜನರು ಈ ಜಾಮರ್ ನಿಂದ ಸಾಕಷ್ಟು ಹೈರಾಣಾಗಿದ್ದಾರೆ. ಈ ಬಗ್ಗೆ ಶಾಸಕರಾದ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಸಾಕಷ್ಟು ಹೋರಾಟಗಳು ನಡೆದಿದ್ದು, ರಾಜ್ಯ ಸರಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣಿಸುವುದಿಲ್ಲ. ಹಾಗಾದರೆ ಹಳೆ ಜೈಲು ಶಿಫ್ಟ್ ಆಗುವುದು ಯಾವಾಗ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
2009 ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಜೈಲು ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದರೆ ಅದರ ವಿಸ್ತ್ರತ ವರದಿ (ಡಿಪಿಆರ್) ತಯಾರಾದದ್ದು 2016 – 17 ರಲ್ಲಿ. ಅದರ ನಂತರ ಕಾಮಗಾರಿಯ ಟೆಂಡರ್ ಕರೆದದ್ದು 2018 – 19 ರಲ್ಲಿ. ಇದೆಲ್ಲಾ ಮುಗಿದು ಕಾಮಗಾರಿ 2020 ರಲ್ಲಿ ಆರಂಭವಾಯಿತು. ಈಗ ಐದು ವರ್ಷಗಳಲ್ಲಿ ಇಲ್ಲಿ ಬೃಹತ್ ಕಟ್ಟಡ ಎದ್ದು ನಿಂತಿದ್ದು, ಕಾಮಗಾರಿ ಸಂಪೂರ್ಣಗೊಳ್ಳಲು ಅನುದಾನದ ಅವಶ್ಯಕತೆ ಇರುವುದರಿಂದ ಕೆಲಸಕಾರ್ಯಗಳು ನಿಂತಿವೆ. ಆರಂಭದಲ್ಲಿ ಇನ್ನೂರು ಕೋಟಿಯ ಬಜೆಟ್ ಈಗ 390 ಕೋಟಿ ರೂಪಾಯಿಗಳಿಗೆ ತಲುಪಿದ್ದು, ರಾಜ್ಯ ಸರಕಾರ ಹಣ ಬಿಡುಗಡೆಗೆ ಮೀನಾಮೇಷ ಎಣಿಸುತ್ತಿದೆ.
ರಾಜ್ಯ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಗುವ ಹಂತದಲ್ಲಿದೆ. ಈಗಾಗಲೇ ಹಣ ಬಿಡುಗಡೆಯಾಗಿದ್ದರೆ ಕಾಮಗಾರಿ ಮುಗಿದು ಜೈಲು ಲೋಕಾರ್ಪಣೆಯಾಗಬೇಕಿತ್ತು. ಯಾಕೆಂದರೆ ಈ ಜೈಲು ನಿರ್ಮಾಣವಾಗುತ್ತಿರುವುದು ರಾಜ್ಯದ ಕಾಂಗ್ರೆಸ್ ಪ್ರಭಾವಿ ನಾಯಕ, ಮಾಜಿ ಮಂತ್ರಿ, ಶಾಸಕ, ವಿಧಾನಸಭಾಧ್ಯಕ್ಷರಾದ ಯು. ಟಿ. ಖಾದರ್ ಅವರ ಸ್ವಕ್ಷೇತ್ರದಲ್ಲಿ. 63 ಎಕರೆಯಷ್ಟು ಪ್ರದೇಶದಲ್ಲಿ ಬೃಹದಾಕಾರವಾಗಿ ಎದ್ದು ನಿಂತಿರುವ ಕಟ್ಟಡದಲ್ಲಿ ಒಂದು ಸಾವಿರ ಕೈದಿಗಳನ್ನು ಬಂಧಿಸಿಡುವಷ್ಟು ವಿಶಾಲವಾದ ಸ್ಥಳಾವಕಾಶ ಇದೆ. ಇಲ್ಲಿ ಕೈದಿಗಳಿಗೆ ಪ್ರಾಥಮಿಕ ಚಿಕಿತ್ಸೆ ಜೊತೆ ಒಳರೋಗಿಗಳಿಗೆ ಆಸ್ಪತ್ರೆ, ವಿಡಿಯೋ ಕಾನ್ಫರೆನ್ಸ್, ಆಡಳಿತ ಕಚೇರಿ, ಕಾರ್ಯಗಾರ ಸಭಾಂಗಣ, ಸಿಬ್ಬಂದಿಗಳಿಗೆ ಕೊಠಡಿ ಮತ್ತು ಅಧಿಕಾರಿಗಳ ವಸತಿ ಗೃಹವೂ ಇರಲಿದೆ. ಈಗ ಈ ಕಟ್ಟಡ ಅತ್ತ ಸಂಪೂರ್ಣವೂ ಆಗದೇ, ಇತ್ತ ಅರ್ಧಂಬರ್ಧ ಸ್ಥಿತಿಯಲ್ಲಿ ಭೂತ ಬಂಗ್ಲೆಯಂತಾಗಿದೆ. ಹತ್ತಿರದಿಂದ ನೋಡಿದರೆ ನಿಶ್ಯಕ್ತಿಗೆ ಒಳಗಾದಂತೆ ಕಾಣುತ್ತಿದೆ. ಇದರಿಂದ ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುವ ಸಾಧ್ಯತೆಯನ್ನು ಕೂಡ ತಳ್ಳಿ ಹಾಕುವಂತಿಲ್ಲ.
ಹೊಸ ಜೈಲು ಘೋಷಣೆಯಾಗಿ ಹದಿನೈದು ವರ್ಷ ಮುಕ್ತಾಯವಾಗುತ್ತಿದ್ದು, ಕಾಮಗಾರಿ ಆರಂಭವಾಗಿ ಐದು ವರ್ಷಗಳು ಸಮೀಪಿಸುತ್ತಿದ್ದು, ಮಂಗಳೂರು ಜೈಲು ಯಾವಾಗ ಪೂರ್ಣವಾಗಿ ಹಳೆ ಜೈಲಿನ ಪರಿಸರದ ನಾಗರಿಕರ ಸಂಕಷ್ಟ ಯಾವಾಗ ಮುಕ್ತಾಯವಾಗುತ್ತದೆ ಎನ್ನುವುದಕ್ಕೆ ಯಾರ ಬಳಿಯೂ ಉತ್ತರ ಇಲ್ಲ. ಯಾಕೆಂದರೆ ಕಟ್ಟಡ ಮುಗಿಸಲು ಕೋಟ್ಯಾಂತರ ರೂಪಾಯಿ ಹಣ ಬೇಕು. ಅದು ಬಿಡುಗಡೆಯಾಗಲು ದೊಡ್ಡ ಮಟ್ಟದ ಪ್ರಯತ್ನ ಆಡಳಿತ ಪಕ್ಷದ ಜನಪ್ರತಿನಿಧಿಗಳು ಮಾಡಬೇಕು. ಯುಟಿ ಖಾದರ್ ಅವರಿಗೆ ಈ ವಿಷಯದಲ್ಲಿ ಎಷ್ಟು ಆಸಕ್ತಿ ಎನ್ನುವುದರ ಮೇಲೆ ಕಾಮಗಾರಿಯ ಭವಿಷ್ಯ ನಿಂತಿದೆ. ಇಲ್ಲದಿದ್ದರೆ ಇದು ಇನ್ನೊಂದು ಒಂಭತ್ತು ಕೆರೆ ಆಗುತ್ತಾ? ಕಾಲವೇ ಉತ್ತರ ನೀಡಬೇಕು.
Leave A Reply