ಪ್ರತಿಭಟನೆಯ ಹೆಸರಿನಲ್ಲಿ ರಸ್ತೆ ಬಂದ್ ಮಾಡುವಂತಿಲ್ಲ – ಹೈಕೋರ್ಟ್ ಸೂಚನೆ

ಸರ್ವೋಚ್ಚ ನ್ಯಾಯಾಲಯ ಪ್ರತಿಭಟನೆಯ ವಿಷಯದಲ್ಲಿ ಸ್ಪಷ್ಟವಾದ ನಿಯಮಗಳನ್ನು ಹೇಳಿದೆ. ಕಾನೂನಿನಡಿಯಲ್ಲಿ ಪ್ರತಿಭಟನೆಗೆ ಅನುಮತಿ ದೊರಕಿದ್ದರೆ ನಿಗದಿಪಡಿಸಿದ ಜಾಗದಲ್ಲಿ ಮಾತ್ರ ಪ್ರತಿಭಟನೆ ಮಾಡಬೇಕು. ಒಂದು ವೇಳೆ ಅನುಮತಿ ಇಲ್ಲದಿದ್ದರೆ ಪ್ರತಿಭಟನೆ ಮಾಡುವಂತಿಲ್ಲ. ಆದರೆ ಯಾವುದೇ ಕಾರಣಕ್ಕೂ, ಯಾವುದೇ ಕಾಲಕ್ಕೂ ರಸ್ತೆಯನ್ನು ಬಂದ್ ಅಥವಾ ಬ್ಲಾಕ್ ಮಾಡಿ ಪ್ರತಿಭಟನೆ ಮಾಡುವಂತಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ನ್ಯಾಗಪ್ರಸನ್ನ ಅವರ ಪೀಠ ಆದೇಶಿಸಿದೆ.
ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಮಂಗಳೂರಿನ ಕಣ್ಣೂರು – ಅಡ್ಯಾರ್ ನಲ್ಲಿ ಎಪ್ರಿಲ್ 18 ರಂದು ಪ್ರತಿಭಟನೆಗೆ ಮುಸ್ಲಿಂ ಸಂಘಟನೆಗಳು ನಿರ್ಧರಿಸಿವೆ. ಮಂಗಳೂರು ಕಮೀಷನರ್ ಅವರು ಈ ಪ್ರದೇಶದಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ವಾಹನಗಳ ಸಂಚಾರ ನಿರ್ಭಂದಿಸಿ ಪರ್ಯಾಯ ರಸ್ತೆಗಳನ್ನು ಬಳಸುವಂತೆ ಮಾಧ್ಯಮ ಪ್ರಕಟನೆ ನೀಡಿದ್ದರು. ಇದರ ವಿರುದ್ಧ ಹೈಕೋರ್ಟ್ ನಲ್ಲಿ ವಾದ ಪ್ರತಿವಾದ ನಡೆದು ರಾಷ್ಟ್ರೀಯ ಹೆದ್ದಾರಿ 73 ರನ್ನು ಬಂದ್ ಮಾಡಿ ಪ್ರತಿಭಟನೆ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ರಾಷ್ಟ್ರೀಯ ಹೆದ್ದಾರಿ 73 ಮಂಗಳೂರಿನ ಪ್ರಮುಖ ಹೆದ್ದಾರಿಯಾಗಿದ್ದು, ಇದು ಬಂದ್ ಆದರೆ ವಾಹನ ಸಂಚಾರಕ್ಕೆ, ವ್ಯಾಣಿಜ್ಯ ವ್ಯವಹಾರಕ್ಕೆ ತೊಂದರೆಯಾಗುತ್ತದೆ ಎಂದು ವಾದಿಸಲಾಗಿತ್ತು. ಸುಪ್ರೀಂಕೋರ್ಟ್ ಕೂಡ ಈ ವಿಷಯದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುವಂತಿಲ್ಲ ಎನ್ನುವುದನ್ನು ಆದೇಶಿಸಿರುವುದರಿಂದ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಹೈಕೋರ್ಟ್ ಹೇಳಿದೆ.
ಈ ಬಗ್ಗೆ ಮಂಗಳೂರು ಪೊಲೀಸ್ ಕಮೀಷನರ್ ಅವರಿಗೆ ಹೈಕೋರ್ಟ್ ಆದೇಶವನ್ನು ಲಿಖಿತವಾಗಿ ತಿಳಿಸಲಾಗಿದ್ದು, ಎನ್ ಎಚ್ 73 ರಲ್ಲಿ ಯಾವುದೇ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಆಗದಂತೆ ಕ್ರಮ ವಹಿಸಬೇಕೆಂದು ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ ಮುಂದಿನ ವಿಚಾರಣೆಯಲ್ಲಿ ಎಪ್ರಿಲ್ 23 ಕ್ಕೆ ಮುಂದೂಡಲಾಗಿದೆ.
Leave A Reply