ಟೀಕೆಗಳಿಗೆ ಅಳುಕಬೇಡಿ ಎಂದು ಡಾ. ವಿರೇಂದ್ರ ಹೆಗ್ಗಡೆಯವರಿಗೆ ಧೈರ್ಯ ನೀಡಿದ ಡಿಸಿಎಂ ಡಿಕೆಶಿ!

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆಯವರು ಟೀಕೆಗಳಿಗೆ ಅಂಜಬೇಕಾಗಿಲ್ಲ, ಅಳುಕಬೇಕಾಗಿಲ್ಲ. ನಿಮ್ಮ ಜೊತೆ ನಾವಿದ್ದೇವೆ. ತಮ್ಮ ಹಾಗೂ ಕ್ಷೇತ್ರ ರಕ್ಷಣೆಗೆ ನಾವೆಲ್ಲ ಸಿದ್ಧ. ಟೀಕೆಗಳು ತಾತ್ಕಾಲಿಕವಾಗಿದ್ದು, ಅಲ್ಪಕಾಲದಲ್ಲಿ ಸಾಯುತ್ತವೆ. ನಾವು ಮಾಡುವ ಸೇವಾಕಾರ್ಯಗಳು ಶಾಶ್ವತವಾಗಿರುತ್ತವೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ಕರ್ನಾಟಕದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಅವರು ಧರ್ಮಸ್ಥಳದಲ್ಲಿ ಶ್ರೀ ಉಮಾಮಹೇಶ್ವರ, ಶ್ರೀ ಶಿವಪಾರ್ವತಿ ಮತ್ತು ಶ್ರೀ ಗೌರಿಶಂಕರ ಎಂಬ ಮೂರು ನೂತನ ಕಲ್ಯಾಣ ಮಂಟಪಗಳ ಸಮುಚ್ಚಯವನ್ನು ಉದ್ಘಾಟಿಸಿ ಮಾತನಾಡಿದರು. ಅಧಿಕಾರ ಬರುತ್ತದೆ, ಹೋಗುತ್ತದೆ, ಇಲ್ಲಿ ಯಾವುದೂ ಶಾಶ್ವತವಲ್ಲ. ದೇವರಿಗೂ ಎಲ್ಲರಿಗೂ ಅವಕಾಶ ಕೊಡುತ್ತಾನೆ. ಅದನ್ನು ಸದುಪಯೋಗ ಮಾಡಿ ಉನ್ನತ ಸಾಧನೆ ಮಾಡುವುದು ನಮ್ಮ ಉದ್ದೇಶವಾಗಿರಬೇಕು ಎಂದು ಡಿಕೆ ಶಿವಕುಮಾರ್ ಹೇಳಿದರು.
ದೇವರಲ್ಲಿ ಶ್ರದ್ಧಾ ಭಕ್ತಿಯಿಂದ ನಂಬಿಕೆ ಇಟ್ಟು ಪ್ರಾರ್ಥನೆ ಮಾಡಿದಾಗ ನಮ್ಮ ಇಷ್ಟಾರ್ಥಗಳು ಸುಲಲಿತವಾಗಿ ಈಡೇರುತ್ತವೆ. ಪರಸ್ಪರ ಪ್ರೀತಿ – ವಿಶ್ವಾಸದೊಂದಿಗೆ ಮನುಷ್ಯತ್ವದಿಂದ ಸಾರ್ಥಕ ಜೀವನ ನಡೆಸಿದಾಗ ಮೋಕ್ಷ ಸಾಧನೆ ಸಾಧ್ಯವಾಗುತ್ತದೆ ಎಂದರು.
ಧರ್ಮಾಧಿಕಾರಿ ಡಿ ವಿರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿದ್ದರು. ಉಪಮುಖ್ಯಮಂತ್ರಿ ಡಿ .ಕೆ. ಶಿವಕುಮಾರ್ ಅವರನ್ನು ಹೆಗ್ಗಡೆಯವರು ಕ್ಷೇತ್ರದ ವತಿಯಿಂದ ಗೌರವಿಸಿದರು.
Leave A Reply