ಒಂದು ದೇಗುಲ, ಬಾವಿ, ಸ್ಮಶಾನ- ಹಿಂದೂಗಳಿಗೆ ಭಾಗವತ್ ಏಕತೆ ಮಂತ್ರ!

ಜಾತಿ ತಾರತಮ್ಯಕ್ಕೆ ಅಂತ್ಯ ಹಾಡಿ, ಸಾಮರಸ್ಯ ಬೆಳೆಸಲು ಹಿಂದೂ ಸಮುದಾಯವು ” ಒಂದು ಮಂದಿರ, ಒಂದು ಬಾವಿ, ಒಂದು ಸ್ಮಶಾನ ” ತತ್ವವನ್ನು ಅಳವಡಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಮೋಹನ್ ಭಾಗವತ್ ಅವರು ಕರೆ ನೀಡಿದ್ದಾರೆ.
ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಭಾಗವತ್ ” ಶಾಂತಿಯ ಪ್ರತಿ ಭಾರತ ತನ್ನ ಜವಾಬ್ದಾರಿ ಪೂರೈಸಲು ಸಾಮಾಜಿಕ ಏಕತೆ ಸಾಧಿಸುವುದು ಮುಖ್ಯ. ಸಂಸ್ಕಾರಗಳು ಹಿಂದೂ ಸಮಾಜದ ಮೂಲವಾಗಿದ್ದು, ಸಂಪ್ರದಾಯ, ಸಾಂಸ್ಕೃತಿಕ ಮೌಲ್ಯ ಮತ್ತು ನೈತಿಕ ತತ್ವಗಳುಳ್ಳ ಸಮಾಜವನ್ನು ನಿರ್ಮಿಸಬೇಕು. ರಾಷ್ಟ್ರೀಯತೆ ಮತ್ತು ಸಾಮಾಜಿಕ ಒಗ್ಗಟ್ಟಿನ ಅಡಿಪಾಯವನ್ನು ಭದ್ರಗೊಳಿಸಲು ಹಬ್ಬಗಳ ಸಾಮೂಹಿಕ ಆಚರಣೆ ಅಗತ್ಯ ಎಂದು ಹೇಳಿದರು. ಅವರು ತಮ್ಮ ಸ್ವಯಂ ಸೇವಕರಿಗೆ ಎಲ್ಲಾ ಜಾತಿ ವರ್ಗದವರೊಂದಿಗೆ ಮುಕ್ತವಾಗಿ ಬೆರೆಯಲು ಕರೆ ನೀಡಿ ಬೇರೆ ಜಾತಿಯವರನ್ನು ಕೂಡ ನಿಮ್ಮ ಮನೆಯ ಕಾರ್ಯಕ್ರಮಗಳಿಗೆ ಆಮಂತ್ರಿಸಿ, ಈ ಮೂಲಕ ತಳಮಟ್ಟದಲ್ಲಿಯೂ ಪ್ರೀತಿ, ವಿಶ್ವಾಸ ಗಟ್ಟಿಯಾಗಲಿ ಎಂದು ಕಿವಿ ಮಾತು ಹೇಳಿದರು.
ಹಿಂದೂಗಳು ಜಾತಿ, ಜಾತಿಗಳ ನಡುವೆ ಒಡೆದು ಹೋಗಿರುವುದರಿಂದ ಒಗ್ಗಟ್ಟಿನ ಕೊರತೆ ಇದೆ ಎನ್ನುವ ಅಂಶಗಳು ಭಾಗವತ್ ಅವರ ಹೇಳಿಕೆಯಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ. ಹಿಂದೂಗಳಲ್ಲಿರುವ ಅನೇಕ ಜಾತಿಗಳು, ಆ ಜಾತಿಗಳಲ್ಲಿರುವ ಅನೇಕ ದೇವಾಲಯಗಳು, ಆ ದೇವಾಲಯಗಳಲ್ಲಿರುವ ಅನೇಕ ಆಚರಣೆಗಳು, ಆಯಾ ಆಚರಣೆಗಳಲ್ಲಿ ಆಯಾ ಜಾತಿಯವರು ಮಾತ್ರ ಭಾಗವಹಿಸುವುದರ ಬದಲು ಎಲ್ಲಾ ಜಾತಿಯವರು ಎಲ್ಲಾ ಆಚರಣೆಗಳಲ್ಲಿ ಭಾಗವಹಿಸುವುದರಿಂದ ಪರಸ್ಪರ ಏಕತೆ ಉಂಟಾಗುತ್ತದೆ ಎನ್ನುವ ವಿಷಯವನ್ನು ಅವರು ಮತ್ತೊಮ್ಮೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಇಲ್ಲದೇ ಹೋದರೆ ಕೆಲವರು ನಮ್ಮನ್ನು ವಿಭಜಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎನ್ನುವುದು ಅವರ ಒಟ್ಟು ಮಾತಿನ ತಾತ್ಪರ್ಯವೂ ಆಗಿರಬಹುದು.
ಆದರೆ ಈ ನಡುವೆ ಭಾರತೀಯ ಜನತಾ ಪಾರ್ಟಿ ಹಾಗೂ ಆರ್ ಎಸ್ ಎಸ್ ವಕ್ಫ್ ತಿದ್ದುಪಡಿ ತರುವ ಮೂಲಕ ಜನರ ನಡುವೆ ಬಿರುಕು ಉಂಟು ಮಾಡಿವೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
Leave A Reply