ನಡೆಯಲಿರುವ ಸೈನಿಕ ಚಟುವಟಿಕೆಗಳನ್ನು ಲೈವ್ ಬಿತ್ತರಿಸದಂತೆ ಮಾಧ್ಯಮಗಳಿಗೆ ಕೇಂದ್ರ ಸೂಚನೆ!

ಈಗಿನ ಆಧುನಿಕ ಮಾಧ್ಯಮಗಳು ಹೇಗಿರುತ್ತವೆ ಎಂದರೆ ಎಲ್ಲವನ್ನು ತಾವೇ ಮೊದಲು ತೋರಿಸಬೇಕೆಂಬ ಧಾವಂತ ಇರುತ್ತದೆ. ಆದ್ದರಿಂದ ಸ್ಪರ್ಧಾ ಮನೋಭಾವದಲ್ಲಿ ಒಂದಕ್ಕಿಂತ ಒಂದು ವೇಗದಲ್ಲಿ ತೋರಿಸುವುದಕ್ಕೆ ಟಿವಿ ಮಾಧ್ಯಮಗಳು ಮುಂದಾಗುತ್ತವೆ. ಯಾವ ವಾಹಿನಿ ಎಷ್ಟು ರಸವತ್ತಾಗಿ ತೋರಿಸುತ್ತದೆ ಎನ್ನುವುದರ ಮೇಲೆ ವೀಕ್ಷಕರು ಅದನ್ನು ನೋಡಲು ಶುರು ಮಾಡುತ್ತಾರೆ. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಕುತೂಹಲಕಾರಿಯಾಗಿ ಸುದ್ದಿ ತೋರಿಸಬೇಕೆಂಬ ಹಪಾಹಪಿ ಎಲ್ಲಾ ಟಿವಿ ವಾಹಿನಿಗಳಲ್ಲಿ ಇರುತ್ತದೆ. ಇದರಿಂದ ಏನಾಗುತ್ತದೆ ಎಂದರೆ ಯಾವುದೇ ಸೂಕ್ಷ್ಮ ವಿಚಾರವಾದರೂ ಕೂಡ ಎಲ್ಲವೂ ಬಟ್ಟಾಬಯಲಾಗಿ ಹೋಗುತ್ತದೆ. ಇದರಿಂದ ದೇಶವಿರೋಧಿಗಳಿಗೆ ಅನುಕೂಲವಾಗುತ್ತದೆ ಮತ್ತು ದೇಶಕ್ಕೆ ನಷ್ಟವಾಗುತ್ತದೆ. ನಾವೀಗ ಹೇಳ್ತಾ ಇರುವುದೇ ಯುದ್ಧದ ಬಗ್ಗೆ.
ಹೌದು. ಭಾರತದ ಕಾಶ್ಮೀರದಲ್ಲಿ ಪಹಲ್ಗಾಮ್ ನಲ್ಲಿ ವಿಹರಿಸುತ್ತಿದ್ದ ಪ್ರವಾಸಿಗರನ್ನು ಗುರಿಯಾಗಿಟ್ಟು ಉಗ್ರರು ನಡೆಸಿದ ಹತ್ಯಾಕಾಂಡದ ವಿರುದ್ಧ ಭಾರತ ಸಮರ ಸಾರುವ ಎಲ್ಲಾ ಸಿದ್ಧತೆಗಳು ಅಂತಿಮಗೊಂಡಂತೆ ಮೇಲ್ನೋಟಕ್ಕೆ ಭಾಸವಾಗುತ್ತಿದೆ. ಈ ಹಂತದಲ್ಲಿ ಯುದ್ಧದ ತರಹ ಏನಾದರೂ ಗಡಿಯಲ್ಲಿ ಸಂಭವಿಸಿದರೆ ಆಗ ಅಲ್ಲಿ ಟಿವಿ ವಾಹಿನಿಗಳು ಧಾವಿಸುತ್ತವೆ. ವಾಹಿನಿಗಳ ವರದಿಗಾರರು ಯುದ್ಧಭೂಮಿಯಲ್ಲಿಯೇ ನಿಂತುಕೊಂಡು ಅದರ ಕಾಮೆಂಟರಿ ಕೊಡಲು ಆರಂಭಿಸುತ್ತಾರೆ. ಇದರಿಂದ ಏನಾಗುತ್ತದೆ ಎಂದರೆ ದೇಶದ ಹೊರಗೆ ಮತ್ತು ಒಳಗೆ ಕುಳಿತುಕೊಂಡ, ಸೈನಿಕರ ತಂತ್ರಗಳಿಗೆ ವಿರುದ್ಧ ಷಡ್ಯಂತ್ರಗಳನ್ನು ಹೇಗೆ ಹೂಡಬೇಕೆಂದು ತಲೆಕೆಡಿಸಿಕೊಳ್ಳುತ್ತಿದ್ದವರಿಗೆ ಟಿವಿ ವಾಹಿನಿಗಳ ಈ ಲೈವ್ ಕವರೇಜ್ ನಿಂದ ತುಂಬಾ ಅನುಕೂಲವಾಗುತ್ತದೆ.
ಮುಂಬೈ ದಾಳಿ, ಕಾರ್ಗಿಲ್ ಯುದ್ಧ, ಕಂದಾಹಾರ್ ಹೈಜಾಕ್ ಸಹಿತ ವಿವಿಧ ಘಟನೆಗಳ ಸಂದರ್ಭದಲ್ಲಿ ಟಿವಿ ವಾಹಿನಿಗಳು ಅದರ ಲೈವ್ ಕವರೇಜ್ ಮಾಡುತ್ತಿದ್ದ ಕಾರಣ ಭಯೋತ್ಪಾದಕರಿಗೆ ಯಾವಾಗ ಯಾವ ಹೆಜ್ಜೆ ಇಡಬೇಕು ಎನ್ನುವುದರ ಸವಿವರಗಳನ್ನು ಗಡಿಯಾಚೆಯಲ್ಲಿ ಕುಳಿತುಕೊಂಡೇ ಮಾಸ್ಟರ್ ಮೈಂಡ್ ಗಳು ನೀಡುತ್ತಿದ್ದರು ಎನ್ನುವುದು ಸಾಬೀತಾಗಿದೆ. ಅದರಿಂದ ಭಾರತದ ರಕ್ಷಣಾ ವ್ಯೂಹಕ್ಕೆ ತೊಂದರೆಯಾಗಿದೆ. ಅದ್ದರಿಂದ ಆದಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡೇ ಈ ಬಾರಿ ಕೇಂದ್ರ ಸರಕಾರ ನಿರ್ದಿಷ್ಟ ಸೂಚನೆಯನ್ನು ನೀಡಿದೆ. ವಾರ್ತಾ ಇಲಾಖೆ ಸುತ್ತೋಲೆಯನ್ನು ಹೊರಡಿಸಿದ್ದು ಯಾವುದೇ ಯುದ್ಧ ಸಂಬಂಧಿ ಅಥವಾ ರಕ್ಷಣಾ ಕಾರ್ಯಪಡೆಗಳ ಚಲನವಲನಗಳ ಸುದ್ದಿಯನ್ನು ತೋರಿಸುವುದಕ್ಕೆ ನಿರ್ಬಂಧ ವಿಧಿಸಿದೆ.
ಏಪ್ರಿಲ್ 26 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ” ದೇಶದ ಹಿತಾಸಕ್ತಿಗಾಗಿ ಮಾಧ್ಯಮಗಳು, ವಾರ್ತಾ ಏಜೆನ್ಸಿಗಳು, ಸಾಮಾಜಿಕ ಜಾಲತಾಣಗಳು ಈ ಸಂದರ್ಭದಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕು. ದೇಶದ ಸುರಕ್ಷತೆಯ ವಿಷಯದಲ್ಲಿ ಯಾವುದೇ ಸಣ್ಣ ವಿಷಯವೂ ಬಹಳ ಪ್ರಮುಖವಾಗಿದ್ದು, ದೇಶದ ಕಾನೂನು ಮತ್ತು ನಿಯಮಗಳ ಅಡಿಯಲ್ಲಿ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕು” ಎನ್ನುವ ಅರ್ಥದ ಮಾತುಗಳನ್ನು ಹೇಳಿವೆ.
ಇನ್ನು ಯಾವುದೇ ನೇರ ದೃಶ್ಯಾವಳಿಗಳನ್ನು ಪ್ರಸಾರಣ ಮಾಡುವುದು, ನಂಬಿಕಾರ್ಹ ಮೂಲಗಳಿಂದ ತಿಳಿದು ಬಂದ ಮಾಹಿತಿ ಎಂದು ತಿಳಿಸುವುದು ಹೀಗೆ ಯಾವುದೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದನ್ನು ನಿರ್ಭಂದಿಸಲಾಗಿದೆ. ಇನ್ನು ಯಾವುದೇ ಸೂಕ್ಷ್ಮ ವಿಚಾರಗಳನ್ನು, ಬೇರೆ ಬೇರೆ ಆಯಾಮಗಳನ್ನು ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದರಿಂದ ರಾಷ್ಟ್ರೀಯ ಹಿತಾಸಕ್ತಿಗೆ ತೊಂದರೆ ಉಂಟಾಗುತ್ತದೆ ಎನ್ನುವುದರ ಅರಿವಿರಲಿ ಎಂದು ಕೂಡ ಹೇಳಲಾಗಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಕೇಬಲ್ ಟೆಲಿವಿಷನ್ ನೆಟ್ ವರ್ಕ್ ( ತಿದ್ದುಪಡಿ) ನಿಯಮ, 2021 ರ ನಿಯಮ 6 (1) ಇದರಲ್ಲಿ ” ಉಗ್ರ ನಿಗ್ರಹದ ಕಾರ್ಯಾಚಾರಣೆಯಲ್ಲಿ ಯೋಧರ ಚಲನವಲನಗಳ ಬಗ್ಗೆ, ಕಾರ್ಯಚಟುವಟಿಕೆಗಳ ಬಗ್ಗೆ ಯಾವುದೇ ಮಾಹಿತಿಯನ್ನು ನೇರಪ್ರಸಾರದಲ್ಲಿ ನೀಡುವುದು ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ. ಯಾವುದೇ ಕಾರ್ಯಾಚರಣೆಯ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕಂಡುಬಂದರೆ ಕಾಲಕಾಲಕ್ಕೆ ಮಾಧ್ಯಮಗೋಷ್ಟಿ ಅಥವಾ ಪ್ರಕಟನೆಯ ಮೂಲಕ ತಿಳಿಸುತ್ತಾರೆ” ಎಂದು ಹೇಳಲಾಗಿದೆ.
Leave A Reply