ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!

ಬಡತನ ಎನ್ನುವುದು ಈ ಹೆಣ್ಣುಮಗಳ ಪಾಲಿಗೆ ವಿದ್ಯೆ ಪಡೆಯಲು ಅಡ್ಡಿಯಾಗಲೇ ಇಲ್ಲ. ಕಷ್ಟಪಟ್ಟು ವಿದ್ಯೆ ಕಲಿತು ಈಗ ತನ್ನ ಪೋಷಕರಿಗೆ, ಶಾಲೆಗೆ ಹೆಮ್ಮೆ ಉಂಟು ಮಾಡಿದ್ದಾಳೆ. ಈ ಹೆಣ್ಣುಮಗಳ ಹೆಸರು ಅಪೇಕ್ಷಾ. ಕೂಲಿ ಮಾಡಿ, ಬೀಡಿ ಕಟ್ಟಿ ಜೀವನ ಸಾಗಿಸುವ ಬಡ ಕುಟುಂಬದ ವಿದ್ಯಾರ್ಥಿನಿ. ಮಂಗಳೂರು ತಾಲೂಕಿನ ಕೈರಂಗಳ ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾ ಕೇಂದ್ರದ ವಿದ್ಯಾರ್ಥಿನಿ.
ವಿದ್ಯಾನಗರದ ಪುಂಡಿಕಾಯಿ ನಿವಾಸಿ ಅಪೇಕ್ಷಾ ಹತ್ತನೇ ತರಗತಿಯ ಪರೀಕ್ಷೆಯಲ್ಲಿ 616 ಅಂದರೆ 98.6 ಶೇಕಡಾ ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 10 ನೇ ಸ್ಥಾನ ಗಳಿಸಿದ್ದಾರೆ. ಈಕೆ ಮುಂದೆ ಕೆಮಿಕಲ್ ಇಂಜಿನಿಯರ್ ಆಗುವ ಗುರಿ ಇಟ್ಟುಕೊಂಡಿದ್ದಾಳೆ. ಈಕೆಯ ತಂದೆ ಚಂದ್ರಶೇಖರ್ ಕೂಲಿ ಕೆಲಸ ಮಾಡುತ್ತಾರೆ. ತಾಯಿ ಸರಸ್ವತಿ ಬೀಡಿ ಕಟ್ಟುವ ಉದ್ಯೋಗ ಮಾಡುತ್ತಾರೆ. ಇವರ ಏಕೈಕ ಪುತ್ರಿ ಅಪೇಕ್ಷಾ ಬಡತನ ಮೆಟ್ಟಿ ನಿಂತು ಉನ್ನತ ಅಂಕಗಳಿಸಿದ್ದಾಳೆ.
ದಿನದ ಪಾಠವನ್ನು ಅಂದೇ ಓದಿ ಮುಗಿಸುತ್ತಿದ್ದ ಅಪೇಕ್ಷಾ ತರಗತಿಗಳಲ್ಲಿ ತುಂಬಾ ಜಾಣೆ ವಿದ್ಯಾರ್ಥಿನಿಯಾಗಿದ್ದಳು. ಈ ಕುರಿತು ಶಾಲಾ ಸಂಚಾಲಕ ಟಿ.ಜಿ.ರಾಜಾರಾಂ ಭಟ್ ಅವರು ಮಾತನಾಡಿ, ಅಪೇಕ್ಷಾ ಬಡತನವನ್ನು ಅಡ್ಡಿಯೆಂದು ತಿಳಿದುಕೊಳ್ಳದೇ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಶೇಷ ತರಬೇತಿ ಪಡೆದು ಶಾಲೆಗೆ ಕೀರ್ತಿ ತಂದಿದ್ದಳು ಎಂದಿದ್ದಾರೆ. ಒಟ್ಟಿನಲ್ಲಿ ಅಪೇಕ್ಷಾ ಅವರ ಈ ಸಾಧನೆ ವಿದ್ಯಾರ್ಥಿ ಸಮುದಾಯಕ್ಕೆ ಸ್ಫೂರ್ತಿಯಾಗಿದೆ.
Leave A Reply