ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ – ಗೃಹ ಸಚಿವ

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯಾ ಪ್ರಕರಣದ ವಿಚಾರದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಲು ಮಂಗಳೂರಿಗೆ ಆಗಮಿಸಿದ ಗೃಹ ಸಚಿವ ಡಾ. ಜಿ ಪರಮೇಶ್ವರ ಮುಸ್ಲಿಂ ಮುಖಂಡರ ಜೊತೆ ಸಭೆ ನಡೆಸಿದರು. ಅಲ್ಲಿ ಮುಸ್ಲಿಂ ಮುಖಂಡರು ರಾಜ್ಯ ಸರಕಾರದ ನಡೆಯ ಬಗ್ಗೆ ತಮ್ಮ ಅಸಮಾಧಾನವನ್ನು ಕೂಡ ಹೊರಹಾಕಿದ ಘಟನೆ ನಡೆಯಿತು.
ಗೃಹ ಸಚಿವರ ಮಂಗಳೂರು ಭೇಟಿಯ ಸಮಯದಲ್ಲಿ ಅವರು ಸ್ಥಳೀಯ ಜನಪ್ರತಿನಿಧಿಗಳ ಜೊತೆಗಾಗಲಿ, ಹಿಂದೂ ಸಂಘಟನೆಗಳ ಪ್ರಮುಖರ ಜೊತೆಯಾಗಲಿ ಯಾವುದೇ ಸಭೆಯನ್ನು ನಡೆಸದೇ ಇರುವುದಕ್ಕೆ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಹತ್ಯೆಗೊಳಗಾದ ಸಂತ್ರಸ್ತ ಕುಟುಂಬದ ಜೊತೆಯಲ್ಲಿಯೂ ಗೃಹ ಸಚಿವರು ಮಾತನಾಡುವ ಗೋಜಿಗೆ ಹೋಗಿಲ್ಲ. ರಾಜ್ಯ ಸರಕಾರದ ಪರವಾಗಿ ಗೃಹ ಸಚಿವರು ಸುಹಾಸ್ ಹೆತ್ತವರ ಜೊತೆ ನಿಂತು ನೈತಿಕ ಬೆಂಬಲವನ್ನು ನೀಡಿದ್ದರೆ ಸರಕಾರದ ಘನತೆ ಹೆಚ್ಚಾಗುತ್ತಿತ್ತು. ಆದರೆ ಗೃಹ ಸಚಿವರಿಗೆ ಅದು ಅಗತ್ಯ ಎಂದು ಅನಿಸಿರಲಿಲ್ಲವೇನೊ.
ಆದರೆ ಅದಕ್ಕೆ ಈಗ ಡಾ. ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಸುಹಾಸ್ ಮೇಲೆ 5 ಕೇಸುಗಳಿದ್ದ ಕಾರಣ ಆತನ ಮನೆಗೆ ಹೋಗಿಲ್ಲ ಎಂದು ಮಾಧ್ಯಮಗಳಿಗೆ ಸಮುಜಾಯಿಸಿಕೆ ನೀಡಿದ್ದಾರೆ. ಆದರೆ ಸುಹಾಸ್ ಶೆಟ್ಟಿ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು ಎನ್ನುವ ಭರವಸೆಯನ್ನು ನೀಡಿದ್ದಾರೆ. ನ್ಯಾಯ ಒದಗಿಸುವುದು ಎಂದರೆ ನೈಜ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಪೊಲೀಸ್ ಇಲಾಖೆಯಿಂದ ಸೂಕ್ತ ಸಾಕ್ಷಾಧಾರಗಳನ್ನು ನ್ಯಾಯಾಲಯಕ್ಕೆ ಒದಗಿಸುವುದು.
ಇನ್ನು ಒಂದು ವೇಳೆ ಸುಹಾಸ್ ಶೆಟ್ಟಿಯ ಮನೆಗೆ ಹೋದರೆ ರಾಜ್ಯ ಸರಕಾರ ಕಳೆದುಕೊಳ್ಳುವಂತದ್ದು ಏನೂ ಇರಲಿಲ್ಲ. ಅದರ ಬದಲು ಗೃಹ ಸಚಿವರ ಮೇಲೆ, ಸರಕಾರದ ಮೇಲೆ ಸಹಾನುಭೂತಿ ಉಂಟಾಗುತ್ತಿತ್ತು. ಆದರೆ ಅಲ್ಲಿಗೆ ಹೋದರೆ ಒಂದು ಪ್ರಶ್ನೆ ಗ್ಯಾರಂಟಿಯಾಗಿ ಉದ್ಭವಿಸುತ್ತಿತ್ತು. ಅದೇನೆಂದರೆ ಸುಹಾಸ್ ಶೆಟ್ಟಿಯ ಕಾರಿನಲ್ಲಿ ಆವತ್ತು ಸ್ವಯಂರಕ್ಷಣೆಗೆ ಆಯುಧ ಇದ್ದಿದ್ದರೆ ಆತ ಖಂಡಿತ ಬದುಕುತ್ತಿದ್ದ, ಪೊಲೀಸರು ಅವನ ವಾಹನವನ್ನು ಆಗಾಗ ಪರಿಶೀಲಿಸಿ ಆಯುಧ ಇರದಂತೆ ನೋಡಿಕೊಂಡರು. ಅದರಿಂದ ಆತ ಮೇ 1 ರಂದು ನಿರಾಯುಧನಾಗಿದ್ದ ಸುಹಾಸ್ ಶೆಟ್ಟಿ ಸುಲಭವಾಗಿ ಹಂತಕರ ಆಯುಧಗಳಿಗೆ ಬಲಿಯಾದ. ಇಲ್ಲಿ ಪೊಲೀಸರ ವರ್ತನೆ ಸರಿಯಾ ಎನ್ನುವ ಪ್ರಶ್ನೆ ಉದ್ಭವಿಸುತ್ತಿತ್ತು. ಬಹುಶ: ಇದಕ್ಕೆ ಸೂಕ್ತ ಉತ್ತರ ಯಾರ ಬಳಿಯೂ ಇರಲಿಕ್ಕಿಲ್ಲ. ಅದಕ್ಕೆ ಗೃಹ ಸಚಿವರು ಸುಹಾಸ್ ಮನೆಗೆ ಭೇಟಿ ನೀಡಲು ಮನಸ್ಸು ಮಾಡಿರಲಿಕ್ಕಿಲ್ಲ.
ಯಾಕೆಂದರೆ ಸುಹಾಸ್ ಶೆಟ್ಟಿಗೆ ಸಾಯುವ ಕೆಲವು ದಿನಗಳ ಮೊದಲಿನಿಂದಲೂ ಜೀವ ಬೆದರಿಕೆ ಬರುತ್ತಿತ್ತು. ಇಂತಹ ಸಂದರ್ಭದಲ್ಲಿ ಆತನ ಬಳಿ, ವಾಹನದಲ್ಲಿ ಏನಾದರೂ ಆಯುಧ ಇದ್ದಿದ್ದರೆ ಉಳಿಯುವ ಚಾನ್ಸ್ ಇತ್ತಾ, ಅದಕ್ಕೆ ಈಗ ಉತ್ತರ ಯೋಚಿಸಿ ಪ್ರಯೋಜನವಿಲ್ಲ. ಇನ್ನು ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡದಂತೆ ಮುಸ್ಲಿಂ ಮುಖಂಡನಿಂದ ಬೆದರಿಕೆ ಇತ್ತು ಎನ್ನುವ ವಿಷಯವನ್ನು ಗೃಹ ಸಚಿವರು ತಳ್ಳಿ ಹಾಕಿದ್ದಾರೆ.
Leave A Reply