“2 ರೂಪಾಯಿ ಡಾಕ್ಟರ್” ನಿಧನ.. ಜನಸಾಮಾನ್ಯರ ಕಂಬನಿ

ಕೇರಳದ ಕಣ್ಣೂರಿನಲ್ಲಿ ಬಡವರ ಪಾಲಿನ ದೇವರು ಎಂದೇ ಜನರಿಂದ ಪ್ರೀತಿ, ವಿಶ್ವಾಸವನ್ನು ಪಡೆದುಕೊಂಡು ಖ್ಯಾತರಾಗಿದ್ದ ಡಾ. ಎ.ಕೆ. ಗೋಪಾಲ್ ಅವರು ವಯೋಸಹಜ ಅನಾರೋಗ್ಯದಿಂದ 80 ನೇ ವಯಸ್ಸಿನಲ್ಲಿ ನಿಧನರಾದರು. ಇವರು ಕೇರಳದಲ್ಲಿ ಎರಡು ರೂಪಾಯಿ ಡಾಕ್ಟರು ಎಂದೇ ಪ್ರಖ್ಯಾತರಾಗಿದ್ದರು. ಅವರ ಪೂರ್ಣ ಹೆಸರು ಡಾ. ಎ.ಕೆ.ರೈರು ಗೋಪಾಲ್. ಕರ್ನಾಟಕದ ಮಂಡ್ಯದಲ್ಲಿ ಒಬ್ಬ ವೈದ್ಯರು ಈ ಹಿಂದೆ “ಐದು ರೂ ಡಾಕ್ಟರ್” ಎಂದೇ ಪ್ರಸಿದ್ಧರಾಗಿದ್ದರು. ಅದೇ ರೀತಿ ಕೇರಳದಲ್ಲಿ ರೈರು ಗೋಪಾಲ್ ಅವರು ಎರಡು ರೂಪಾಯಿ ವೈದ್ಯರೆಂದೇ ಪ್ರಸಿದ್ಧರು. ಇವರ ಅಗಲುವಿಕೆಗೆ ಕೇರಳದ ಸಿಎಂ ಪಿಣರಾಯಿ ವಿಜಯನ್ ಹಾಗೂ ಆತ್ಮೀಯರು ಕಂಬನಿ ಮಿಡಿದಿದ್ದಾರೆ.
ಕಣ್ಣೂರಿನಲ್ಲಿರುವ ಡಾ. ಗೋಪಾಲ್ ರ ನಿವಾಸಕ್ಕೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದ ಸಿಎಂ, ” ಜನಸ್ನೇಹಿ ವೈದ್ಯರಾಗಿರುವ ಅವರ ಸೇವಾ ಮನೋಭಾವ ಅಸಂಖ್ಯಾತ ರೋಗಿಗಳಿಗೆ ಸಾಂತ್ವನ ನೀಡಿದೆ.” ಎಂದು ಸ್ಮರಿಸಿದರು. ಡಾ. ಗೋಪಾಲ್ ಅವರನ್ನು ಕೇರಳದ ಅತ್ಯುತ್ತಮ ಕುಟುಂಬ ವೈದ್ಯ ಎಂದು ಗುರುತಿಸಿ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ಹಿನ್ನಲೆ: 50 ವರ್ಷಗಳ ಹಿಂದೆ ಕಣ್ಣೂರಿನ ತಮ್ಮ ಮನೆಯಲ್ಲಿಯೇ ಪುಟ್ಟ ಕ್ಲಿನಿಕ್ ಪ್ರಾರಂಭಿಸಿದ್ದ ಡಾ| ಗೋಪಾಲ್, ಕೇವಲ 2 ರೂಪಾಯಿಗೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ಮೂಲಕ ಆರ್ಥಿಕವಾಗಿ ಹಿಂದುಳಿದವರ ಪಾಲಿಗೆ ಆಶಾಕಿರಣವಾಗಿದ್ದರು. ಕ್ರಮೇಣ 2 ರೂ ಡಾಕ್ಟರು ಎಂಬ ಹೆಸರು ಪಡೆದಿದ್ದರು. ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಸಮಯ ಅನುಕೂಲವಾಗಲೆಂದು ಬೆಳಗ್ಗಿನ ಜಾವ 3 ಗಂಟೆಗೆ ಕ್ಲಿನಿಕ್ ತೆರೆದಿರುತ್ತಿದ್ದರು. ಫೀಸ್ ಹಣ ತುಂಬಾ ಕಡಿಮೆ ಇದ್ದ ಕಾರಣ ಇವರ ಕ್ಲಿನಿಕ್ ಹೊರಗೆ ರೋಗಿಗಳು ನೆರೆಯುತ್ತಿದ್ದರು. ದಿನಕ್ಕೆ 300 ರೋಗಿಗಳನ್ನು ಪರೀಕ್ಷಿಸುತ್ತಿದ್ದದ್ದು ಇದೆ. ಕ್ರಮೇಣ ಶುಲ್ಕವನ್ನು 40 – 50 ರೂಗಳಿಗೆ ಏರಿಸಿದರೂ ಬೇರೆ ಆಸ್ಪತ್ರೆಗಳಿಗೆ ಹೋಲಿಸಿದರೆ ತುಂಬಾ ಕಡಿಮೆ ಇತ್ತು. ಅನಾರೋಗ್ಯದ ಕಾರಣದಿಂದ ಕಳೆದ ವರ್ಷದ ಮೇನಲ್ಲಿ ಡಾ| ಗೋಪಾಲ್ ತಮ್ಮ ಕ್ಲಿನಿಕ್ ಮುಚ್ಚಿದ್ದರು.