ರಸ್ತೆಗೆ ಅಡ್ಡಬಂದ ನಾಯಿ- ತಪ್ಪಿಸಲು ಹೋಗಿ ಕಾರು ಪಲ್ಟಿ -ಖ್ಯಾತ ಡಿಜೆ ಮಾರ್ಮಿನ್ ಮೆಂಡೋನ್ಸಾ ನಿಧನ

ರಸ್ತೆಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋದ ವೇಳೆ ಕಾರು ಪಲ್ಟಿಯಾದ ಪರಿಣಾಮ ಓರ್ವ ಸಾವನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಮೂಳೂರು ಸಮೀಪದ ಹಳ್ಳಿ ಮನೆ ಹೋಟೆಲ್ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶನಿವಾರ ನಸುಕಿನ ವೇಳೆ 3 ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಬೆಳ್ಮಣ್ ನ ಮಾರ್ವಿನ್ ಮೆಂಡೊನ್ಸಾ ಎಂದು ಗುರುತಿಸಲಾಗಿದೆ. ಸಿನಿಮಾಟೋಗ್ರಾಫರ್ ಆಗಿದ್ದ ಮರ್ವಿನ್ ಡಿ ಜೆ ವೃತ್ತಿಯನ್ನು ಮಾಡುತ್ತಿದ್ದರು. ಗಾಯಾಳುಗಳಾದ ಕಾರು ಚಾಲಕ ಅಂಬಲಪಾಡಿಯ ಪ್ರಜ್ವಲ್, ಕಾರ್ಕಳದ ಪ್ರಸಾದ್ ಮತ್ತು ವಿಘ್ನೇಶ್ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಕಾರಿನಲ್ಲಿ ಅಂಬಲಪಾಡಿಯಿಂದ ಬೆಳ್ಮಣ್ ಗೆ ಹೋಗುತ್ತಿದ್ದಾಗ ನಾಯಿಯೊಂದು ಕಾರಿಗೆ ಅಡ್ಡ ಬಂದಿದೆ ಎನ್ನಲಾಗಿದೆ. ಇದರ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದೆ ಎಂದು ತಿಳಿದು ಬಂದಿದೆ.
ಅಪಘಾತದಿಂದ ಕಾರು ಸಂಪೂರ್ಣ ಜಖಂಗೊಂಡಿದೆ. ತಕ್ಷಣ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಚ್ಚಿಲ ಹಾಗೂ ಮೂಳೂರಿನ ಎಸ್‌ಡಿಪಿಐ ಆಂಬುಲೆನ್ಸ್ ಗಳು ಗಾಯಾಳುಗಳನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸಿ ದಾಖಲಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಾರ್ವೀನ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ ಆಂಬುಲೆನ್ಸ್ ಚಾಲಕ ಕೆ.ಎಂ.ಸಿರಾಜ್, ಹಮೀದ್ ಹಾಗೂ ಸಾಮಾಜಿಕ ಕಾರ್ಯಕರ್ತ ಜಮಾಲುದ್ದೀನ್ ಉಚ್ಚಿಲ ಸಹಕರಿಸಿದ್ದಾರೆ. ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತಕ್ಕೆ ಒಂದು ದಿನ ಮೊದಲು, ಮರ್ವಿನ್ ತಮ್ಮ ಹೊಸ ಹಾಡನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದರು, ಅದನ್ನು ಅವರು ಎಪಿಡಿ ಮ್ಯೂಸಿಕ್‌ಗಾಗಿ ನಿರ್ಮಿಸಿ ಸ್ವತಃ ಚಿತ್ರೀಕರಣ ಮಾಡಿದ್ದರು. ಅವರು ಛಾಯಾಗ್ರಾಹಕರಾಗಿ ಹಲವಾರು ಕೊಂಕಣಿ ಮತ್ತು ತುಳು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದರು, ತಮ್ಮ ಸೃಜನಶೀಲ ಪ್ರತಿಭೆಯನ್ನು ಹೊಂದಿದ್ದರು.