ಓವರ್‍ಟೇಕ್ ಕಿಲ್ಲರ್ ಇನ್ನು ಜೀವನಪರ್ಯಂತ ಜೈಲಲ್ಲಿ!
ಪಟನಾ : ಪರೀಕ್ಷೆ ಮುಗಿಸಿದ ಸಂಭ್ರಮಕ್ಕೆ ಸ್ನೇಹಿತರೊಂದಿಗೆ ಭಾರೀ ಮೋಜು-ಮಸ್ತಿ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಸ್ವಿಫ್ಟ್ ಕಾರೊಂದು ತನ್ನ ಕಾರನ್ನು ಓವರ್‍ಟೇಕ್ ಮಾಡಿದ್ದಕ್ಕಾಗಿ ಓವರ್‍ಸ್ಪೀಡ್‍ನಿಂದ ಹಿಂಬಾಲಿಸಿ ಅದನ್ನು ಅಡ್ಡಗಟ್ಟಿ ಚಾಲಕನಿಗೆ ಗುಂಡು ಹಾರಿಸಿ ಕೊಂದಿದ್ದ ರಾಕಿ ಯಾದವ್‍ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕಳೆದ ವರ್ಷ ಮೇನಲ್ಲಿ ನಡೆದ ಘಟನೆಯ ಕೂಲಂಕುಷ ವಿಚಾರಣೆ ನಡೆಸಿದ್ದ ಗಯಾ ಜಿಲ್ಲಾ ನ್ಯಾಯಾಲಯ ಬುಧವಾರ ಮಹತ್ವದ ತೀರ್ಪು ನೀಡಿದೆ. ಹತ್ಯೆ ಮಾಡಿ ತನ್ನ ಅಪ್ಪ ಭೂಗತ ಪಾತಕಿ ಬಿಂದಿ ಯಾದವ್‍ಗೆ ರಾಕಿ ಕರೆಮಾಡಿದ್ದ. ಮಗನ ರಕ್ಷಣೆಗೆಂದು ಬಿಂದಿ ತನ್ನ ಗ್ಯಾರೇಜ್‍ನಲ್ಲಿ ಅಡಗಿಸಿಟ್ಟಿದ್ದ. ರಾಕಿ ತಾಯಿ ಮನೋರಮಾ ದೇವಿ ಉಚ್ಚಾಟಿತ ಜೆಡಿಯು ಎಂಎಲ್‍ಸಿಯಾಗಿದ್ದು, ಆಕೆಯು ತನ್ನ ಪ್ರಭಾವ ಬಳಸಿ ಮಗನನ್ನು ರಕ್ಷಿಸಲು ಯತ್ನಿಸಿದ್ದು ಪೊಲೀಸರ ತನಿಖೆಯಲ್ಲಿ ಬಹಿರಂಗಗೊಂಡಿತ್ತು. ಇದನ್ನು ಪರಿಗಣಿಸಿದ ನ್ಯಾಯಾಲಯ ಬಿಂದಿ ಯಾದವ್‍ಗೆ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಜತೆಗೆ ಅಪರಾಧಿ ರಾಕಿಗೆ ರೂ. 1 ಲಕ್ಷ ಹಾಗೂ ಬಿಂದಿಗೆ ರೂ.50ಸಾವಿರ ದಂಡ ಹಾಕಿದೆ.
ಹತ್ಯೆಯಾದ 19 ವರ್ಷದ ಹೈಸ್ಕೂಲ್ ವಿದ್ಯಾರ್ಥಿ ಆದಿತ್ಯ ಸಚ್‍ದೇವ್ ಕುಟುಂಬ ನ್ಯಾಯಾಲಯದ ತೀರ್ಪು ಸ್ವಾಗತಿಸಿ, ಮಗನ ಆತ್ಮಕ್ಕೆ ಶಾಂತಿ ದೊರಕಿದೆ ಎಂದು ಸಮಾಧಾನಪಟ್ಟಿದೆ.
ಮೇ 10, 2016ರಂದು ನಡೆದ ಘಟನೆ ಬಳಿಕ ಸಚ್‍ದೇವ್ ಕುಟುಂಬ ನೀಡಿದ್ದ ದೂರು ಆಧರಿಸಿ ರಾಕಿಗೆ ಪಾರಾಗಲು ಕುಮ್ಮಕ್ಕು ನೀಡಿದ್ದ ಕಾರಣಕ್ಕೆ ಬಿಂದಿ ಯಾದವ್ ಹಾಗೂ ಮನೋರಮಾ ದೇವಿಯನ್ನು ಪೊಲೀಸರು ಬಂಧಿಸಿದ್ದರು. ಜಾಮಿನು ಪಡೆದು ಹೊರಬಂದಿದ್ದ ಮೂವರನ್ನು ಆ.31ರಂದು ಜಿಲ್ಲಾ ನ್ಯಾಯಾಲಯ ದೋಷಿಗಳೆಂದು ಹೇಳಿತ್ತು.
Leave A Reply