ಬೀದಿನಾಯಿಗಳ ದಾಳಿ! ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ

21 ವರ್ಷಗಳ ಬಿಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಬೀದಿನಾಯಿಗಳು ದಾಳಿ ಮಾಡಿದ ಪರಿಣಾಮ ಮುಖಕ್ಕೆ 17 ಹೊಲಿಗೆಗಳನ್ನು ಹಾಕಬೇಕಾಗಿ ಬಂದಿರುವ ಘಟನೆ ಉತ್ತರಪ್ರದೇಶದ ಕಾನಪುರದಲ್ಲಿ ನಡೆದಿದೆ. ಆಕೆ ಕಾಲೇಜಿನಿಂದ ಮನೆಗೆ ಹಿಂತಿರುಗುತ್ತಿದ್ದಾಗ ದಾರಿಯಲ್ಲಿ ಬೀದಿನಾಯಿಗಳು ಆಕೆಯ ಮೇಲೆ ದಾಳಿ ಮಾಡಿವೆ. ಇದರಿಂದ ಅವಳ ಮುಖದ ಮೇಲೆ ಆಳವಾದ ಗಾಯಗಳಾಗಿವೆ. ಪರಿಸ್ಥಿತಿ ಹೇಗಿತ್ತು ಎಂದರೆ ವೈದ್ಯರಿಗೆ ಅವಳ ಮುಖದ ಗಾಯಗಳನ್ನು ಹೊಲಿಯಲು 17 ಹೊಲಿಗೆಗಳನ್ನು ಹಾಕಬೇಕಾಯಿತು.
ಇಂತಹ ಪರಿಸ್ಥಿತಿ ಭಾರತದ ಯಾವುದೋ ರಾಜ್ಯದ ಯಾವುದೋ ಒಂದು ಭಾಗದಲ್ಲಿ ಮಾತ್ರವಲ್ಲ, ದೇಶದ ಎಲ್ಲಾ ಕಡೆ ಇಂತಹ ಪರಿಸ್ಥಿತಿ ಉದ್ಭವವಾಗಿದೆ. ಬೀದಿನಾಯಿಗಳ ಸಂಖ್ಯೆ ವಿಪರೀತವಾಗಿದೆ. ಎಲ್ಲಿಯ ಮಟ್ಟಿಗೆ ಅಂದರೆ ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತರಿಗೆ ವ್ಯಕ್ತಿಯೊಬ್ಬ ಕೆನ್ನೆಗೆ ಬಾರಿಸುವ ಮಟ್ಟಿಗೆ ಈ ವಿಷಯ ಬೆಳೆದಿದೆ. ಸುಪ್ರೀಂ ಕೋರ್ಟ್ ಕೂಡ ಈ ವಿಷಯದಲ್ಲಿ ಬೀದಿನಾಯಿಗಳ ಪರ ಸಾಫ್ಟ್ ಕಾರ್ನರ್ ಹೊಂದಿದಂತೆ ಕಾಣುತ್ತಿದೆ. ಇದರಿಂದ ಮಕ್ಕಳು, ವೃದ್ಧರು ಹಾಗೂ ಕಾಲೇಜು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಭಯಪಡುವ ಹಾಗಿದೆ. ಇನ್ನು ಮುಂಜಾನೆ ವಾಕಿಂಗ್ ಹೋಗುವವರು, ರಾತ್ರಿ ಕೆಲಸ ಮುಗಿಸಿ ಲೇಟಾಗಿ ಮನೆಗೆ ಬರುವವರಿಗೂ ಈ ಬೀದಿನಾಯಿಗಳ ಕಾಟ ಹೇಳತೀರದು. ಪುಟ್ಟ ಮಕ್ಕಳು ಪಕ್ಕದ ರಸ್ತೆಯ ಅಂಗಡಿಗೆ ಹೋಗಿ ಸಾಮಾನು ತೆಗೆದುಕೊಂಡು ಬರುವಾಗ ಅಂತವರ ಮೇಲೆ ದಾಳಿ ಮಾಡಿರುವ ಅನೇಕ ಘಟನೆಗಳು ನಡೆದಿವೆ. ಇದರಿಂದ ಮಕ್ಕಳನ್ನು ಒಂಟಿಯಾಗಿ ಹೊರಗೆ ಕಳುಹಿಸಲು ಪೋಷಕರು ಹೆದರುವ ಪರಿಸ್ಥಿತಿ ಇದೆ.
ಹೀಗೆ ಬೀದಿನಾಯಿಗಳು ದಾಳಿ ಮಾಡಿ ಆಸ್ಪತ್ರೆಯಲ್ಲಿ ಮುಖಕ್ಕೆ 17 ಹೊಲಿಗೆಗಳನ್ನು ಹಾಕಿಕೊಂಡು ಮಲಗಿರುವ ವೈಷ್ಣವಿಯ ಅಂಕಲ್ ಮಾತನಾಡಿ ” ಅವಳು ಏನನ್ನು ತಿನ್ನುವ ಪರಿಸ್ಥಿತಿಯಲ್ಲಿ ಇಲ್ಲ. ಅವಳ ಮುಖ ಕೂಡ ಅಲುಗಾಡಿಸಲು ಆಗುತ್ತಿಲ್ಲ. ಅವಳ ಬಾಯಿಗೆ ದ್ರವ ಆಹಾರ ನೀಡಲಾಗುತ್ತಿದೆ” ಎಂದು ಬಹಳ ನೋವಿನಿಂದ ಹೇಳಿದ್ದಾರೆ. ಈ ಬೀದಿನಾಯಿಗಳು ಜನಸಾಮಾನ್ಯರನ್ನೇ ಗುರಿ ಮಾಡಿ ದಾಳಿ ಮಾಡುವುದರಿಂದ ಹೆಚ್ಚಿನ ತೊಂದರೆಯಾಗುವುದು ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೆ. ಇದರ ಕಷ್ಟ ಕಾರಿನಲ್ಲಿ ಹೋಗುವವರಿಗೆ, ಸೆಲೆಬ್ರಿಟಿಗಳಿಗೆ ಗೊತ್ತಾಗುವುದಿಲ್ಲ. ಅಂತವರು ನಾಯಿ ಪ್ರೀತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ತೋರಿಸುತ್ತಾ, ಅವುಗಳ ವಿರುದ್ಧ ಏನು ಕ್ರಮ ಕೂಡ ತೆಗೆದುಕೊಳ್ಳುವುದು ಸರಿಯಲ್ಲ ಎನ್ನುವಂತಹ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಗ್ರೌಂಡ್ ರಿಯಾಲಿಟಿಯೇ ಬೇರೆ ಇದೆ ಎನ್ನುವುದು ಅಕ್ಷರಶ: ನಡೆದುಕೊಂಡು ಹೋಗುವವರಿಗೆ ಮಾತ್ರ ಗೊತ್ತು.