ಸ್ವಂತ ವಿಮಾನ ಖರೀದಿಗೆ ಸರಕಾರ ಚಿಂತನೆ! ಶೀಘ್ರ ಟೆಂಡರ್…

ಇದನ್ನು ಶುಭ ಸುದ್ದಿ ಎಂದು ಓದುವುದೋ ಅಥವಾ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎಂದು ಎಂದು ಅಂದುಕೊಳ್ಳುವುದೋ ನೀವೆ ನಿರ್ಧರಿಸಿ. ಒಟ್ಟಿನಲ್ಲಿ ಕರ್ನಾಟಕ ಸರಕಾರ ಸ್ವಂತ ವಿಮಾನ ಹಾಗೂ ಹೆಲಿಕಾಪ್ಟರ್ ಖರೀದಿಸುವ ಚಿಂತನೆ ಮಾಡಿದೆ. ಕೆಲವು ವರ್ಷಗಳಿಂದ ವಿಮಾನ, ಹೆಲಿಕಾಪ್ಟರ್ ಖರೀದಿ ಪ್ರಕ್ರಿಯೆಯ ಬಗ್ಗೆ ಅಲ್ಲಿ ಇಲ್ಲಿ ಸುದ್ದಿ ಬರುತ್ತಿತ್ತಾದರೂ ಯಾವ ಸರಕಾರವೂ ಈ ಬಗ್ಗೆ ದೃಢ ನಿರ್ಧಾರ ಮಾಡಿರಲಿಲ್ಲ. ಆದರೆ ಈಗಿನ ಕಾಂಗ್ರೆಸ್ ಸರಕಾರ ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಶೀಘ್ರದಲ್ಲಿ ಟೆಂಡರ್ ಕರೆಯುವ ಪ್ರಕ್ರಿಯೆಗೆ ಮುಂದಾಗಲಿದೆ. ಸಾಮಾನ್ಯವಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ದೊಡ್ಡ ರಾಜ್ಯವಾದರೆ ಒಂದು ಕಡೆಯಿಂದ ಮತ್ತೊಂದೆಡೆ ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವಾಗ ಬಳಸುವ ಖಾಸಗಿ ಜೆಟ್ ಅಥವಾ ಹೆಲಿಕಾಪ್ಟರ್ ಬಾಡಿಗೆಯನ್ನು ಸರಕಾರವೇ ಭರಿಸಬೇಕು. ಈ ರೀತಿ ಬಾಡಿಗೆ ಪಡೆದು ಪ್ರಯಾಣಿಸುವುದಕ್ಕಿಂತ ಸ್ವಂತ ವಿಮಾನ ಹಾಗೂ ಹೆಲಿಕಾಪ್ಟರ್ ಖರೀದಿಸಿದರೆ ಆರ್ಥಿಕ ಹೊರೆ ತಪ್ಪಿಸಬಹುದು ಎನ್ನುವ ಲೆಕ್ಕಾಚಾರಗಳಿವೆ.
ಈ ಬಗ್ಗೆ ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಮಾತನಾಡಿ ” ಸರಕಾರದ ಅಧಿಕೃತ ಕೆಲಸಗಳಿಗೆ ಹೆಲಿಕಾಪ್ಟರ್ ಮತ್ತು ವಿಮಾನ ಖರೀದಿ ವಿಷಯ ಅನೇಕ ವಿಷಯಗಳಿಂದಲೂ ಸರಕಾರದ ಮುಂದೆ ಬಾಕಿ ಉಳಿದಿತ್ತು. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಹಾಗೂ ಟೆಂಡರ್ ಕರೆಯುವ ವಿಚಾರದಲ್ಲಿ ಮುಖ್ಯಮಂತ್ರಿಯವರು ನನಗೆ ಜವಾಬ್ದಾರಿ ನೀಡಿದರು. ಅದ್ದರಿಂದ ಬೇರೆ ರಾಜ್ಯಗಳಲ್ಲಿನ ವ್ಯವಸ್ಥೆಯನ್ನು ತಿಳಿದುಕೊಳ್ಳುವಂತೆ ಹಾಗೂ ಎಚ್ ಎಎಲ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ” ಎಂದು ಹೇಳಿದ್ದಾರೆ.
ಈ ಬಗ್ಗೆ ವಿಧಾನಸಭಾ ಪ್ರತಿಪಕ್ಷದ ನಾಯಕ ಆರ್ ಅಶೋಕ್ ತಮ್ಮ ‘ಎಕ್ಸ್’ ನಲ್ಲಿ “ನಡುರಸ್ತೆಯಲ್ಲಿ ಕೆಟ್ಟು ನಿಲ್ಲುತ್ತಿರುವ ಸರಕಾರಿ ಬಸ್ಸುಗಳ ದುರಸ್ತಿಗೆ ಕಾಂಗ್ರೆಸ್ ಸರಕಾರದ ಬಳಿ ದುಡ್ಡಿಲ್ಲ. ಹೊಸ ಬಸ್ಸುಗಳ ಖರೀದಿಗೆ ದುಡ್ಡಿಲ್ಲ. ಸಾರಿಗೆ ನೌಕರರಿಗೆ ಸಿಗಬೇಕಾದ ನೂರಾರು ಕೋಟಿ ಹಿಂಬಾಕಿ ಪಾವತಿಸಲು ದುಡ್ಡಿಲ್ಲ. ಯಾವುದಕ್ಕೂ ದುಡ್ಡಿಲ್ಲ, ದುಡ್ಡಿಲ್ಲ ಎಂದು ಸಾರಿಗೆ ನಿಗಮಗಳನ್ನು ಸರ್ವನಾಶ ಮಾಡಿ ಬಸ್ ನಿಲ್ದಾಣಗಳನ್ನು ಹರಾಜು ಹಾಕುವ ದುಸ್ಥಿತಿ ತಂದಿಟ್ಟಿರುವ ದಿವಾಳಿ ಆಗಿರುವ ರಾಜ್ಯದ ಕಾಂಗ್ರೆಸ್ ಸರಕಾರ, ಈಗ ಸ್ವಂತ ಹೆಲಿಕಾಪ್ಟರ್, ಜೆಟ್ ಖರೀದಿ ಮಾಡಲು ಹೊರಟಿರುವುದು ಹಾಸ್ಯಾಸ್ಪದ ಮತ್ತು ನಾಚಿಕೆಗೇಡು. ಸಾರ್ವಜನಿಕರಿಗೆ ಕನಿಷ್ಟ ಸೌಕರ್ಯ ನೀಡುವುದಕ್ಕಿಂತ ಮುಖ್ಯಮಂತ್ರಿಗಳು, ಸಚಿವರ ಐಷಾರಾಮಿ ಶೋಕಿಯೇ ಮುಖ್ಯವಾಗಿರುವ ಈ ಕಾಂಗ್ರೆಸ್ ಸರಕಾರದ ಲಜ್ಜೆಗೆಟ್ಟ ಧೋರಣೆಗೆ ಕನ್ನಡಿಗರು ರೋಸಿ ಹೋಗಿದ್ದಾರೆ” ಎಂದು ಬರೆದಿದ್ದಾರೆ. ಒಟ್ಟಿನಲ್ಲಿ ಸಿಎಂ, ಡಿಸಿಎಂಗಳ ಸರಕಾರಿ ಕಾರ್ಯಕ್ರಮಗಳ ಭಾಗವಹಿಸುವಿಕೆಗೆ ಈ ವಿಮಾನ, ಹೆಲಿಕಾಪ್ಟರ್ ಗಳ ಬಳಕೆ ಸದ್ಯದ ಮಟ್ಟಿಗೆ ಎಷ್ಟು ಅಗತ್ಯ ಎನ್ನುವುದನ್ನು ಅವರೇ ನಿರ್ಧರಿಸಬೇಕು. ಯಾಕೆಂದರೆ ಅವುಗಳನ್ನು ಖರೀದಿಸಿದ ನಂತರ ಅದರ ನಿರ್ವಹಣೆ ಕೂಡ ಅಷ್ಟೇ ಮುಖ್ಯವಾಗುತ್ತದೆ.