ಬಂಧಿಸಲು ಸಂಚು ಹೂಡಿದ್ದ ಸರಕಾರದ ಇರಾದೆ ಠುಸ್, ಗುರಿ ತಲುಪಿದ ಕೇಸರಿ ಪಡೆ
ಮಂಗಳೂರು: ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಬಿಜೆಪಿ ಯುವ ಮೋರ್ಚಾದ ಮಂಗಳೂರು ಚಲೋ ಬೈಕ್ ರ್ಯಾಲಿ ತಡೆಯಲು ಯಶಸ್ವಿಯಾಗಿದ್ದೇವೆ ಎಂದು ಬೀಗುತ್ತಿದ್ದ ರಾಜ್ಯ ಸರಕಾರಕ್ಕೆ ಬುಧವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಶಹಬ್ಬಾಸ್ ಹೇಳಿರುವ ಮಧ್ಯೆ ಗುರುವಾರ ಕೆಸರಿ ಪಡೆ ಸಿದ್ದರಾಮಯ್ಯ ಸರಕಾರಕ್ಕೆ ಸೆಡ್ಡು ಹೊಡೆದು, ಪೊಲೀಸ್ ಚಕ್ರವ್ಯೂಹ ಬೇಧಿಸಿ ಜ್ಯೋತಿ ವೃತ್ತದಲ್ಲಿ ಹಾಕಿದ್ದ ಬ್ಯಾರಿಕೇಡ್ ತೆಗೆದು ದಿಟ್ಟತನದಿಂದ ಹೆಜ್ಜೆ ಹಾಕುತ್ತಾ ಡಿ.ಸಿ.ಕಚೇರಿ ತಲುಪಿತು.
ಬುಡಮೇಲಾದ ಲೆಕ್ಕಾಚಾರ
ಒಂದೆಡೆ ಮಂಗಳೂರು ನಗರ ಪ್ರವೇಶಿಸುವ ಜಂಕ್ಷನ್‌ಗಳಾದ ಪಂಪುವೆಲ್, ನಂತೂರು, ಕೊಟ್ಟಾರ, ಹಂಪನಕಟ್ಟೆ , ಉಳ್ಳಾಲ, ಬಿ.ಸಿ ರೋಡ್ ಹೀಗೆ ಎಲ್ಲೆಡೆ ಬೆಳಗ್ಗೆಯಿಂದಲೇ ವಾಹನಗಳಲ್ಲಿ ಬರುವ ಕಾರ್ಯಕರ್ತರನ್ನು ಬಂಧಿಸಲಾಗುತ್ತಿತ್ತು. ಇನ್ನೇನಿದ್ದರೂ 500 ಕಾರ್ಯಕರ್ತರು ಜ್ಯೋತಿ ವೃತ್ತದಲ್ಲಿ ಸೇರಬಹುದು. ಅವರೆಲ್ಲರನ್ನು ಸುಲಭವಾಗಿ ಬಂಧಿಸಬಹುದು ಎಂದು ಪೊಲೀಸರು ಲೆಕ್ಕಾಚಾರ ಹಾಕಿದ್ದರು. ಆದರೆ ಒಂದೆಡೆ ಸಭೆ ಆರಂಭವಾದಂತೆ ಬ್ರಹತ್ ಪ್ರಮಾಣದಲ್ಲಿ ಕಾರ್ಯಕರ್ತರ ದಂಡು ಕೂಡಿತು. ಜ್ಯೋತಿ ವೃತ್ತದಲ್ಲಿ ಸಹಸ್ರಾರು ಕಾರ್ಯಕರ್ತ ಪಡೆ ಸೇರಿತು. ಸಹಸ್ರಾರು ಕಾರ್ಯಕರ್ತರನ್ನು ಬಂಧಿಸುವುದು ಪೋಲಿಸರಿಗೆ ಅಸಾಧ್ಯವಾಯಿತು. ಕೆಲವರನ್ನು ಜ್ಯೋತಿ ವ್ರತ್ತದಿಂದಲೇ ಬಂಧಿಸಲು ಸಾಧ್ಯವಾದರೂ ಸಹಸ್ರ ಸಂಖ್ಯೆಯಲ್ಲಿ ಕಾರ್ಯಕರ್ತರು ಪೋಲಿಸರು ಹಾಗೂ ಸಿ.ಆರ್.ಪಿ.ಎಫ್ ರಕ್ಷಣಾ ತುಕಡಿಯ ಸರ್ಪಗಾವಲು ದಾಟಿ ಮುನ್ನಡೆಯಿತು.
ಡಿ ಸಿ ಕಚೇರಿ ತಲುಪಿದ ಸಂಸದರ ಬೈಕ್
ಸಹಸ್ರಾರು ಕಾರ್ಯಕರ್ತರೂ ಕೂಡಿದ್ದ ರ್ಯಾಲಿಯಲ್ಲಿ ಜ್ಯೋತಿ ವೃತ್ತದಿಂದ ಕೆಲವು ಬೈಕ್ ಡಿ.ಸಿ. ಕಚೇರಿಯತ್ತ ಹೊರಟಿತು. ರಾಜ್ಯ ಬಿಜೆಪಿ ನಾಯಕರು ರ್ಯಾಲಿಗೆ ಚಾಲನೆ ನೀಡಿದರು. ಆದರೆ ಸ್ವಲ್ಪ ಮುಂದೆ ಸಾಗುವಾಗಲೇ ನೂರಾರು ಸಂಖ್ಯೆಯಲ್ಲಿದ್ದ ಪೋಲಿಸರು ಕೆಲವು ವಾಹನಗಳ ಬೀಗದ ಕೈ ತೆಗೆದು ಬೈಕ್ ತಡೆದರು. ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲ್ ರವರ ಬೈಕ್ ಡಿ.ಸಿ. ಕಚೇರಿ ತಲುಪಿಯೇ ಬಿಟ್ಟಿತು. ಇವರಿಗೆ ಇತರ ಬೈಕ್‌ಗಳಲ್ಲಿ ಪ್ರತಾಪ ಸಿಂಹ, ಸುನೀಲ್ ಕುಮಾರ್ ಕಾರ್ಕಳ ಹಾಗೂ ಇನ್ನಿತರ ಕಾರ್ಯಕರ್ತರು ಸಾಥ್ ನೀಡಿದರು.
ಒಂದೇ ವೇದಿಕೆಯಲ್ಲಿ ರಾಜ್ಯದ ಎಲ್ಲ ಬಿಜೆಪಿ ನಾಯಕರನ್ನು ಕಂಡ ಮಂಗಳೂರಿಗರು
ಹಲವು ವರ್ಷದ ಬಿಜೆಪಿ ನಾಯಕರಾದ ಯಡಿಯೂರಪ್ಪ, ಜಗದೀಶ ಶೆಟ್ಟರ್, ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಆರ್ ಅಶೋಕ್, ಕೆ.ಎಸ್.ಈಶ್ವರಪ್ಪ, ನಳಿನ್ ಕುಮಾರ್ ಕಟೀಲ್, ಪ್ರತಾಪ ಸಿಂಹ, ಸಿ.ಟಿ ರವಿ, ಸುನೀಲ್ ಕುಮಾರ್, ಅರವಿಂದ ಲಿಂಬಾವಳಿ, ಸುರೇಶ್ ಕುಮಾರ್ ಒಂದೇ ವೇದಿಕೆಯಲ್ಲಿ ಭಾಗವಹಿಸಿ, ಪ್ರತಿಭಟನೆಗೆ ಪ್ರೋತ್ಸಾಹಿಸಿದ್ದು ಬಿಜೆಪಿ ಪಾಳಯದಲ್ಲಿ ಹೊಸ ಹುಮ್ಮಸ್ಸು ಮೂಡಿಸಿತು.
ಆ್ಯಂಬುಲೆನ್ಸ್ ದಾರಿ ನೀಡಿ ಮಾನವಿಯತೆ ಮೆರೆದ ಕಾರ್ಯಕರ್ತರು
ಪ್ರತಿಭಟನೆಯ ಮಧ್ಯೆ ಮೂರು ಬಾರಿ ಆಂಬ್ಯುಲೆನ್‌ಸ್ ವಾಹನ ಬಂದಾಗ ನೂಕು ನುಗ್ಗಲಿನ ಮಧ್ಯೆಯೂ ಬಿಜೆಪಿ ಕಾರ್ಯಕರ್ತರು ದಾರಿಮಾಡಿಕೊಡುವ ಮೂಲಕ ಮಾನವೀಯತೆ ಮೆರೆದರು. ಇದಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಯಿತು.
ಗೃಹಮಂತ್ರಿಗಳಿಗೆ ಹಾಗೂ ರಾಜ್ಯಸರಕಾರಕ್ಕೆ ಬುಧವಾರ ಶಹಬ್ಬಾಸ್ ಗಿರಿ ಹೇಳಿದ್ದ ವೇಣುಗೋಪಾಲ್ ಗುರುವಾರ ರ್ಯಾಲಿ ತಡೆಯಲು ವಿಫಲರಾಗಿರುವ ಪೊಲೀಸ್ ಇಲಾಖೆ ಮತ್ತು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆಯೇ? ಮಂಗಳೂರಿನ ಇಬ್ಬರು ಉಸ್ತುವಾರಿ ಸಚಿವರು ಮಂಗಳೂರು ಚಲೋ ಕುರಿತು ರಾಜ್ಯ ಸರಕಾರಕ್ಕೆ ಯಾವ ರೀತಿಯ ಸಮಜಾಯಿಷಿ ನೀಡುತ್ತಾರೆ ಎಂಬುದು ಪ್ರಶ್ನಾರ್ಹ.
Leave A Reply