ಮೋದಿ ನಿಮಗೆ ದೊಡ್ಡ ಥ್ಯಾಂಕ್ಸ್ ಎನ್ನಲು ಬಡವರು ಕಾಯುತ್ತಿದ್ದಾರೆ!
ನಾವು ಎಲ್ಲವನ್ನು ಹಿಂದಕ್ಕೆ ಬಿಟ್ಟು ಮತ್ತೆ ಅಭಿವೃದ್ಧಿ ಕಡೆನೆ ಮಾತನಾಡಬೇಕಾಗಿದೆ. ಇಲ್ಲದಿದ್ದರೆ ಅದೇ ಮಂಗಳೂರು ಚಲೋ, ಗೌರಿ ಲಂಕೇಶ್ ಹತ್ಯೆ, ಡಿವೈಎಸ್ ಪಿ ಗಣಪತಿ ನಿಗೂಢ ಸಾವು ಅದರಲ್ಲಿಯೇ ಬಾಕಿಯಾಗಿ ಬಿಡುತ್ತೇವೆ. ಈ ಬಗ್ಗೆ ಮಾತನಾಡಬಾರದು ಎಂದಲ್ಲ. ಆದರೆ ಇದರ ನಡುವೆ ಕೂಡ ರಾಷ್ಟ್ರದಲ್ಲಿ ಒಳ್ಳೆಯ ಕೆಲಸಗಳು ಕೂಡ ಆಗ್ತಾ ಇವೆಯಲ್ಲ. ಅದಕ್ಕೆ ಈ ವಿಷಯಗಳಷ್ಟು ಪ್ರಚಾರ ಸಿಗ್ತಾ ಇಲ್ಲ. ಪ್ರಚಾರ ಬಿಡಿ, ಒಳ್ಳೆಯ ಕೆಲಸಗಳಿಗೆ ಅದು ನಮ್ಮ ರಾಷ್ಟ್ರದಲ್ಲಿ ಮಾಧ್ಯಮಗಳು ಕಣ್ಣು ಹಾಕುವುದು ಕಡಿಮೆ. ಆದರೆ ಕನಿಷ್ಟ ನಾವು ಜಾಗೃತಿಯನ್ನಾದರೂ ಮಾಡದೇ ಹೋದರೆ ಸರಕಾರಗಳು ಕೊಡುವ ಸೌಲಭ್ಯಗಳು ಹಾಗೆ ಕಪಾಟಿನಲ್ಲಿ ಉಳಿದು ಬಿಡುತ್ತವೆ.
ಇಲ್ಲಿಯ ತನಕ ನಮ್ಮ ಆಸ್ಪತ್ರೆಗಳಲ್ಲಿ ದೊಡ್ಡ ದೊಡ್ಡ ಆಪರೇಶನ್ಸ್ ಆಗುತ್ತಿತ್ತಲ್ಲ, ಉದಾಹರಣೆಗೆ ಈ ಮಂಡಿ ಚಿಪ್ಪಿನ ಶಸ್ತ್ರಚಿಕಿತ್ಸೆ, ಹೃದಯ ಶಸ್ತ್ರಚಿಕಿತ್ಸೆ. ಇವಕ್ಕೆಲ್ಲಾ ಆಸ್ಪತ್ರೆಯವರು ಬಾಯಿಗೆ ಬಂದ ರೇಟ್ ತೆಗೆದುಕೊಳ್ತಾ ಇದ್ದರು. ಒಂದು ರೀತಿಯಲ್ಲಿ ಹಾರ್ಟ್ ಆಪರೇಶನ್ ಎಂದರೆ ಸ್ವರ್ಗದಿಂದ ದೇವರ ಎಪಾಯಿಂಟ್ ಮೆಂಟ್ ತೆಗೆದುಕೊಂಡು ನಂತರ ದೇವರು ಒಪ್ಪಿದರೆ ಅವರ ಫ್ರೀ ಟೈಮ್ ನಲ್ಲಿ ಭೂಮಿಗೆ ಬಂದಾಗ ಆಪರೇಶನ್ ಮಾಡಲಾಗುತ್ತದೆ. ಅದಕ್ಕೆ ಹಣ ಸಿಕ್ಕಾಪಟ್ಟೆ ತಗಲುತ್ತದೆ. ನಿಮ್ಮ ಆಪರೇಶನ್ ಮಾಡಲು ದೇವರು ಒಪ್ಪಿಕೊಂಡದ್ದೇ ದೊಡ್ಡದು. ದೇವರ ಎಪಾಯಿಂಟ್ ಮೆಂಟ್ ಸಿಕ್ಕಿದ್ದೇ ದೊಡ್ಡದು. ಬೇಕಾದರೆ ಮಾಡಿಸಿಕೊಳ್ಳಿ. ಒಮ್ಮೆ ದೇವರು ಮಿಸ್ ಆದರೆ ಮತ್ತೆ ನಿಮಗೆ ಯಮನ ಅಪಾಯಿಂಟ್ ಮೆಂಟೆ ಗತಿ ಎಂದು ಆಸ್ಪತ್ರೆಯವರು ಹೆದರಿಸುತ್ತಿದ್ದರು. ಹೀಗಿದ್ದಾಗ ಪಾಪದವರು ಏನು ಮಾಡಬೇಕು? ಪಾಪದವರು ಎಂದರು ಬಡವರು ಎನ್ನುವ ಅರ್ಥದಲ್ಲಿ ಬರೆಯುತ್ತಿದ್ದೇನೆ. ಶ್ರೀಮಂತರಲ್ಲಿ ಕೂಡ ಗುಣದಲ್ಲಿ ಪಾಪದವರು ಇದ್ದಾರೆ. ಯಾವಾಗ ದೇವರ ಅಪಾಯಿಂಟ್ ಮೆಂಟ್ ತೆಗೆದುಕೊಳ್ಳಬೇಕು? ಇಷ್ಟು ಲಕ್ಷ ರೆಡಿ ಮಾಡಿಟ್ಟುಕೊಳ್ಳಿ ಎಂದು ಆಸ್ಪತ್ರೆಯವರು ಹೆದರಿಸಿದಾಗ ಬಡವರಿಗೆ ದೇವರ ಫೋಟೋ ಮುಂದೆ ನಿಂತು ಅಳುವುದೊಂದೇ ಬಾಕಿ ಉಳಿಯುತ್ತಿತ್ತು. ಅದಕ್ಕೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೊನೆಗೂ ಪರಿಹಾರ ಕಂಡು ಹಿಡಿದಿದ್ದಾರೆ. ಕೇಂದ್ರ ಸರಕಾರ ಮಾಡಿರುವ ನೂತನ ಪಾಲಿಸಿಯಿಂದ ಹೃದಯದ ಶಸ್ತ್ರಚಿಕಿತ್ಸೆ ಹಾಗೂ ಮಂಡಿಚಿಪ್ಪು ಶಸ್ತ್ರಚಿಕಿತ್ಸೆ ಮಧ್ಯಮ ವರ್ಗದವರ ಬದುಕಿನಲ್ಲಿಯೂ ನೆಮ್ಮದಿಯ ವಾತಾವರಣವನ್ನು ಉಂಟು ಮಾಡಿದೆ.
ಹೃದಯದ ಶಸ್ತ್ರಚಿಕಿತ್ಸೆಗೆ ಅಗತ್ಯವಾಗಿ ಬೇಕಾಗುವ ಸ್ಟಂಟ್ಸ್ ನ ಬೆಲೆ ಹಿಂದಿಗಿಂತ 85% ಇಳಿಸಲಾಗಿದೆ ಎಂದರೆ ಅರ್ಥ ಮಾಡಿಕೊಳ್ಳಿ. ಸಾಮಾನ್ಯವಾಗಿ ಒಂದು ಬಟ್ಟೆಯ ಅಂಗಡಿಯ ಹೊರಗೆ 50% ದರಕಡಿತದ ಮಾರಾಟ ಎಂದ ಕೂಡಲೇ ನಮ್ಮ ಹುಬ್ಬುಗಳು ಮೇಲೆ ಹೋಗುತ್ತವೆ. 60% ದರಕಡಿತದ ಮಾರಾಟ ಎಂದು ಪಾದರಕ್ಷೆಗಳ ಮಳಿಗೆಯ ಹೊರಗೆ ಬ್ಯಾನರ್ ಬಿದ್ದರೆ ಚಪ್ಪಲಿ ಬೇಕಾ ಬೇಡ್ವಾ ಒಮ್ಮೆ ನೋಡೋಣ ಎಂದು ಅನಿಸುತ್ತದೆ. ಅಂದರೆ ನಮಗೆ ಅಷ್ಟು ರೇಟ್ ಕಡಿಮೆ ಆದರೆ ಎಷ್ಟು ಉಳಿಯುತ್ತದೆ ಎನ್ನುವುದು ಗೊತ್ತು. ಹಾಗಿರುವಾಗ ನಿಮ್ಮ ಜೀವವನ್ನು ಉಳಿಸುವ ಒಂದು ಪ್ರಮುಖ ಶಸ್ತ್ರಚಿಕಿತ್ಸೆಗೆ ಬೇಕಾಗುವ ಜೀವರಕ್ಷಕ ವಸ್ತುಗಳ ಬೆಲೆ 85% ಇಳಿಯುತ್ತದೆ ಎಂದರೆ ಕೇವಲ ಹುಬ್ಬುಗಳು ಮಾತ್ರವಲ್ಲ, ನೀವು ಸಹ ಕುಣಿದು ಕುಪ್ಪಳಿಸಿ ಮೋದಿಗೆ ದೊಡ್ಡ ಥ್ಯಾಂಕ್ಸ್ ಹೇಳಬೇಕು. ಯಾಕೆಂದರೆ ಬಟ್ಟೆ, ಪಾದರಕ್ಷೆಗಿಂತ ನಿಮ್ಮ ಹೃದಯ ಮುಖ್ಯ. ಸೀರೆ ಅಂಗಡಿಯವ ಎಂಟು ನೂರು ರೂಪಾಯಿಯ ಸೀರೆಗೆ ನೂರು ರೂಪಾಯಿ ಕಡಿಮೆ ಮಾಡಿದರೆ ನಿಮ್ಮ ಮುಖ ಜಗದಗಲವಾಗುತ್ತದೆ. ಹಾಗಿರುವಾಗ ಇಡೀ ಮೆಡಿಕಲ್ ಕ್ಷೇತ್ರದ ಸ್ವೇಚ್ಚಾಚಾರಕ್ಕೆ ಕಡಿವಾಣ ಹಾಕುವುದೆಂದರೆ ಅದೇನೂ ಚಿಕ್ಕ ವಿಷಯವಲ್ಲ. ಇದರೊಂದಿಗೆ ಮಂಡಿಚಿಪ್ಪಿನ ಶಸ್ತ್ರಚಿಕಿತ್ಸೆಗೆ ಬೇಕಾಗುವ ವಸ್ತುಗಳಿಗೆ 69% ಬೆಲೆ ಕಡಿಮೆಯಾಗಿದೆ. ಸಾಮಾನ್ಯವಾಗಿ ಈ ವೈದ್ಯರು ಇರ್ತಾರಲ್ಲ, ಅವರು ನೋಡುವಷ್ಟು ಅಮಾಯಕರಾಗಿರುವುದಿಲ್ಲ. ನಿಮ್ಮ ಮಂಡಿಚಿಪ್ಪು ಬದಲಾಯಿಸಲು ನಾವು ವಿದೇಶದ ಯಾವುದಾದರೂ ಸ್ಥಳದ ಹೆಸರು ಹೇಳಿ ಅಲ್ಲಿಂದ ತರಬೇಕಾಗುತ್ತದೆ. ಅದಕ್ಕೆ ಇಂತಿಷ್ಟು ರೇಟ್ ಇರುತ್ತದೆ. ಬೇಕಾದರೆ ತರಿಸುತ್ತೇವೆ. ಇಲ್ಲದಿದ್ದರೆ ನಮ್ಮ ದೇಶದ್ದೆ ಇರುತ್ತದೆ. ಸ್ವಲ್ಪ ಕಡಿಮೆಯಲ್ಲಿ ಸಿಗುತ್ತದೆ, ಆದರೆ ಎಂದು ರಾಗ ಎಳೆಯುತ್ತಿದ್ದರು.
ನಮ್ಮಲ್ಲಿ ಹೆಚ್ಚಿನವರಿಗೆ ವಿದೇಶದಲ್ಲಿ ಸಿಗುವ ವಸ್ತುವಿನ ಗುಣಮಟ್ಟ ಯವಾಗಲೂ ಒಳ್ಳೆಯದು ಎನ್ನುವ ಭಾವನೆ ಇದೆ. ಅದಕ್ಕಾಗಿ ಕಷ್ಟವಾದರೂ ಕೆಲವು ದಿನ ಬಿಟ್ಟು ಹಣ ಹೊಂದಿಸಿ ಬರುತ್ತೇವೆ ಎಂದು ಅದೇ ನೋವಿನಲ್ಲಿ ಮನೆಗೆ ಬಂದು ತಲೆಯ ಮೇಲೆ ಕೈ ಇಟ್ಟು ಕುಳಿತುಕೊಳ್ಳುತ್ತಿದ್ದರು. ಈಗ ಆ ಟೆನ್ಷನ್ ಕೂಡ ಇಲ್ಲ. ಈಗ ಆ ವಸ್ತುಗಳ ಬೆಲೆ ಕೂಡ 69% ಇಳಿಸಲಾಗಿದೆ. ಅದರೊಂದಿಗೆ ವಿದೇಶದ ಮಾಲ್ ಬೇಕಾ? ಇಲ್ಲಿಯದ್ದು ಸಾಕಾ? ಎಂದು ವೈದ್ಯರು ರಾಗ ಎಳೆಯುವಂತಿಲ್ಲ. ಎರಡರ ಬೆಲೆ ಕೂಡ ಒಂದೇ ಇರಲಿದೆ. ಯಾಕೋ ಮೋದಿಯವರು ಯಾವ ಕ್ಷೇತ್ರವನ್ನು ಬಿಡುವುದಿಲ್ಲ ಎನಿಸುತ್ತದೆ. ವಿಷಯ ಇಷ್ಟೇ ಅಲ್ಲ. ಇನ್ನು ಅನೇಕ ಶಸ್ತ್ರಚಿಕಿತ್ಸೆಗಳ ಖರ್ಚು ವೆಚ್ಚ ಕೂಡ ಇಳಿಯುತ್ತಿದೆ. ಅದನ್ನು ಕೂಡ ಹೇಳುತ್ತೇನೆ. ಇವತ್ತು ಬೆಳಿಗ್ಗೆ ನರೇಂದ್ರ ಮೋದಿಯವರು ಫೋನ್ ಮಾಡಿ ಈ ವಿಷಯ ಎಲ್ಲ ಹೇಳಿ ಬಿಡು ಮಾರಾಯ ಎಂದು ನನಗೆನೂ ವಿನಂತಿ ಮಾಡಿಲ್ಲ. ಆದರೂ ನಾಲ್ಕು ಜನರಿಗೆ ಗೊತ್ತಾಗಲಿ ಎನ್ನುವ ಕಾರಣಕ್ಕೆ ಬರೆಯುತ್ತಿದ್ದೇನೆ. ಒಳ್ಳೆಯ ಕೆಲಸ ಯಾರು ಮಾಡಿದರೂ ಅದರ ಬಗ್ಗೆ ಜಾಗೃತಿ ಮೂಡಿಸಬೇಕು. ವಿಷಯ ನೀವು ಓದಿ, ನಾಲ್ಕು ಮಂದಿಗೆ ಹೇಳಿಬಿಡಿ, ನಮ್ಮದೇನೂ ಹೋಗುತ್ತೆ ಅಲ್ವಾ!
Leave A Reply