ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
ಕಳೆದ ವರ್ಷ ಎಪ್ರಿಲ್ ನಲ್ಲಿ ಕುಡುಪು ಸಮೀಪದ ಭಟ್ರ ಕಲ್ಲುರ್ತಿ ದೇವಸ್ಥಾನದ ಸನಿಹದಲ್ಲಿರುವ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ವೇಳೆ ಮೈದಾನಕ್ಕೆ ಬಂದಿದ್ದ ವ್ಯಕ್ತಿಯೊಬ್ಬ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದ ಎಂದು ಆರೋಪಿಸಿ ಮೈದಾನದಲ್ಲಿ ಆಡುತ್ತಿದ್ದ, ಕ್ರಿಕೆಟ್ ಆಟ ವೀಕ್ಷಿಸುತ್ತಿದ್ದ ಜನರು ಸೇರಿ ಗುಂಪು ದಾಳಿ ಮಾಡಿ ಆ ಯುವಕನಿಗೆ ಹಲ್ಲೆ ಮಾಡಿದ ಪರಿಣಾಮ ಆ ವ್ಯಕ್ತಿಯ ಸಾವು ಸಂಭವಿಸಿತ್ತು. ನಂತರ ಆ ಮೃತ ವ್ಯಕ್ತಿಯನ್ನು ಆಶ್ರಫ್ ಎಂದು ಗುರುತಿಸಲಾಗಿ, ಆತ ಕೇರಳದ ವಯನಾಡು ಜಿಲ್ಲೆಯ ಪುಲ್ಲಪಳ್ಳಿ ಮೂಲದವನು ಎಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಈ ಘಟನೆಯ ಸಂಬಂಧ ಘಟನೆ ನಡೆದ ಪ್ರದೇಶದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಹತ್ತಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿತ್ತು. ಇದರಲ್ಲಿ ಮಂಗಳಾ ನಗರದ 33 ವರ್ಷದ ನಟೇಶ್ ಕುಮಾರ್ ನಾಲ್ಕನೇ ಆರೋಪಿ ಎಂದು ಉಲ್ಲೇಖಿಸಲಾಗಿತ್ತು.

ನಟೇಶ್ ಕುಮಾರ್ ಅವರ ಜಾಮೀನು ಅರ್ಜಿಯನ್ನು ಪುರಸ್ಕರಿಸಿ ನ್ಯಾಯಾಲಯ ಜಾಮೀನು ನೀಡಿದೆ. ಆರೋಪಿಯ ಪರವಾಗಿ ಬೆಂಗಳೂರಿನಲ್ಲಿರುವ ಉಚ್ಚ ನ್ಯಾಯಾಲಯದಲ್ಲಿ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು. ಇದು ಭಾರತೀಯ ದಂಡ ಸಂಹಿತೆಯ ಕಲಾಂ 304 (1) ಕೊಲೆಗೆ ಸಮನಾಗದ ಅಪರಾಧಿ ನರಹತ್ಯೆಯಾಗಿದೆ. ಇದು ಐಪಿಸಿ 302 ರ ಅಡಿಯಲ್ಲಿ ಬರುವುದಿಲ್ಲ ಎಂದು ವಾದ ಮಂಡಿಸಿದ್ದರು. ಆರೋಪಿ ನಟೇಶ್ ಕುಮಾರ್ 2025, ಎಪ್ರಿಲ್ 29 ರಿಂದಲೇ ನ್ಯಾಯಾಂಗ ಬಂಧನದಲ್ಲಿದ್ದು, ಆರೋಪಿ 6, 10, 12 ಹಾಗೂ 21 ಈಗಾಗಲೇ ಸೆಶನ್ಸ್ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.
ಸರಕಾರಿ ಅಭಿಯೋಜಕರು ವಾದ ಮಂಡಿಸಿ ಆರೋಪಿ 3 ಹಾಗೂ 4 ಜೊತೆಗೂಡಿ ಮನೆಯಿಂದ ಮೆಣಸಿನ ಹುಡಿ ತಂದು ಮೃತನ ಕಣ್ಣುಗಳಿಗೆ ಹಾಗೂ ದೇಹದ ಮೇಲೆ ಎಸೆದಿದ್ದಾರೆ ಹಾಗೂ ಬೇರೆಯವರಿಗೂ ಹಲ್ಲೆ ಮಾಡಲು ಪ್ರೇರೆಪಿಸಿ ತಾವೂ ಹಲ್ಲೆ ಮಾಡಿದ್ದಾರೆ ಎಂದು ವಾದಿಸಿದ್ದರು. ಆದ್ದರಿಂದ ಗುರುತರ ಅಪರಾಧದಲ್ಲಿ ಭಾಗಿಯಾಗಿರುವುದರಿಂದ ಆರೋಪಿ ಸಂಖ್ಯೆ 4 ಜಾಮೀನು ಪಡೆಯಲು ಅರ್ಹನಲ್ಲ ಎಂದು ವಾದಿಸಿದ್ದರು.
ಎರಡೂ ಕಡೆಯ ವಾದ, ಪ್ರತಿವಾದವನ್ನು ಆಲಿಸಿದ ಮಾನ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರು ಆರೋಪಿಗೆ ಜಾಮೀನು ನೀಡಿದ್ದಾರೆ. ಅದರೊಂದಿಗೆ ಒಂದು ಲಕ್ಷ ರೂ ಬಾಂಡ್, ಒಬ್ಬ ಶ್ಯೂರಿಟಿ, ಸಾಕ್ಷಿದಾರರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಆಗಿ ಬೆದರಿಕೆ ಒಡ್ಡದಂತೆ ಮತ್ತು ನ್ಯಾಯಾಲಯದಲ್ಲಿ ಪ್ರಕರಣದ ಶೀಘ್ರ ವಿಲೇವಾರಿಗೆ ಸಹಕರಿಸುವಂತೆ ಸೂಚಿಸಲಾಗಿದೆ.









