ಕಾರಂಜಿ ಬೇಡಾ, ಮಂಗಳೂರಿಗೆ ಕೊಡುಗೆ ನೀಡಿದ ನಾಯಕರ ಮೂರ್ತಿ ನಿಲ್ಲಿಸಿ !
ಮಂಗಳೂರಿನ ಶಾಸಕರಿಗೆ ಮತ್ತು ಮೇಯರ್ ಅವರಿಗೆ ಒಂದು ವಿನಂತಿ ಏನೆಂದರೆ ಮಂಗಳೂರಿನಲ್ಲಿ ನೀವು ಚುನಾವಣೆ ಹತ್ತಿರದಲ್ಲಿರುವುದರಿಂದ ನಿಮ್ಮ ಪಕ್ಷದ ಸಾಧನೆ ಎಂದು ತೋರಿಸಲು ಹೊರಟಿರುವ ಹೊಸ ವೃತ್ತಗಳಲ್ಲಿ ದಯವಿಟ್ಟು ಕಾರಂಜಿಗಳನ್ನು ಮಾಡಬೇಡಿ. ಯಾಕೆಂದರೆ ಅದರಲ್ಲಿ ಚುನಾವಣೆಗೆ ಎರಡು ತಿಂಗಳು ಇರುವಾಗ ನೀರು ಹಾರಿಸಿ ಅದಕ್ಕೊoದಿಷ್ಟು ಲೈಟ್ ಬಿಟ್ಟು ದೂರದಿಂದ ಅದನ್ನೇ ಐದು ವರ್ಷಗಳ ಸರಕಾರದ ಶ್ರೇಷ್ಠ ಸಾಧನೆ ಎಂದು ಬಿಂಬಿಸಬಹುದು. ಆದರೆ ಚುನಾವಣೆ ನಡೆದು ಎರಡು ದಿನ ಕಳೆಯುವಷ್ಟರಲ್ಲಿ ಆ ವೃತ್ತಗಳಲ್ಲಿರುವ ಕಾರಂಜಿಗಳು ತಮ್ಮ ಸೇವೆ ನಿಲ್ಲಿಸಿದರೆ ಮತ್ತೇ ಏಳುವುದೇ ಇಲ್ಲ.
ಪಾಸ್‌ಪೋರ್ಟ್ ಆಫೀಸಿನ ಎದುರಿರುವ ನವಭಾರತ ವೃತ್ತವನ್ನೇ ತೆಗೆದುಕೊಳ್ಳಿ. ಅದು ಹೇಗಿದೆ ಶಾಸಕರೇ, ನೀವು ಬಿಷಪ್ ಹೌಸ್‌ನಿಂದ ಒಂದಿಷ್ಟು ಹೆಜ್ಜೆ ಈ ಕಡೆ ಹಾಕಿದರೆ ಅದು ಕಣ್ಣಿಗೆ ಬೀಳುತ್ತದೆಯಲ್ಲ, ಅದನ್ನು ನೀವು ಹೇಗೆ ಇಟ್ಟುಕೊಂಡಿರುತ್ತೀರಿ. ಅಲ್ಲಿಗ ನಮ್ಮ ಕನ್ನಡ ಧ್ವಜ ಕಾಣುತ್ತದೆ ಬಿಟ್ಟರೆ ಆ ಸ್ಥಳದಲ್ಲಿ ಗಿಡಗಂಟಿ ಬೆಳೆದು ನಿತ್ರಾಣಗೊಂಡಿವೆ. ಆದ್ದರಿಂದ ಈ ಬಾರಿ ಕಾರಂಜಿಗಳು ಬೇಡ. ಅದರ ಬದಲು ನಮ್ಮ ಮಂಗಳೂರಿನ ಕೀರ್ತಿಯನ್ನು ನಾಲ್ಕು ದಿಕ್ಕುಗಳಿಗೆ ಹರಡಿದ ಮಹಾನ್ ವ್ಯಕ್ತಿಗಳ ಮೂರ್ತಿಗಳನ್ನು ಅಲ್ಲಿ ಸ್ಥಾಪಿಸಿ. ಹಾಗಂತ ಮೂಲ್ಕಿ ಸುಂದರರಾಮ ಶೆಟ್ಟಿಯವರ ಮೂರ್ತಿ ನಿಲ್ಲಿಸಿ ಎಂದು ನಾನು ಹೇಳುವುದಿಲ್ಲ. ಯಾಕೆಂದರೆ ನೀವು ಈಗ ಮಾಡಿರುವ ವಿವಾದಗಳೇ ಸಾಕು. ನಿಮಗೆ ಸರಿ ಕಂಡ ನಾಯಕರ ಮೂರ್ತಿಗಳನ್ನು ನಿಲ್ಲಿಸಿ.
ಬೇಕಾದರೆ ನಿಮ್ಮ ಧರ‌್ಮದ ಮುಖಂಡರನ್ನು ಕೇಳಿ. ನಂತರ ಅವರು ಹೇಳಿದ ನಾಯಕರ ಮೂರ್ತಿಗಳಿಗೆ ಆದ್ಯತೆ ನೀಡಿ. ಉಳಿದರೆ ಬೇರೆ ನಾಯಕರಿಗೆ ಅವಕಾಶ ಕೊಡಿ. ಆದರೆ ಈ ಬಾರಿ ಮೂರ್ತಿಗಳನ್ನು ನಿಲ್ಲಿಸುವ ಚಿಂತನೆ ನಡೆಯಲಿ. ಆ ಮೂರ್ತಿಗಳ ಸುತ್ತಲೂ ಹೂಗಿಡ ನಿಲ್ಲಿಸುವ ಬದಲಿಗೆ, ಕರಾವಳಿ ಸಂಸ್ಕೃತಿಗೆ ಪೂರಕ ವಸ್ತು ನಿಲ್ಲಿಸಿ. ಆಗ ನೀವು ನೀರು ಹಾಕದೆ ಆ ಗಿಡಗಳು ಸೊರಗುವುದಿಲ್ಲ ಅಥವಾ ಒಂದು ಮಳೆಗಾಲದಿಂದ ಮತ್ತೊoದು ಮಳೆಗಾಲಕ್ಕೆ ಕಾಯಬೇಕಾಗುವುದಿಲ್ಲ.
ಅಷ್ಟಕ್ಕೂ ಕಾರಂಜಿ ಹಾಕಿಯೇ ಶೋ ತೋರಿಸಬೇಕು ಎಂದು ಮನಸ್ಸಿನಲ್ಲಿದ್ದರೆ ಅದನ್ನು ಮಾಡಿದ ಬಳಿಕ ಯಾವುದಾದರೂ ಶ್ರಮಜೀವಿ ಸಂಘಟನೆಗೆ ನಿರ್ವಹಣೆ ಜವಾಬ್ದಾರಿ ನೀಡಿ. ಅದು ಬಿಟ್ಟು ಯಾವುದೇ ಬ್ಯಾoಕ್‌ನವರಿಗೆ ಕೊಟ್ಟರೆ ಅದು ನಾಲ್ಕು ದಿನಕ್ಕೆ ಸೀಮಿತವಾಗುತ್ತದೆ. ಇನ್ನು ಈಗ ನೀವು ನಿರ್ವಹಣೆ ಕೊಟ್ಟಿರುವವರಿಂದ ಹಿಂಪಡೆದು ಹೊಸ ಒಪ್ಪಂದ ಬೇರೆಯವರೊಂದಿಗೆ ಮಾಡಿಕೊಳ್ಳಿ.
ಯಾವಾಗಲೂ ಮೊದಲು ಇದ್ದದ್ದನ್ನು ಸರಿ ಮಾಡಿ, ನಂತರ ಹೊಸ ಯೋಜನೆಗಳಿಗೆ ಶಿಲಾನ್ಯಾಸ ಮಾಡಬೇಕು. ಅದು ಬಿಟ್ಟು ಈಗ ಇರುವುದು ಮಣ್ಣು ತಿನ್ನುತ್ತಿದ್ದರೆ ಹೊಸದಕ್ಕೆ ಕಲ್ಲು ಹಾಕಿದರೆ ಯಾರಿಗೆ ಉಪಯೋಗ? ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ಮಾತ್ರ. ಇನ್ನು ಮಂಗಳೂರಿನ ಹೃದಯಭಾಗದಲ್ಲಿರುವ ಕ್ಲಾಕ್ ಟವರ್ ಅನ್ನು ಭರತ್ ಲಾಲ್ ಮೀನಾ ಅವರು ಜಿಲ್ಲಾಾಧಿಕಾರಿಯಾಗಿದ್ದಾಗ 1996 ರಲ್ಲಿ ತೆಗೆದು ಹಾಕಿದ್ದರು. ಅದರ ನಂತರ ಅಲ್ಲಿ ರಸ್ತೆ ವಿಸ್ತಾರವಾಯಿತು. ಅದರೊಂದಿಗೆ ಆಶ್ಚರ್ಯವಾದದ್ದು ಎಂದರೆ ಅಲ್ಲಿರುವ ವೃತ್ತವೂ ಅಗಲವಾಗಿದೆ.
ನೀವು ಸರ್ಕಲ್‌ಗೆ ಫೌಂಡೇಶನ್ ಹಾಕಿರುವಾಗಲೇ ಅದಕ್ಕೆ ಸಲಹೆ ಕೊಟ್ಟಿದ್ದೇನೆ. ನಾನು ನಿಮ್ಮ ಯೋಜನೆಗಳಿಗೆ ವಿರುದ್ಧ ಎಂದುಕೊಳ್ಳಬೇಡಿ. ನೀವು ಖರ್ಚು ಮಾಡುತ್ತಿರುವುದು ಜನರ ತೆರಿಗೆ ಹಣ, ಅದನ್ನು ಸಮರ್ಪಕವಾಗಿ ವಿನಿಯೋಗಿಸಬೇಕು ಎನ್ನುವುದಕ್ಕಾಗಿ ಇದೊಂದು ಯೋಜನೆ ಹೇಳುತ್ತಿದ್ದೇನೆ. ಅದು ಬಿಟ್ಟು ನೀವು ನಿಮ್ಮ ಮನೆ ಆವರಣದಲ್ಲಿ ಕಾರಂಜಿ ಹಾಕಿದ್ದಲ್ಲಿ ನಾನು ಮಾತನಾಡುತ್ತಿರಲಿಲ್ಲ. ಅಷ್ಟಕ್ಕೂ ನೀರು ಕೊರತೆ ಇರುವುದರಿಂದ ನೀವು ಮನೆ ಹೊರಗೆ ಕಾರಂಜಿ ಹಾಕಲು ಹೋಗುವುದಿಲ್ಲ. ನಿಮ್ಮ ಸರ್ಕಲ್‌ಗಳು ಒಮ್ಮೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾದ ಮೇಲೆ ಯಾವತ್ತಾದರೂ ಒಂದು ದಿನ ಅದು ಪತ್ರಿಕೆಗಳ ಮೂಲೆಯಲ್ಲಿ ಸುದ್ದಿ ಬರುತ್ತೆ ನೀರಿನ ಕೊರತೆ, ಕಾರಂಜಿ ಸ್ತಬ್ಧ. ಇದು ಬೇಕಾ?
Leave A Reply