ಪೊಲೀಸ್ ತನಿಖೆ ಕುರಿತು ಸುಳ್ಳು ವರದಿ: ವಾರ್ತಾಭಾರತಿ ವರದಿಗಾರನ ಬಂಧನ
ಮಂಗಳೂರು: ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣದ ಪೊಲೀಸ್ ಕಾರ್ಯಾಚರಣೆ ಕುರಿತು ಸುಳ್ಳು ಮಾಹಿತಿ ಸೃಷ್ಟಿಸಿ ಪೊಲೀಸರ ವಿರುದ್ಧ ವರದಿ ಮಾಡಿದ್ದ ಆರೋಪದ ಮೇಲೆ ವಾರ್ತಾಭಾರತಿ ಪತ್ರಿಕೆ ಬಂಟ್ವಾಳದ ವರದಿಗಾರನನ್ನು ಪೊಲೀಸರು ಬಂಧಿಸಿದ್ದಾರೆ. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ವರದಿಗಾರ ಇಮ್ತಿಯಾಜ್ ಬಂಧಿತ.
ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಆರೋಪಿ ಮನೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ಇದನ್ನೇ ಪೊಲೀಸ್ ದಾಳಿ ಎಂದು ಇಮ್ತಿಯಾಜ್ ವರದಿ ಮಾಡಿದ್ದು, ವರದಿಯಲ್ಲಿ ಪೊಲೀಸರು ತನಿಖೆ ವೇಳೆ ಕುರಾನ್ ಪ್ರತಿಗಳಿಗೆ ಹಾನಿ ಮಾಡಿದ್ದಾರೆ ಎಂದು ಸುಳ್ಳು ಸೃಷ್ಟಿಸಿ ವರದಿ ಮಾಡಲಾಗಿದೆ. ಅಲ್ಲದೇ ಸುಳ್ಳು ವರದಿ ಪ್ರಕಟಿಸಿ ತನಿಖೆಯನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸಲಾಗಿದೆ ಎಂದು ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ ಮೂಲಗಳು ತಿಳಿಸಿವೆ.
ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ್ ಕೊಲೆ ಆರೋಪಿ ಖಲಂದರ್ ಮನೆಗೆ ಮೇಲೆ ಪೊಲೀಸರು ದಾಳಿ ಮಾಡಿ ತನಿಖೆ ನಡೆಸಿದ್ದರು. ಈ ವೇಳೆ ಕುರಾನ್ ಗೆ ಪೊಲೀಸರು ಹಾನಿ ಮಾಡಿದ್ದಾರೆ ಎಂದು ಸುಳ್ಳು ವರದಿ ಪ್ರಕಟಿಸಲಾಗಿದೆ. ಅಲ್ಲದೇ ಸುಳ್ಳು ವರದಿ ಮಾಡಿ ಪೊಲೀಸರ ವಿರುದ್ಧ ಮುಸ್ಲಿo ಸಮುದಾಯವನ್ನು ಎತ್ತಿಕಟ್ಟಲ್ಲು ಪ್ರಯತ್ನಿಸಲಾಗಿದೆ ಎಂಬ ಆರೋಪಗಳು ವಾರ್ತಾಭಾರತಿ ಪತ್ರಿಕೆ ವರದಿಗಾರನ ವಿರುದ್ಧ ಕೇಳಿ ಬಂದಿವೆ.
ಇನ್ನು ಕುರಾನ್ ಪ್ರತಿಗಳನ್ನು ಹರಿದ ರೀತಿಯಲ್ಲಿ ಪೊಲೀಸ್ ಕಾರ್ಯಾಚರಣೆಯಲ್ಲಿ ಕುರಾನ್ ಹಾನಿ ಮಾಡಲಾಗಿದೆ ಎಂಬಂತೆ ಬಿಂಬಿಸಿದ ವೀಡಿಯೋ ವೈರಲ್ ಆಗಿತ್ತು. ಆದ್ದರಿಂದ ವಿಡಿಯೋ ಸೃಷ್ಟಿ ಹಿಂದೆಯೂ ವರದಿಗಾರನ ಕೈವಾಡದ ಆರೋಪವೂ ಇದೆ. ವರದಿಗಾರ ಇಮ್ತಿಯಾಜ್ ಮೇಲೆ 153ಅ, 505(2) ಐಪಿಸಿ ಸೆಕ್ಷನ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ.
ವರದಿಗಾರನದ್ದೇ ತಪ್ಪು ಎಂದ ಖಾದರ್
ವರದಿಗಾರ ಇಮ್ತಿಯಾಜ್ ಬಂಧನ ಕುರಿತು ಸಚಿವ ಯು.ಟಿ.ಖಾದರ್ ಅವರಿಗೆ ಪ್ರಶ್ನಿಸಿದಾಗ ‘ವರದಿಗಾರ ಇಮ್ತಿಯಾಜ್‌ನದ್ದೇ ತಪ್ಪು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಸಚಿವರ ಹೇಳಿಕೆಯೂ ಪೊಲೀಸರು ಯಾವುದೇ ತಪ್ಪು ಮಾಡಿಲ್ಲ. ವಿಚಾರಣೆ ವೇಳೆ ವಿನಾಕಾರಣ ಸುಳ್ಳು ಸೃಷ್ಟಿಸಿ, ವರದಿ ಮಾಡಲಾಗಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡಿದೆ.
Leave A Reply