ಅಂಡಮಾನ್-ನಿಕೋಬಾರ್ ಹೆಸರು ತೆಗೆದು ದೇಶಭಕ್ತರ ಹೆಸರಿಡಿ- ತರುಣ್ ವಿಜಯ್ ಆಗ್ರಹ
Special Coverage from Belgavi:
ಅಂಡಮಾನ್ ನಿಕೋಬಾರ್ ನ ಹೆಸರನ್ನು ಮೊದಲು ಬದಲಾಯಿಸಬೇಕು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಕಹಳೆ ಮೊಳಗಿದ ಸ್ಥಳ ಅದು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಭಾರತದ ಧ್ವಜವನ್ನು ಮೊದಲು ಹಾರಿಸಿದ್ದೇ ಅಲ್ಲಿಂದ. ಇಲ್ಲಿಂದಲೇ ಹೋರಾಟ ಪ್ರಾರಂಭ ಎಂದಿದ್ದರು. ಅಂತಹ ಪ್ರದೇಶದಕ್ಕೆ ನಮ್ಮ ದೇಶದ ವೀರ ಸ್ವಾತಂತ್ರ್ಯ ಸೇನಾನಿಗಳ ಹೆಸರನ್ನು ಇಡುವುದೇ ಸೂಕ್ತ ಎಂದು ಪಾಂಚಜನ್ಯ ಪತ್ರಿಕೆಯ ಸಂಪಾದಕರಾಗಿದ್ದ, ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಅಪ್ರತಿಮ ದೇಶಪ್ರೇಮಿ ತರುಣ್ ವಿಜಯ್ ಅವರು ಹೇಳುತ್ತಿದ್ದಂತೆ ಬೆಳಗಾವಿಯ ಕೆಎಲ್ ಇ ಸಭಾಂಗಣದಲ್ಲಿದ್ದ ಸಾವಿರಾರು ಜನರ ಮನಸ್ಸಿನಲ್ಲಿ ವಿದ್ಯುತ್ ಸಂಚಾರ.
ನಮ್ಮ ಸ್ವಾತಂತ್ರ್ಯ ಸೇನಾನಿಗಳನ್ನು ಕರೆದುಕೊಂಡು ಹೋಗಿ ಕತ್ತಲ ಕೋಣೆಯಲ್ಲಿ ಕೂಡಿ ಹಾಕಿ, ಅವರಿಗೆ ನಿರಂತರ ಚಿತ್ರಹಿಂಸೆ ಕೊಟ್ಟು, ಬಹಿರಂಗವಾಗಿ ಹಲವರ ರುಂಡ ಕತ್ತರಿಸಿ ಅಟ್ಟಹಾಸ ಮೆರೆಯುತ್ತಿದ್ದ ಬ್ರಿಟಿಷರ ಹೆಸರುಗಳನ್ನು ಇನ್ನು ಕೂಡ ಅಲ್ಲಿಗೆ ಇಟ್ಟಿರುವುದು ಸರಿಯಲ್ಲ. ಆ ಪ್ರದೇಶಕ್ಕೆ ದೇಶಪ್ರೇಮಿಗಳ ಹೆಸರನ್ನು ಇಡುವ ಮೂಲಕ ಹೊಸ ಪರಿಕಲ್ಪನೆ ಪ್ರಾರಂಭಿಸಬೇಕು. ನಮ್ಮ ಸ್ವಾಭಿಮಾನಕ್ಕೆ ಆ ಹೆಸರುಗಳು ಸೂಕ್ತವಲ್ಲ ಎಂದು ತರುಣ್ ವಿಜಯ್ ಹೇಳಿದರು. ಸುಭಾಷರ ಮೇಲೆ ವಿವೇಕಾನಂದರ, ನಿವೇದಿತಾ ಅವರ ಪ್ರಭಾವ ಸಾಕಷ್ಟಿದೆ. ವಿವೇಕಾನಂದರನ್ನು ಮಾತ್ರ ವೀರಸನ್ಯಾಸಿ ಎಂದು ಕರೆಯುತ್ತಾರೆ. ಸನ್ಯಾಸಿ ಎಂದರೆ ಎಲ್ಲವೂ ಇದ್ದು, ಎಲ್ಲವೂ ಅನುಭವಿಸಬಹುದಾಗಿದ್ದರೂ ಎಲ್ಲವನ್ನು ತ್ಯಜಿಸಿ ಧರ್ಮ. ದೇಶ ರಕ್ಷಣೆಗಾಗಿ ಹೊರಡುವುದಿದೆಯಲ್ಲ, ಅವರನ್ನು ಸನ್ಯಾಸಿ ಎಂದು ಕರೆಯುತ್ತಾರೆ. ಅದರಲ್ಲಿಯೂ ವೀರಸನ್ಯಾಸಿ ಎಂದರೆ ವಿವೇಕಾನಂದರು ಮಾತ್ರ. ರಾಮಕೃಷ್ಣಾಶ್ರಮದ ಸಂತರನ್ನು ಆ ಹೆಸರಿನಿಂದ ಕರೆಯಬಹುದು ಎಂದು ಹೇಳಿದರು.
ಅಸ್ಪಶ್ಯತೆಯ ವಿರುದ್ಧ ಹೋರಾಡಿದವರು ವಿವೇಕಾನಂದರು. ಯಾರ ವಿಚಾರ ಸ್ವಚ್ಚವಾಗಿರುತ್ತೆಯೋ ಅವರನ್ನು ಜಾತಿಯ ಕಾರಣಕ್ಕೆ ಮೂಲೆಗುಂಪು ಮಾಡಬಾರದು. ನಾನು ಹಿಂದೂ ಎನ್ನುವುದು ಗುರಿ ಇರಲಿ, ಆದರೆ ಜಾತಿಭೇದ ಮಾಡಿ ಪ್ರಯೋಜನವಿಲ್ಲ. ವಿವೇಕಾನಂದರು ಮೆಕ್ ಇನ್ ಇಂಡಿಯಾ ಕಲ್ಪನೆಯನ್ನು ನೂರು ವರ್ಷಗಳ ಹಿಂದೆಯೇ ಯೋಚಿಸಿದ್ದರು ಎಂದು ತರುಣ್ ವಿಜಯ್ ಘಟನೆಗಳೊಂದಿಗೆ ವಿವರಿಸಿದರು.
ಭಾರತದ ಮುಂದಿನ ಗುರಿ ಇರಬೇಕಾಗಿರುವುದು ಹೊರದೇಶದ ವಿದ್ಯಾರ್ಥಿಗಳು ನಮ್ಮ ದೇಶದಲ್ಲಿ ಕಲಿಯುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಬರುವ ದಿನಗಳಲ್ಲಿ ಒಂದು ಡಾಲರ್ ಗೆ 17 ರೂಪಾಯಿ ಆಗುವಂತಹ ಕೆಲಸ ಮೋದಿಯವರು ಮಾಡುತ್ತಿದ್ದಾರೆ. ನಮ್ಮ ಮೊದಲ ಶತ್ರು ಪಾಕಿಸ್ತಾನದೊಂದಿಗೆ ಚೀನಾ ಕೂಡ ಹೌದು. ಕಳೆದ ನೂರು ವರ್ಷಗಳಲ್ಲಿ ಭಾರತ ಭೌಗೋಳಿಕವಾಗಿ ಚಿಕ್ಕದಾಗುತ್ತಿದೆ. ಹಾಗೆ ಚೀನಾ ಪ್ರದೇಶ ವಿಸ್ತರಣೆಯಾಗಿದೆ ಎಂದು ತರುಣ್ ವಿಜಯ್ ಹೇಳಿದರು.
ಅಜಾದ್ ಹಿಂದ್ ಫೌಜ್ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ಅಪ್ರತಿಮ ದೇಶಭಕ್ತ ಸುಭಾಷ್ ಚಂದ್ರ ಬೋಸ್ ದೇಶದ ಮೊದಲ ಪ್ರಧಾನ ಮಂತ್ರಿಯಾಗಬೇಕಿತ್ತು. ಅವರು ಬಿಟ್ಟು ಹೋಗಿರುವ ಕನಸುಗಳನ್ನು ನಾವು ನೇರವೇರಿಸಬೇಕಿದೆ. ಒಂದು ವೇಳೆ ಸ್ವಾಮಿ ವಿವೇಕಾನಂದರು ಈಗ ಇರುತ್ತಿದ್ದರೆ ನಾನು ಅವರ ಕಟ್ಟಾ ಅನುಯಾಯಿಯಾಗುತ್ತಿದ್ದೆ. ಆದರೆ ನಮ್ಮ ತಲೆಮಾರಿಗೆ ಆ ನರೇಂದ್ರ ಸಿಗದಿದ್ದರೂ ಈ ನರೇಂದ್ರ ಸಿಕ್ಕಿರುವುದರಿಂದ ಭಾರತಾಂಬೆಯ ಸುರಕ್ಷತೆ ಬಗ್ಗೆ ಚಿಂತೆ ಬೇಡಾ ಎಂದು ಹೇಳಿದರು ತರುಣ್ ವಿಜಯ್. ಅವರ ಭಾಷಣದ ಮಧ್ಯದಲ್ಲಿ ಆಗಾಗ ಜನರ ಚಪ್ಪಳೆ ನಿರಂತರವಾಗಿ ಕೇಳಿಬರುತ್ತಿತ್ತು
Leave A Reply