ಹಾರಿಕಾ ಎನ್ನುವ ವಿಸ್ಮಯ!
Special Report from Belgavi:
11 ವರ್ಷದ ಮಗು ಏನು ಮಾಡಬಹುದು. ಅಂಗಣದಲ್ಲಿ ಕುಂಟೆ ಬಿಲ್ಲೆ ಆಡಬಹುದು. ತನಗೆ ಸಿಕ್ಕಿದ ಆಟಿಗೆಗಳಲ್ಲಿ ತಲ್ಲೀನವಾಗಬಹುದು. ಈಗಿನ ಮಕ್ಕಳು ಹೆಚ್ಚೆಂದರೆ ಮೊಬೈಲಿನಲ್ಲಿ ವಿಡಿಯೋ ಗೇಮ್ ಗಳನ್ನು ಆಡಬಹುದು. ಅದಕ್ಕಿಂತ ಏನಾದರೂ ಹೆಚ್ಚೆಂದರೆ ಡ್ಯಾನ್ಸ್ ಮಾಡಬಹುದು, ಹಾಡಬಹುದು. ಆದರೆ ಹಾರಿಕಾ ಎನ್ನುವ 11 ವರ್ಷದ ಬಾಲೆ ಬೆಂಗಳೂರಿನ ವಿವಿಧ ಶಾಲೆಗಳಿಗೆ ಹೋಗಿ ಭಾಷಣ ಮಾಡುತ್ತಾಳೆ. ರಸ್ತೆಗೆ ಇಳಿದು ರಿಕ್ಷಾಚಾಲಕರಿಗೆ, ಅಂಗಡಿಯವರಿಗೆ ಆನ್ ಲೈನ್ ನಲ್ಲಿ ವ್ಯವಹಾರ ಮಾಡುವುದು ಹೇಗೆ ಎಂದು ಕಲಿಸುತ್ತಾಳೆ.
ಪ್ರಧಾನಿ ನರೇಂದ್ರ ಮೋದಿಯವರ ಕ್ಯಾಶ್ ಲೆಸ್ ಇಕಾನಮಿಯ ಲಾಭಗಳಿಂದ ಹಿಡಿದು ಸ್ವಾಮಿ ವಿವೇಕಾನಂದ, ಸೋದರಿ ನಿವೇದಿತಾ ಜೀವನ ಚರಿತ್ರೆಯ ತನಕ ವಿವಿಧ ವಿಷಯಗಳ ಮೇಲೆ ನಿರ್ಗಳವಾಗಿ ಮಾತನಾಡುತ್ತಾಳೆ. ಫ್ರೀ ಇದ್ದಾಗ ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ಅಶ್ರಫುಲ್ಲಾ ಖಾನ್ ನಂತರ ಸ್ವಾತಂತ್ರ್ಯ ಯೋಧರ ಬಗ್ಗೆ ಪುಸ್ತಕಗಳನ್ನು ಓದುತ್ತಾಳೆ. ಅದರಲ್ಲಿರುವ ಪಾಯಿಂಟ್ ಗಳನ್ನು ನೋಟ್ ಮಾಡಿಟ್ಟುಕೊಳ್ಳುತ್ತಾಳೆ. ನಂತರ ಈ ಬಗ್ಗೆ ಶಾಲೆಗಳಲ್ಲಿ ಭಾಷಣ ಮಾಡುತ್ತಾಳೆ. ಇಲ್ಲಿಯ ತನಕ 20 ಶಾಲೆಗಳಲ್ಲಿ ಭಾಷಣ ಮಾಡಿದ್ದಾಳೆ. ಒಂದೊಂದು ಕಡೆ ಸರಾಸರಿ 20 ನಿಮಿಷ ಮಾತನಾಡುತ್ತಾಳೆ. ಇದೆಲ್ಲ ಹೇಗೆ ಸಾಧ್ಯವಾಯಿತು ಎಂದು ಆಟೋ ಚಾಲಕರಾಗಿರುವ ಹಾರಿಕಾಳ ತಂದೆಯವರಲ್ಲಿ ಕೇಳಿದಾಗ ಅವರು ಕೊಟ್ಟ ಉತ್ತರ “ನಾವು ಅವಳಿಗೆ ಚಿಕ್ಕಂದಿನಿಂದಲೇ ಟಿವಿಯಲ್ಲಿ ಬರುತ್ತಿದ್ದ ಚಕ್ರವರ್ತಿ ಸೂಲಿಬೆಲೆಯವರ ಮಾತುಗಳನ್ನು ಕೇಳಿಸುತ್ತಿದ್ದೆವು. ಅವಳು ಆವತ್ತಿನಿಂದಲೇ ತನಗೆ ಅರ್ಥವಾಗದ ವಿಷಯಗಳ ಬಗ್ಗೆ ಪ್ರಶ್ನೆ ಕೇಳಿ ತಿಳಿದುಕೊಳ್ಳುತ್ತಿದ್ದಳು, ಬರುಬರುತ್ತಾ ಬೆಂಗಳೂರಿನಲ್ಲಿ ಚಕ್ರವರ್ತಿಯವರ ಕಾರ್ಯಕ್ರಮ ಎಲ್ಲಿ ಇದ್ದರೂ ನಾನು ಅವಳನ್ನು ಕರೆದುಕೊಂಡು ಹೋಗುತ್ತಿದ್ದೆ.
ಅವಳು ತದೇಕಚಿತ್ತದಿಂದ ಕೇಳುತ್ತಿದ್ದಳು. ಚಕ್ರವರ್ತಿಯ ಪರಿಚಯವಾದ ನಂತರ ಅವರಿಂದ ಏನು ಪ್ರೇರಣೆಯಾಯಿತೊ ಮಂಗಳೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿ ಅವಳು ಪ್ರಥಮ ಬಾರಿಗೆ ಭವ್ಯ ವೇದಿಕೆಯಲ್ಲಿ ಮಾತನಾಡಿದಳು. ನಂತರ ನಡೆದದ್ದು ಪವಾಡ. ಅವಳ ಭಾಷಣದ ಕಾರ್ಯಕ್ರಮಕ್ಕಾಗಿ ಬೇರೆ ಬೇರೆ ಶಾಲೆಗಳ ಮುಖ್ಯೋಪಾಧ್ಯಾಯರು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಆದರೆ ನಾವು ಅವಳ ಮೇಲೆ ಒತ್ತಡ ತರುತ್ತಿಲ್ಲ. ಅವಳಿಗೆ ಎಷ್ಟು ಸಾಧ್ಯವೋ ಅಷ್ಟು ಮಾತ್ರ ಭಾಷಣಗಳನ್ನು ಮಾಡಲು ಬಿಟ್ಟಿದ್ದೇವೆ. ಅಗಸ್ಟ್ ತಿಂಗಳ ಒಂದನೇ ತಾರೀಕಿನಿಂದ 15 ನೇ ತಾರೀಕಿನ ಒಳಗೆ ಬರುವ ಶನಿವಾರಗಳಂದು ಕನಿಷ್ಟ 3 ರಿಂದ 4 ಶಾಲೆಗಳಿಗೆ ಅವಳ ಸ್ವತ: ಕರೆದುಕೊಂಡು ಹೋಗಿ ಭಾಷಣ ಮಾಡಿಸಿದ್ದೇನೆ. ಅನೇಕ ಟಿವಿ, ಪತ್ರಿಕೆಗಳಲ್ಲಿ ಸಂದರ್ಶನ ಮೂಡಿಬಂದಿದೆ. ಸದ್ಯ ಅವಳಿಗೆ ಸಿಕ್ಕಿರುವ ಪ್ರಚಾರ ನಮಗೂ ಸಾಕೆನಿಸಿದೆ. ಯಾಕೆಂದರೆ ಈ ವಯಸ್ಸಿಗೆ ಪ್ರಚಾರ ಜಾಸ್ತಿಯಾದರೆ ಅದು ಅವಳ ಬಾಲ್ಯಾವಸ್ಥೆಗೆ ದಕ್ಕೆ ತರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಒಂದಿಷ್ಟು ಜಾಗ್ರತೆ ಕೂಡ ವಹಿಸುತ್ತಿದ್ದೇವೆ ಎಂದು ಹಾರಿಕಾ ತಂದೆ ಮಂಜುನಾಥ್ ಹೇಳುತ್ತಾರೆ.
ಹಾರಿಕಾ ಮಂಜುನಾಥ್ ಭಾಷಣ ಮಾಡಿದ ಕಡೆ ಹೆಚ್ಚಾಗಿ ಪುಸ್ತಕಗಳೇ ಬಹುಮಾನವಾಗಿ ಸಿಗುತ್ತಿರುವುದರಿಂದ ಅದು ಅವಳ ಓದಿಗೆ ಮತ್ತು ಮುಂದಿನ ಭಾಷಣಕ್ಕೂ ಅನುಕೂಲವಾಗುತ್ತದೆ. ಮೈಸೂರಿನ ನೆಲೆ ಎಂಬ ಸಂಸ್ಥೆಯವರು ಕಾರ್ಯಕ್ರಮ ಮಾಡುವಾಗ ಅಶ್ವಿನಿ ಅಂಗಡಿ ಹಾಗೂ ಹಾರಿಕಾ ಅವರನ್ನು ಕರೆದಾಗ ಒಂದೇ ವೇದಿಕೆಯಲ್ಲಿ ತಮಗೆ ಅಶ್ವಿನಿ ಅವರೊಂದಿಗೆ ಭಾಷಣ ಮಾಡಲು ಸಿಕ್ಕ ಅವಕಾಶದ ಬಗ್ಗೆ ಹೇಳುವಾಗ ಹಾರಿಕಾ ಕಣ್ಣಲ್ಲಿ ಖುಷಿಯ ಮಿಂಚು ಹರಿಯುತ್ತದೆ.
ಕೇವಲ ಭಾಷಣ ಮಾತ್ರವಲ್ಲ ಹಾರಿಕಾ ಛದ್ಮವೇಷ ಸ್ಪರ್ಧೆಯಲ್ಲಿ ರಾಣಿ ಕಿತ್ತೂರು ಚೆನ್ನಮ್ಮ ವೇಷ ಧರಿಸಿ ಸಭಿಕರನ್ನು ತನ್ನ ಪ್ರಖರ ಮಾತುಗಳಿಂದ ದಿಗ್ಘಮೆ ಮೂಡಿಸಿದ್ದಾಳೆ. ಭರತನಾಟ್ಯವನ್ನು ಕೂಡ ಕಲಿತಿರುವ ಹಾರಿಕಾ “ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ” ಎನ್ನುವ ವಿಷಯದ ಮೇಲೆ 20 ವೇದಿಕೆಯಲ್ಲಿ ಮಾತನಾಡಿದ್ದಾಳೆ. ಇಲ್ಲಿಯವರೆಗೆ ಒಟ್ಟು 40 ಕಾರ್ಯಕ್ರಮಗಳನ್ನು ನೀಡಿರುವ ಹಾರಿಕಾ ಅವರ ತಂದೆ ಮಂಜುನಾಥ್ ವೃತ್ತಿಯಲ್ಲಿ ಆಟೋಚಾಲಕರಾಗಿದ್ದು, ತಾಯಿ ರುಕ್ಮಿಣಿ ಗೃಹಿಣಿಯಾಗಿದ್ದಾರೆ.
ಪ್ರಸ್ತುತ ಬೆಂಗಳೂರಿನ ಹೋಪ್ ಎನ್ನುವ ಶಾಲೆಯಲ್ಲಿ ಕಲಿಯುತ್ತಿರುವ ಹಾರಿಕಾ ಬಗ್ಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಟ್ವಿಟರ್ ನಲ್ಲಿ ಹೊಗಳಿದ್ದಾರೆ. ಶೈಕ್ಷಣಿಕವಾಗಿಯೂ ಉತ್ತಮ ಸಾಧನೆ ಮಾಡುತ್ತಿರುವ ಹಾರಿಕಾ ಅವರು ಇತ್ತೀಚೆಗೆ ತಮಗೆ ಉಡುಗೊರೆಯಾಗಿ ಬಂದ ಐದು ಸಾವಿರ ರೂಪಾಯಿಗಳನ್ನು ಬೇರೊಬ್ಬ ಅಶಕ್ತ ಬಡ ಹೆಣ್ಣುಮಗುವಿನ ವೈದ್ಯಕೀಯ ಖರ್ಚಿಗೆ ಕೊಟ್ಟು ಈಗಲೇ ತನ್ನ ಬದುಕು ಬೇರೆಯವರಿಗೆ ಮಾದರಿಯಾಗಿ ಇರುವ ಸಂದೇಶ ಸಾರಿದ್ದಾಳೆ. ಅವಳ ಸಾಧನೆ ಎಲ್ಲರಿಗೂ ಪ್ರೇರಣೆಯಾಗಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.
Leave A Reply