ಭಕ್ರೀದ್ ಗೆ ರಜೆ ಹೊಂದಿಸುವ ತನ್ವೀರ್ ಸೇಠ್ ಅವರೇ ನವರಾತ್ರಿಗೆ ಯಾಕೆ ಹೀಗೆ ಮಾಡುತ್ತೀರಿ!
ನಾನು ಯಾವ ಜಾತಿ, ಧರ್ಮದ ವಿರುದ್ಧವೂ ಮಾತನಾಡುತ್ತಿಲ್ಲ. ನಾನು ಇವತ್ತು ಮಾತನಾಡುತ್ತಿರುವುದು ಮಕ್ಕಳ ಪರವಾಗಿ. ಆದರೆ ಕರ್ನಾಟಕ ಸರಕಾರದ ಘನವೆತ್ತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಸೂಕ್ಷ್ಮ ಸಂವೇದನೆಯನ್ನು ಕಳೆದುಕೊಂಡಿರುವುದರಿಂದ ನನ್ನ ಆಕ್ರೋಶ ಈ ಜಾತ್ಯಾತೀತರ ಮೇಲೆ ಹೋಗಿದೆ, ಅಷ್ಟೇ. ಹಾಗಂತ ಇವರು ಸಂವೇದನೆಯನ್ನು ಕಳೆದುಕೊಂಡಿರುವುದು ಹಿಂದೂಗಳ ಧಾರ್ಮಿಕ ಹಬ್ಬಗಳ ವಿಷಯದಲ್ಲಿ ಮಾತ್ರವಾಗಿರುವುದರಿಂದ ಇವತ್ತಿನ ನನ್ನ ಬರವಣಿಗೆಯಲ್ಲಿ ಜಾತಿ, ಧರ್ಮ ಅಡಗಿದೆ ಬಿಟ್ಟರೆ ಇದು ಉದ್ದೇಶಪೂರಿತವಲ್ಲ.
ಹಿಂದೂಗಳ ಪಾಲಿಕೆ ನವರಾತ್ರಿ ಎನ್ನುವುದು ದೊಡ್ಡ ಧಾರ್ಮಿಕ ಹಬ್ಬ. ಹಿಂದೂಗಳಲ್ಲಿ ಕನಿಷ್ಟ 95% ಜನರು ಈ ಒಂಭತ್ತು ದಿನಗಳಲ್ಲಿ ದೇವಿ ದೇವಸ್ಥಾನಗಳಿಗೆ ತೆರಳಿ ಸೇವೆ ಮಾಡಿಸಿ ದೇವರ ಪ್ರಸಾದ ಸ್ವೀಕರಿಸಿ ಬರುವುದು ಸಂಪ್ರದಾಯ. ಇನ್ನು ಒಂದು ಊರಿನಲ್ಲಿ ಕನಿಷ್ಟ ಮೂರ್ನಾಕು ಕಡೆ ಶಾರದಾ ಮಾತೆಯ ವಿಗ್ರಹವನ್ನು ಪ್ರತಿಷ್ಟಾಪಿಸಿ ಸಂಭ್ರಮ ಎಲ್ಲಾ ಕಡೆ ಮನೆಮಾಡಿರುತ್ತದೆ. ನಮ್ಮ ರಾಜ್ಯದಲ್ಲಿ ಮೈಸೂರು ನಂತರ ಅತ್ಯಂತ ಹೆಚ್ಚು ವೈಭವದಿಂದ ನಡೆಯುವುದು ನಮ್ಮ ಮಂಗಳೂರು ದಸರಾ. ಕುದ್ರೋಳಿ ಗೋಕರ್ಣ ಕ್ಷೇತ್ರದಲ್ಲಿ ನವರಾತ್ರಿಯ ಸೊಬಗನ್ನು ಕಣ್ಣು ತುಂಬಲು ನಮ್ಮ ಜಿಲ್ಲೆ, ಕರಾವಳಿಯ ಮೂಲೆ ಮೂಲೆಗಳಿಂದ ಜನರು ಬಂದು ಸಡಗರದಲ್ಲಿ ಪಾಲ್ಗೊಳ್ಳುತ್ತಾರೆ. ನಾಡಿದ್ದು 21 ರಿಂದ ದಸರಾ ಪ್ರಾರಂಭವಾಗುತ್ತದೆ. ಆವತ್ತಿನಿಂದ ಹುಲಿವೇಷಗಳ ಅಬ್ಬರ, ತಾಸೆ, ಡೋಲಿನ ಮಾರ್ದನಿ ನಮ್ಮೆಲ್ಲರ ಕಿವಿಗೆ ಅಪ್ಪಳಿಸಲು ಶುರುವಾಗುತ್ತದೆ. ಹುಲಿವೇಷಗಳು ಅರ್ಧ ಕಿಲೋ ಮೀಟರ್ ದೂರ ಇವೆ ಎನ್ನುವಾಗಲೇ ಮಕ್ಕಳ ಮುಖದಲ್ಲಿ ಅದೇನೊ ಕುತೂಹಲ. ತಮ್ಮ ರಸ್ತೆಯಲ್ಲಿ ಹುಲಿವೇಷದ ನರ್ತನ ಶುರುವಾಗುತ್ತಿದ್ದಂತೆ ಆ ಕೇರಿಯ ಎಲ್ಲಾ ಮಕ್ಕಳು ಅಲ್ಲಿ ಧಾವಿಸುತ್ತಾರೆ. ಹುಲಿ ವೇಷದ ತಂಡ ತಮ್ಮ ಕೇರಿ, ಓಣಿಯಲ್ಲಿ ನಲಿದು ಹೋದ ಮೇಲೆ ಅದನ್ನು ಒಂದಿಷ್ಟು ದೂರ ಹಿಂಬಾಲಿಸಿಕೊಂಡು ಹೋಗುವ ಖುಷಿ ಅವರಲ್ಲಿ ಇರುತ್ತದೆ. ಒಂದರಿಂದ ಒಂಭತ್ತನೇ ತರಗತಿಯ ತನಕದ ಮಕ್ಕಳ ಈ ಖುಷಿಯನ್ನು ತಡೆಯಲು ಯಾರೂ ಹೋಗುವುದಿಲ್ಲ. ಆದರೆ ನಮ್ಮ ರಾಜ್ಯ ಸರಕಾರ ಹೋಗಿದೆಯಲ್ಲ, ಅದೇ ಅಸಹ್ಯ.
ಈ ಒಂಭತ್ತು ದಿನಗಳು ಮಕ್ಕಳ ಪಾಲಿಗೆ ಕೇವಲ ಸಂಭ್ರಮ. ಆ ಸಮಯದಲ್ಲಿ ಪೋಷಕರು ಕೂಡ ಮಕ್ಕಳಿಗೆ ಖುಷಿಯಾಗಲು ವಿವಿಧ ವೇಷಧಾರಿಗಳು ಮನೆಗೆ ಬಂದಾಗ ಇವರ ಕೈಯಿಂದಲೇ ಹಣ ಕೊಡಿಸುತ್ತಾರೆ. ಈ ಎಲ್ಲ ಖುಷಿಗಳನ್ನು ಈ ಸಲ ರಾಜ್ಯ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂತ್ರಿ ತನ್ವೀರ್ ಸೇಠ್ ಅವರು ಕಿತ್ತುಕೊಂಡಿದ್ದಾರೆ. ಹೇಗೆಂದರೆ ನವರಾತ್ರಿಯ ಈ ಸಮಯದಲ್ಲಿಯೇ ಅವರು ಪರೀಕ್ಷೆಗಳನ್ನು ಇಟ್ಕೊಂಡಿರುವುದು.
ನವರಾತ್ರಿ ಈ ಬಾರಿ ತಿಂಗಳ ಮುಂಚಿತವಾಗಿ ಬಂದಿರಬಹುದು. ಹಾಗಂತ ಇದು ಸಡನ್ನಾಗಿ ಹತ್ತು ದಿನಗಳ ಮೊದಲು ಗೊತ್ತಾಗುವುದು ಅಲ್ಲ. ನಿಮಗೆ ವರ್ಷ ಪ್ರಾರಂಭವಾಗುವಾಗಲೇ ಕ್ಯಾಲೆಂಡರ್ ನೋಡಿದಾಗ ಗೊತ್ತಾಗುತ್ತೆ. ಅದಕ್ಕೆ ಸರಿಯಾಗಿ ಮಕ್ಕಳ ಪರೀಕ್ಷೆಯನ್ನು ಈ ಧಾರ್ಮಿಕ ಹಬ್ಬ, ಉತ್ಸವ ಆದ ಹದಿನೈದು ದಿನಗಳ ನಂತರವೇ ಇಟ್ಟುಕೊಳ್ಳಬಹುದು. ಉದಾಹರಣೆಗೆ ಈ ಚುನಾವಣಾ ಆಯೋಗ ಚುನಾವಣಾ ದಿನಾಂಕಗಳನ್ನು ಘೋಷಿಸುವಾಗ ಆವತ್ತು ಏನಾದರೂ ವಿಶೇಷ ಇದೆಯಾ ಎಂದು ನೋಡುತ್ತದೆಯಲ್ಲ, ಹಾಗೆ. ಏನು ಇಲ್ಲದೆ ಇದ್ದ ದಿನಗಳನ್ನೇ ನೋಡಿ ಮತದಾನದ ದಿನಗಳನ್ನು ಫಿಕ್ಸ್ ಮಾಡುವುದಿಲ್ಲವೇ. ಹಾಗೆ ಯಾಕೆ ಇಲ್ಲಿಯೂ ಮಾಡುವುದಿಲ್ಲ?
ನವರಾತ್ರಿಯ ಸಮಯದಲ್ಲಿ ಪರೀಕ್ಷೆಗಳನ್ನು ಇಡುವುದು ಬೇಡಾ, ಅದರ ನಂತರ ಅಕ್ಟೋಬರ್ ಕೊನೆಯ ವಾರದಲ್ಲಿ ಇಟ್ಟು ಬಿಡೋಣ, ಏನು ಆಗುವುದಿಲ್ಲ. ಮಕ್ಕಳು, ಹಬ್ಬದ ಸಂಭ್ರಮವನ್ನು ಅನುಭವಿಸಲಿ ಎಂದು ಸಚಿವರು ಹೇಳಬಹುದಿತ್ತು. ಹಾಗೆ ಒಂದು ವೇಳೆ ಅವರು ಮಾಡಿದಿದ್ದರೆ ಮಕ್ಕಳ ದೃಷ್ಟಿಯಲ್ಲಿ ದೊಡ್ಡವರಾಗುತ್ತಿದ್ದರು. ಆದರೆ ತನ್ವೀರ್ ಸೇಠ್ ಹಾಗೆ ಮಾಡಿಲ್ಲ.
ರಜೆಗಳನ್ನು ಹಬ್ಬಕ್ಕೆ ಸರಿಯಾಗಿ ಅಡ್ಜಸ್ಟ್ ಮೆಂಟ್ ಮಾಡಿ ಇಡಲು ಆಗುವುದಿಲ್ಲ ಎಂದು ಮಾತ್ರ ನನ್ನ ಹತ್ರ ಹೇಳಲು ಬರಬೇಡಿ ಸಚಿವರೇ. ಏಕೆಂದರೆ ನೀವು ಮನಸ್ಸು ಮಾಡಿದರೆ ಅದು ಆಗುತ್ತೆ ಎಂದು ಸಾಬೀತಾಗಿದೆ. ಅದಕ್ಕೆ ಸಾಕ್ಷಿ ಇದೇ ತಿಂಗಳು ಸಿಕ್ಕಿದೆ. ಮೊನ್ನೆ ಭಕ್ರೀದ್ ಹಬ್ಬ ಮಂಗಳೂರಿನಲ್ಲಿ ಒಂದು ದಿನ ಮೊದಲು ಆಚರಿಸಲು ಇಲ್ಲಿನ ಧರ್ಮಗುರುಗಳು ತೀರ್ಮಾನಿಸಿದ್ದರು. ಆದರೆ ರಾಜ್ಯ ಸರಕಾರ ಸೆಪ್ಟೆಂಬರ್ 2 ಕ್ಕೆ ರಾಜ್ಯದಲ್ಲಿ ಸರಕಾರಿ ರಜೆ ಘೋಷಿಸಿತ್ತು.
ಆದರೆ ಇಲ್ಲಿನ ಮುಸ್ಲಿಂ ನಿಯೋಗ ಮನವಿ ಮಾಡಿದ ನಂತರ ಕರಾವಳಿಯಲ್ಲಿ ಭಕ್ರೀದ್ ಆಚರಣೆಗೆ ಅನುಕೂಲವಾಗುವಂತೆ ರಜೆಯನ್ನು ಒಂದು ದಿನಮೊದಲೇ ನಿಗದಿಪಡಿಸಿ ಸೂಚನೆ ಹೊರಡಿಸಲಾಗಿತ್ತು. ಭಕ್ರೀದ್ ಗೆ ಆಗುವುದಾದರೆ ನವರಾತ್ರಿಗೆ ಯಾಕೆ ಆಗಲ್ಲ. ಇನ್ನು ಸಮಯ ಮಿಂಚಿಲ್ಲ. ಯೋಚಿಸಿ. ಸಾಧ್ಯವಾದರೆ ನವರಾತ್ರಿಯ ಸಮಯದಲ್ಲಿ ಬಂದಿರುವ ಎಲ್ಲ ಪರೀಕ್ಷೆಗಳನ್ನು ಮುಂದೂಡಿ. ಪುಣ್ಯ ಕಟ್ಟಿಕೊಳ್ಳಿ
Leave A Reply