ಗೌರಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಸೋನಿಯಾ ರಾಹುಲ್, ಯೆಚೂರಿ ವಿರುದ್ಧ ದಾವೆ
ಮುಂಬೈ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ಆರೆಸ್ಸೆಸ್ ಕೈವಾಡ ಇದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ಮುಂಬೈನಲ್ಲಿರುವ ಆರೆಸ್ಸೆಸ್ ಕಾರ್ಯಕರ್ತ ಹಾಗೂ ವಕೀಲ ಧ್ರುತಿಮನ್ ಜೋಷಿ ದೂರು ನೀಡಿದ್ದಾರೆ.
ನಿರಾಧಾರವಾಗಿ ಆರೋಪ ಮಾಡುವ ಮೂಲಕ ಈ ಪ್ರಮುಖ ರಾಜಕಾರಣಿಗಳು ಸಂಘಟನೆಯ ಹೆಸರಿಗೆ ಕಪ್ಪು ಮಸಿ ಬಳಿಯಲು ಯತ್ನಿಸಿದ್ದಾರೆ. ಇದರಿಂದ ಸಾರ್ವಜನಿಕವಾಗಿ ಸಂಘಟನೆಗೆ ಅವಮಾನವಾಗಿದೆ. ಹಾಗಾಗಿ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕುರ್ಲಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದೇನೆ ಎಂದು ಜೋಷಿ ದಾವೆ ಹೂಡಿದ ಬಳಿಕ ಮಾಧ್ಯಮದವರಿಗೆ ತಿಳಿಸಿದ್ದಾರೆ.
“ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದು, ಯಾರು ಏನು ಬೇಕಾದರೂ ಮಾಡಿಕೊಳ್ಳಲಿ, ಕಾನೂನಾತ್ಮಕವಾಗಿಯೇ ನಾನು ಹೋರಾಡುತ್ತೇನೆ” ಎಂದು ಸೀತಾರಾಮ್ ಯೆಚೂರಿ ಪ್ರತಿಕ್ರಿಯಿಸಿದ್ದಾರೆ.
ಗೌರಿ ಹತ್ಯೆ ಬಳಿಕ, “ಆರೆಸ್ಸೆಸ್, ಬಿಜೆಪಿಯನ್ನು ವಿರೋಧಿಸಿದರೆ ಸಾವೇ ಗತಿ’ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಸೋನಿಯಾ ಗಾಂಧಿ, ಸೀತಾರಾಮ್ ಯೆಚೂರಿ ಸಹ ಇದೇ ಧಾಟಿಯಲ್ಲಿ ಹೇಳಿಕೆ ನೀಡಿದ್ದರು.
Leave A Reply