ವೈದ್ಯರ ಪ್ರಮಾದಕ್ಕೆ ಮೆದುಳು ರೋಗದಿಂದ ಬಳಲುತ್ತಿರುವ ದಿವ್ಯಾಳಿಗೆ ನೆರವು ಬೇಕಿದೆ!
ಭಗವಂತ ನೀನು ಹೀಗೆಕೆ ಮಾಡಿದೆ ಎಂದು ಒಂದು ಕುಟುಂಬ ಕೇಳುತ್ತದೆ. ಯಾಕೆಂದರೆ ಹಾಡುತ್ತಾ ಕುಣಿಯುತ್ತಾ ಬಾಲ್ಯ ಕಳೆಯ ಬೇಕಿದ್ದ ಬಾಲಕಿಯ ಮೆದುಳು ,ಕೈ ಕಾಲು ಸ್ವಾಧೀನ ಕಿತ್ತುಕೊಂಡು ಹಾಸಿಗೆ ಹಿಡಿಯುವಂತೆ ಮಾಡಿದ ಹೃದಯ ವಿದ್ರಾವಕ ಘಟನೆ ನೋಡಿದರೆ ಎಂತಹವರ ಕರುಳು ಚುರುಕ್ ಎನ್ನದಿರದು.
ಎಲ್ಲಾ ಮಕ್ಕಳಂತೆ ಆಟವಾಡುತ್ತಾ , ನಲಿಯುತ್ತಾ ಶಾಲೆಯಲ್ಲಿ ಇರ ಬೇಕಾದ ದಿವ್ಯಾ (15)ಇಂದು ದೇಹ ಸ್ವಾಧೀನ ಕಳೆದುಕೊಂಡು ಬಡ ತಂದೆ ತಾಯಿಯ ಆಶ್ರಯದಲ್ಲಿ ದಿನ ಕಳೆಯ ಬೇಕಾಗಿದೆ.ಸುರತ್ಕಲ್ ಸಮೀಪದ ಚೊಕ್ಕಬೆಟ್ಟುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಕೂಲಿ ಕಾರ್ಮಿಕ ಹರೀಶ್ ಪೂಜಾರಿ ದಂಪತಿಗಳ ಪ್ರಥಮ ಪುತ್ರಿ ದಿವ್ಯಾ ಹುಟ್ಟು ಸಂದರ್ಭ ಆಸ್ಪತ್ರೆಯಲ್ಲಿ ಆದ ಪ್ರಮಾದಕ್ಕೆ ದಿವ್ಯಾಳ ತಂದೆ ತಾಯಿ ಮಾತ್ರವಲ್ಲ, ಸ್ವತಃ ಅಂಗವೈಕಲ್ಯಕ್ಕೆ ಒಳಗಾಗಿ ಹೂವಿನಂತಹ ಬಾಳನ್ನು ದಿವ್ಯಾ ಕಳೆದುಕೊಂಡಿದ್ದಾಳೆ.
ಒಂದೆಡೆ ನರದ ಸಮಸ್ಯೆಯಿಂದ ಮೆದುಳು ಸ್ವಾಧೀನ ಕಳೆದುಕೊಂಡಿದ್ದರೆ ,ಇನ್ನೊಂದೆಡೆ ಕೈಕಾಲು ಸ್ವಾಧೀನವಿಲ್ಲದೆ ಇನ್ನೊಬ್ಬರ ನೆರವಿಲ್ಲದೆ ಓಡಾಡಲೂ ಆಗದ ಸ್ಥಿತಿಯಲ್ಲಿದ್ದಾಳೆ. ಮುಖದಲ್ಲಿ ಸದಾ ನಿಷ್ಕಲ್ಮಶ ನಗು. ತಂದೆ ತಾಯಿ , ಅಕ್ಕ ಎಂದು ಹೇಳುವುದನ್ನು ಬಿಟ್ಟರೆ ಬೇರೆ ಮಾತು ಬಾರದು. ಕೇವಲ ನಗುವಿನಲ್ಲಿಯೇ ಸಂತಸ ವ್ಯಕ್ತ ಪಡಿಸುತ್ತಾಳೆ.
ಪದೇ ಪದೇ ಅನಾರೋಗ್ಯ ಸಮಸ್ಯೆ ಕಾಡುತ್ತಿರುವುದರಿಂದ ಆಸ್ಪತ್ರೆಗೆ ನಿತ್ಯ ಹೋಗುವುದು ತಪ್ಪದು. ಒಂದು ಸಲ ಆಸ್ಪತ್ರೆಯ ಖರ್ಚು ಇಪ್ಪತ್ತು ಮೂವತ್ತು ಸಾವಿರ ರೂಪಾಯಿಗಳು. ಹರೀಶ್ ಅವರು ಮೇಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದು ಇಬ್ಬರು ಪುತ್ರಿಯರನ್ನು ಸಲಹುವ ಜವಾಬ್ದಾರಿಯಿದೆ. ಸಾವಿರ ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಚಿಕಿತ್ಸೆ ನೀಡುವ ಸ್ಥಿತಿಯಲ್ಲಿಲ್ಲ. ಈಗಾಗಲೇ ಲಕ್ಷಾಂತರ ಕೈ ಸಾಲ ಮಾಡಿ ಮಗಳಿಗೆ ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ದಾನಿಗಳ , ಸಂಘ ಸಂಸ್ಥೆಗಳ ನೆರವು ಅಗತ್ಯವಿದೆ. ಸಹಾಯ ಮಾಡಲಿಚ್ಚಿಸುವವರು ದಿವ್ಯ ಎಂ.ಜಿ.ತುಳಸಿ ,Kulur Branch ಕಾರ್ಪೋರೇಶನ್ ಬ್ಯಾಂಕ್ ಖಾತೆ ಸಂಖ್ಯೆ 520101000001755 ಗೆ ನೀಡ ಬಹುದು. IFSC CODE: CORP0003140
Leave A Reply