ರಮಾನಾಥ ರೈ, ನಾಲಿಗೆ ಆಚಾರವಿಲ್ಲದ್ದೇ ಸೈ
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ ಸಚಿವ ಬಿ. ರಮಾನಾಥ ರೈ ತಮ್ಮ ಆಚಾರವಿಲ್ಲದ ನಾಲಿಗೆಯನ್ನು ಇನ್ನೊಮ್ಮೆ ಹರಿಬಿಟ್ಟಿಿದ್ದಾರೆ. ಈ ಬಾರಿ ಅವರು ಚಕ್ರವರ್ತಿ ಸೂಲಿಬೆಲೆ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ರಾಜಕೀಯೇತರವಾಗಿ ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತಿರುವ ಚಕ್ರವರ್ತಿ ಸೂಲಿಬೆಲೆ ಅವರನ್ನು ರೈ ಟೀಕಿಸಿರುವ ಪರಿ ಸುಸಂಸ್ಕೃತ ಜಿಲ್ಲೆಯ ಜನ ತಲೆ ತಗ್ಗಿಸುವಂತಿದೆ.
ಚಕ್ರವರ್ತಿ ಸೂಲಿಬೆಲೆ ಅವರನ್ನು ‘ಸೂಲೆ ಬೆಲೆ’ ಎಂದು ಕರೆದ ಸಚಿವರು ದಕ್ಷಿಣ ಕನ್ನಡ ಜಿಲ್ಲೆಯ ಜನ ಸುಸಂಸ್ಕೃತರು ಎಂಬ ಹೆಸರಿಗೇ ಕಳಂಕ ತಂದಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಅವರ ಸಿದ್ಧಾಂತಕ್ಕೂ ರಮಾನಾಥ ರೈ ಸಿದ್ಧಾಂತಕ್ಕೂ ವ್ಯತ್ಯಾಸ ಇರಬಹುದು. ಅದು ಅವರವರ ಆಯ್ಕೆ.ಸೈದ್ಧಾಂತಿಕ ವಿರೋಧ ಇದೆ ಎಂಬ ಕಾರಣಕ್ಕೆೆ ಒಬ್ಬ ವ್ಯಕ್ತಿಯನ್ನು ಎಷ್ಟು ಕೀಳಾಗಿ ಬೇಕಾದರೂ ಕರೆಯಬಹುದೇ? ಏನು ಬೇಕಾದರೂ ಹಿಯಾಳಿಸಬಹುದೇ? ಕಾರ್ಯಕರ್ತರು ನಗೆಯಾಡುತ್ತಾರೆ ಎಂದು ಪ್ರೋತ್ಸಾಹಿತರಾಗಿ ಮತ್ತೆ ಮತ್ತೆ ಅದೇ ಶಬ್ದಗಳನ್ನು ಬಳಸಬಹುದೇ? ಕಾರ್ಯಕರ್ತರು ನಗೆಯಾಡಬಹುದು. ಆದರೆ ಸಚಿವರಿಗೆ ಜವಾಬ್ದಾರಿ ಇಲ್ಲವೇ? ಮಾತಿನ ಮೇಲೆ ಹಿಡಿತವಿಲ್ಲವೇ? ಜನ ರೈ ಅವರನ್ನು ಆರಿಸಿರಬಹುದು. ಸರಕಾರದಲ್ಲಿ ಅವರು ಸಚಿವರೂ ಆಗಿರಬಹುದು. ಆದರೆ ಯಾರನ್ನೂ ಕೆಟ್ಟದಾಗಿ ಕರೆಯುವ ಅಧಿಕಾರವನ್ನು ಜನರಾಗಲಿ, ಸರಕಾರವಾಗಲಿ ಅವರಿಗೆ ನೀಡುವುದಿಲ್ಲ.
ಬಹುಶಃ ಚಕ್ರವರ್ತಿ ಸೂಲಿಬೆಲೆ ಅವರು ವಿವಿಧೆಡೆ ಮಾಡುವ ಭಾಷಣ ಕೇಳಿದ ರೈ ಅವರು ವಿಚಲಿತರಾಗಿರಬಹುದು. ಅವರ ಭಾಷಣದಿಂದ ಎಲ್ಲಿ ನಮ್ಮ ಪಕ್ಷಕ್ಕೆ ಬೆಂಬಲ ಕಡಿಮೆಯಾಗುತ್ತದೊ ಎಂದು ಹೆದರಿರಬಹುದು. ಅವರ ಪಕ್ಷದ, ನಾಯಕರ ಢೋಂಗಿ ತನವೆಲ್ಲ ಬಯಲಾಗುತ್ತಿದೆಯಲ್ಲ ಎಂದು ಆತಂಕ ಕಾಡಿರಬಹುದು. ಯಾಕೆಂದರೆ ಚಕ್ರವರ್ತಿ ಸೂಲಿಬೆಲೆ ಅವರು ತಮ್ಮ ಭಾಷಣಗಳ ಮೂಲಕ ದೇಶದ್ರೋಹಿಗಳ ಮುಖವಾಡ ಕಳಚುತ್ತಿದ್ದಾರೆ. ದೇಶದ ಹಿತಕ್ಕೆ ವಿರುದ್ಧವಾಗಿ ಕೆಲಸ ಮಾಡಿದವರನ್ನು ಬಯಲುಮಾಡುತ್ತಿದ್ದಾರೆ. ಇತಿಹಾಸದ ನಿಜ ಸಂಗತಿಗಳನ್ನು ಜನರ ಮುಂದಿಡುತ್ತಿದ್ದಾರೆ. ಬಹುಶಃ ನೆಹರೂ ವಿರುದ್ಧ ಅವರು ಮಾತನಾಡಿದ್ದು ರೈ ಅವರಿಗೆ ಇಷ್ಟವಾಗಿರಲಿಕ್ಕಿಲ್ಲ. ಅದಕ್ಕೆ ಅವರು ನೆಹರೂ ಒಬ್ಬ ದೇಶದ್ರೋಹಿ ಅಲ್ಲ. ಅವರನ್ನು ದೇಶದ್ರೋಹಿ ಎಂದು ಕರೆದವರು ದೇಶದ್ರೋಹಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಅವರ ಭಾವನೆಯನ್ನು ಅವರು ಹೇಳಿದ್ದಕ್ಕೆ ಯಾರ ವಿರೋಧವೂ ಇರುವುದಿಲ್ಲ. ಆದರೆ ಕೀಳಾಗಿ ಮಾತನಾಡುವ, ಇನ್ನೊಬ್ಬರನ್ನು ಹೀನಾಯವಾಗಿ ಕಾಣುವ ಅಧಿಕಾರವನ್ನು ಸಂವಿಧಾನ ಯಾವ ಸಚಿವರಿಗೂ ಕೊಟ್ಟಿಲ್ಲ. ರೈ ಹಾಗೆ ಮಾತನಾಡಿರುವುದಕ್ಕೆ ಕೇವಲ ಚಕ್ರವರ್ತಿ ಸೂಲಿಬೆಲೆ ಅವರ ಕ್ಷಮೆ ಯಾಚಿಸಿದರೆ ಸಾಲದು, ಬದಲಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜನರ ಕ್ಷಮೆ ಯಾಚಿಸಬೇಕು. ಯಾಕೆಂದರೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಜನರ ಪ್ರತಿನಿಧಿಯಾಗಿ ಆ ಮಾತನಾಡಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಅವರು ಯಾರನ್ನಾದರೂ ಟೀಕಿಸಿರಬಹುದು. ಆದರೆ ವಿಷಯಾಧಾರಿತವಾಗಿ ಟೀಕಿಸಿದ್ದಾರೆ. ಸಭ್ಯವಾಗಿ ಟೀಕಿಸಿದ್ದಾರೆ. ಹೊರತು ಯಾರನ್ನೂ ವಯಕ್ತಿಕವಾಗಿ, ಕೀಳಾಗಿ ಟೀಕಿಸಿದ್ದಿಲ್ಲ. ಅದನ್ನು ರಮಾನಾಥ ರೈ ನೆನಪಿಸಿಕೊಳ್ಳಬೇಕು.
ಇದೇ ರಮಾನಾಥ ರೈ ಕಲ್ಲಡ್ಕ ಗಲಭೆ ಸಂದರ್ಭದಲ್ಲಿ ಪ್ರಭಾಕರ ಭಟ್ ವಿರುದ್ಧವೂ ಕೀಳಾಗಿ ಮಾತನಾಡಿದ್ದರು. ವಿರೋಧಿಗಳ ಬಗ್ಗೆ ಕೀಳಾಗಿ ಮಾತನಾಡುವುದೇ ರೈಗೆ ಚಾಳಿಯಾಗುತ್ತಿದೆ. ವಿರೋಧಿಗಳನ್ನು ಸರಿಯಾದ ಮಾರ್ಗದಲ್ಲಿ ಎದುರಿಸಲು ಸಾಮರ್ಥ್ಯ ಇಲ್ಲದವರು ಮಾತ್ರ ಇಂತಹ ಕೀಳು ಮಾರ್ಗಕ್ಕೆ ಇಳಿಯುತ್ತಾರೆ. ಹೀಗೆ ಮಾತನಾಡುವ ಮೂಲಕ ರೈ ನನಗೆ ವಿರೋಧಿಗಳನ್ನು ಸರಿಯಾದ ಮಾರ್ಗದಲ್ಲಿ ಎದುರಿಸುವ ತಾಕತ್ತಿಲ್ಲ ಎಂಬುದನ್ನು ಸಾಬೀತುಮಾಡಿದ್ದಾರೆ.
ಚಕ್ರವರ್ತಿ ಸೂಲಿಬೆಲೆಯನ್ನು ಟೀಕಿಸಿದ ಭಾಷಣದಲ್ಲೇ ಅವರು ಸೋನಿಯಾ ಗಾಂಧಿಯನ್ನು ತ್ಯಾಗಮಯಿ ಮಹಿಳೆ ಎಂದು ಹೊಗಳಿದ್ದಾರೆ. ಅಲ್ಲಿಗೆ ರೈ ಎಂತಹ ಹಸಿಸುಳ್ಳು ಹೇಳುತ್ತಿದ್ದಾರೆ ಎಂಬುದು ಸಾಬೀತಾಗುತ್ತದೆ. 2004ರಲ್ಲಿ ಒಂದೊಮ್ಮೆ ಪ್ರಧಾನಿಯಾಗುವ ಅವಕಾಶವಿದ್ದರೆ ಖಂಡಿತ ಸೋನಿಯಾ ಗಾಂಧಿ ಪ್ರಧಾನಿಯಾಗುತ್ತಿದ್ದರು. ಆದರೆ ತಾಂತ್ರಿಕವಾಗಿ ಅವರು ಪ್ರಧಾನಿಯಾಗುವುದು ಸಾಧ್ಯವಿರಲಿಲ್ಲ. ಹಾಗೆಯೇ ಅವರೇನಾದರೂ ಪ್ರಧಾನಿ ಅಭ್ಯರ್ಥಿಯಾದರೆ ಬಿಜೆಪಿ ‘ವಿದೇಶಿ ಮಹಿಳೆ’ ವಿಷಯವನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿತ್ತು. ಅದು ಕಾಂಗ್ರೆಸ್ ವಿರುದ್ಧ ಭಾರೀ ಪರಿಣಾಮ ಬೀರುತ್ತಿತ್ತು. ಅದರ ಅರಿವು ಸೋನಿಯಾ ಗಾಂಧಿಗಿತ್ತು. ಆ ಸಂದರ್ಭದಲ್ಲಿ ಸೋನಿಯಾ ಗಾಂಧಿಗೆ ದೇಶದ ಸರಕಾರ ನಡೆಸುವುದು ಬಿಡಿ, ಕಾಂಗ್ರೆೆಸ್ ಪಕ್ಷ ನಡೆಸುವುದು ಸವಾಲಿನ ಕೆಲಸವಾಗಿತ್ತು. ಅದಕ್ಕಾಗಿಯೇ ತನಗೆ ನಿಯತ್ತಾಾಗಿರುವ ವ್ಯಕ್ತಿಯನ್ನು ಪ್ರಧಾನಿಯನ್ನಾಗಿಸಿದರು ಹೊರತು ನಿಜವಾದ ಕಾಳಜಿ, ತ್ಯಾಗ ಮನೋಭಾವದಿಂದಲ್ಲ. ಅಷ್ಟಕ್ಕೆ ಇವರೆಲ್ಲ ಸೋನಿಯಾರನ್ನು ತ್ಯಾಗಮಯಿ ಪಟ್ಟಕ್ಕೇರಿಸಿದ್ದಾರೆ. ಕಾಂಗ್ರೆಸ್‌ಗೆ ಒಟ್ಟಿನಲ್ಲಿ ನೆಹರು, ಇಂದಿರಾ, ಸೋನಿಯಾ ಈಗ ರಾಹುಲ್ ಹೀಗೆ ಒಂದು ಕುಟುಂಬದ ಆಸರೆ ಬೇಕೇಬೇಕು. ಅದರಲ್ಲೇ ಕಾಂಗ್ರೆಸ್‌ನ ಅಸ್ತಿತ್ವ ಅಡಗಿದೆ. ನೆಹರೂ ಕುಟುಂಬದ ಢೋಂಗಿತನಗಳು ಬಯಲಾದರೆ, ಕಾಂಗ್ರೆಸ್‌ನ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ. ಅವರ ಅಸ್ತಿತ್ವ ಉಳಿಸಿಕೊಳ್ಳು ರೈ ಕಾಂಗ್ರೆಸ್ಸನ್ನು ಸಮರ್ಥಿಸಿಕೊಳ್ಳಲಿ. ಅದು ಆ ಪಕ್ಷದಲ್ಲಿರುವ ಅವರ ಕರ್ಮ. ಆದರೆ ಅದಕ್ಕಾಾಗಿ ಇನ್ನೊಬ್ಬರನ್ನು ಕೀಳಾಗಿ ಟೀಕಿಸುವುದನ್ನು ಜಿಲ್ಲೆಯ ಜನ ಯಾವತ್ತೂ ಒಪ್ಪುುವುದಿಲ್ಲ. ಇತ್ತೀಚೆಗೆ ರೈ ಮಾತನಾಡುವುದನ್ನು ನೋಡಿದರೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುಸಂಸ್ಕೃತ ಜನರನ್ನು ತಾನು ಪ್ರತಿನಿಧಿಸುತ್ತಿದ್ದೇನೆ ಎಂಬುದನ್ನು ಮರೆತಂತೆ ಕಾಣುತ್ತಿದೆ.
-ಚಿರಂತನ ಹೆಗಡೆ, ಉಡುಪಿ
Leave A Reply