ದೇಶಕ್ಕಾಗಿ 30 ವರ್ಷ ಸೇವೆ ಸಲ್ಲಿಸಿದ ಯೋಧನಿಗೆ ನಾವು ಕೊಡುವ ಗೌರವ ಇದೇನಾ?
ಪ್ರಾಯಶಃ, ನಮ್ಮ ದೇಶದಲ್ಲಿ ಮಾತ್ರ ಹೀಗೆ ಆಗಲು ಸಾಧ್ಯವೇನೋ?
ಅತ್ತ ಬಾಂಗ್ಲಾದೇಶದಿಂದ ಬರುವ ಅಕ್ರಮ ವಲಸಿಗರಿಗೆ ಮಮತಾ ಬ್ಯಾನರ್ಜಿ ಸರಕಾರ ಚುನಾವಣೆ ಗುರುತಿನ ಚೀಟಿ, ಆಧಾರ್ ಕಾರ್ಡ್ ನೀಡಿ ಸಲಹುತ್ತದೆ. ಇತ್ತ ಅಸಾದುದ್ದೀನ್ ಓವೈಸಿಯಂಥ ರಾಜಕಾರಣಿಗಳು ದೇಶಕ್ಕೇ ತಲೆನೋವಾಗುವ ಸಾಧ್ಯತೆಯಿರುವ ರೋಹಿಂಗ್ಯಾ ಮುಸ್ಲಿಮರನ್ನು ಸಹೋದರರಂತೆ ಕಾಣಬೇಕು, ಸಾಕಬೇಕು ಎಂದು ಹೇಳುತ್ತಾರೆ…
ಅಸ್ಸಾಂನಲ್ಲಿ ಮಾತ್ರ ದೇಶಕ್ಕಾಗಿ 30 ವರ್ಷ ದುಡಿದ ನಿವೃತ್ತ ಸೈನಿಕನಿಗೆ ದೇಶದ ನಾಗರಿಕತ್ವ ಸಾಬೀತುಪಡಿಸಿ ಎಂದು ವಿದೇಶಿ ನ್ಯಾಯಾಧೀಕರಣ ನೋಟಿಸ್ ನೀಡಿದೆ…
ಹೌದು, ಮೊಹಮ್ಮದ್ ಹಜ್ಮಲ್ ಹಾಕ್ ಎಂಬ ಯುವಕ 1982ರಲ್ಲಿ ಸೈನ್ಯ ಸೇರಿದ್ದ. ದೇಶಕ್ಕಾಗಿ ಹಲವು ಮಾದರಿಯಲ್ಲಿ ಸೇವೆ ಸಲ್ಲಿಸಿರುವ ಯೋಧ 2008ರಲ್ಲಿ ನಿವೃತ್ತಿ ಹೊಂದಿದ್ದರು. ಅದಕ್ಕೂ ಮೊದಲು, 2003ರಲ್ಲಿ ಸೇನೆಯ ಶ್ರೇಯಾಂಕವಾದ ನಾಯಿಬ್ ಸುಬೇದಾರ್ ಆಗಿ ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರೇ ನೇಮಕ ಮಾಡಿದ್ದರು.
ಆದರೆ, ಈಗ ಅಸ್ಸಾಂ ಜಿಲ್ಲಾ ನ್ಯಾಯಾಲಯದ ಅಧೀನದ ವಿದೇಶಿ ನ್ಯಾಯಾಧೀಕರಣ ಮೊಹಮ್ಮದ್ ಅಜ್ಮಲ್ ಅವರಿಗೆ ದೇಶದ ನಾಗರಿಕತ್ವ ಸಾಬೀತುಪಡಿಸಲು ನೋಟಿಸ್ ನೀಡಿದೆ. ಅಲ್ಲದೆ ಅಸ್ಸಾಂ ಪೊಲೀಸರು ಇವರ ತಂದೆ-ತಾಯಿ 1971 ರಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿದ್ದಾರೆ. ಹಾಗಾಗಿ 1968ರಲ್ಲಿ ಜನಿಸಿದ ಮೊಹಮ್ಮದ್ ಸಹ ಅಕ್ರಮ ವಲಸಿಗರೇ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, 2008ರಿಂದಲೇ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಅಲ್ಲ ಸ್ವಾಮಿ, ಮೊಹಮ್ಮದ್ ಹಜ್ಮಲ್ ಹಾಕ್ ದೇಶದ ನಾಗರಿಕನೇ ಅಲ್ಲ ಎಂದ ಮೇಲೆ ಅವರು ಸೈನ್ಯವನ್ನು ಹೇಗೆ ಸೇರಿದರು? ದೇಶದವರೇ ಅಲ್ಲ ಎಂದ ಮೇಲೆ ದೇಶಕ್ಕಾಗಿ ಹೇಗೆ 30 ವರ್ಷ ಸೇವೆ ಸಲ್ಲಿಸಿದರು? ದಾಖಲೆಯೇ ಇಲ್ಲದೆ ಸೈನ್ಯ ಸೇರಿಸಿಕೊಳ್ಳುವುದಾದರೆ ನಾಳೆ ಪಾಕಿಸ್ತಾನಿಯರೂ ಭಾರತೀಯ ಸೇನೆ ಸೇರಬಹುದೇ? ಇದು ನಾನ್ ಸೆನ್ಸ್ ಅಲ್ಲವೇ? ಅಷ್ಟಕ್ಕೂ ರಾಷ್ಟ್ರಪತಿಯವರೇ ಅವರಿಗೆ ಮೇಲ್ದರ್ಜೆಯ ಹುದ್ದೆ ನೀಡುತ್ತಿದ್ದರು? ದೇಶಕ್ಕಾಗಿ 30 ವರ್ಷ ದುಡಿದ ಯೋಧರಿಗೆ ನಾವು ಕೊಡುವ ಗೌರವ ಇದೇನಾ ಹೇಳಿ?
ಈ ಹಿಂದೆ ಯುಪಿಎ ಸರಕಾರವಿದ್ದಾಗ ಚೆಸ್ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರಿಗೇ ನಿನ್ನ ದೇಶ ಯಾವುದು ಎಂದು ಕೇಳಲಾಗಿತ್ತು. ಈಗ ಯೋಧರ ಸರದಿ ಬಂದಿದೆ. ಒಟ್ಟಿನಲ್ಲಿ ಈ ಪ್ರಕರಣಗಳು ದೇಶಕ್ಕಾಗಿ ದುಡಿದವರನ್ನೇ ಪ್ರಶ್ನಿಸಿ, ದೇಶಕ್ಕೆ ಅಪಾಯವಾಗಿರುವವರನ್ನು ರಕ್ಷಿಸಿ ಎಂದು ಹೇಳುವ ಕುತ್ಸಿತ ಮನಸ್ಸುಗಳಿಗೆ ನಿದರ್ಶನ ಹಾಗೂ ದೇಶದ ದುರಂತವೇ ಸರಿ.
-ಅವಿನಾಶ್ ಗೌಡ, ಮೈಸೂರು
Leave A Reply