ಹಿಂದುತ್ವದ ಹಾದಿ ತುಳಿಯುವ ನಾಟಕವಾಡಿದರೆ ನಿಮ್ಮನ್ನು ನಂಬಿಬಿಡಬೇಕೆ ರಾಹುಲ್ ಗಾಂಧಿ?

ಈ ಕಾಂಗ್ರೆಸ್ಸಿನವರಿಗೂ, ನಂಬಿಕೆಗೂ ಇರುವ ಅಂತರ ತುಸು ಜಾಸ್ತಿಯೇ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಂಥ ನಾಟಕವಾಡಿದ ಇಂದಿರಾಗಾಂಧಿ ಅದನ್ನು ಭೇದಿಸಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದರು. ಧರ್ಮದ ನಂಬಿಕೆ ಹೆಸರಲ್ಲೇ ಅಮೃತಸರದ ಸುವರ್ಣ ಮಂದಿರದ ಮೇಲೆ ಕಾರ್ಯಾಚರಣೆ ನಡೆಸಿ ತಮ್ಮ ನಂಬಿಕೆ ಅಷ್ಟೇ ಅಲ್ಲ, ಸಿಖ್ಖರ ನಂಬಿಕೆಯನ್ನೇ ಬುಡಮೇಲು ಮಾಡಿದರು. ಅಭಿವೃದ್ಧಿ ಮೇಲೆ ನಂಬಿಕೆ ಇಡುವ ಆಶಯ ಮೂಡಿಸಿದ್ದ ರಾಜೀವ್ ಗಾಂಧಿ ಬೊಫೋರ್ಸ್ ಹಗರಣದ ಮೂಲಕ ತಾವೂ ನಂಬಿಕೆ ಛೇದಿಸುವವರೇ ಎಂಬುದನ್ನು ಸಾಬೀತುಪಡಿಸಿದರು. ಇನ್ನು ಇಟಲಿಯಿಂದ ಬಂದ ಸೋನಿಯಾ ಗಾಂಧಿ? ಅವರಂತೂ ಹಿಂಬಾಗಿಲಿನಿಂದಲೂ ದೇಶವನ್ನು ಆಳವನ್ನು ತೋರಿಸಿಕೊಟ್ಟು ಮತ್ತೊಂದು ವಿಶ್ವಾಸಘಾತುಕತನಕ್ಕೆ ನಾಂದಿ ಹಾಡಿದರು.
ಈಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸರದಿ!
ಗುಜರಾತ್ ವಿಧಾನಸಭೆ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇದೆ ಎನ್ನುತ್ತಲೇ ಎಚ್ಚೆತ್ತುಕೊಂಡ, ಅಸ್ತಿತ್ವದ ಯೋಚನೆಯಲ್ಲಿ ಯೋಜನೆ ರೂಪಿಸಿರುವ ರಾಹುಲ್ ಗಾಂಧಿ ಗುಜರಾತಿನ ನಾಲ್ಕು ಹಿಂದೂ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ವಿಶೇಷ ಪೂಜೆ ಸಲ್ಲಿಸಿ ತಾವೂ ಹಿಂದುತ್ವವಾದಿಗಳೇ, ತಮಗೂ ಹಿಂದುತ್ವದ ಮೇಲೆ ನಂಬಿಕೆ ಇದೆ ಎಂಬುದನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾರಲು ಹೊರಟಿದ್ದಾರೆ.
ಆದರೆ, ರಾಹುಲ್ ಗಾಂಧಿಯವರು ಹಿಂದುತ್ವದ ನಾಟಕವಾಡುತ್ತಲೇ ಅವರನ್ನು ನಂಬಿಬಿಡಬೇಕೆ? ಆ ಹಿಂದುತ್ವತನ ಎಂಬುದು ನಾಟಕೀಯದ ವಸ್ತುವಾಯಿತೇ? ಹಿಂದೂಗಳು ಮಾನಸಿಕವಾಗಿ ಹಾಗೂ ದೈಹಿಕ(ವೋಟು ಹಾಕುವ ಲೆಕ್ಕಾಚಾರದಲ್ಲಿ)ವಾಗಿ ಅಷ್ಟು ದುರ್ಬಲರೇ? ಅಷ್ಟಕ್ಕೂ ಪತ್ರಕರ್ತೆ ಗೌರಿ ಹತ್ಯೆಗೂ ಆರೆಸ್ಸೆಸ್ಸಿಗೂ ನಂಟು ಕಲ್ಪಿಸುವ ರಾಹುಲ್ ಗಾಂಧಿಯವರಿಗೆ ಹಿಂದುತ್ವದ ರಾಯಭಾರಿಯಾಗುವ ಅರ್ಹತೆಯಿದೆಯೇ? ಹಿಂದುತ್ವ ಎಂದರೆ ಬರೀ ಮತಗಳ ಲೆಕ್ಕಾಚಾರವೋ? ಸೈದ್ಧಾಂತಿಕ ಬದ್ಧತೆಯೋ?
ಪಂಡಿತ್ ದೀನದಯಾಳ್ ಉಪಾಧ್ಯಾಯ, ಕೇಶವ್ ಬಲಿರಾಮ್ ಹೆಗಡೇವಾರ್, ಅಯೋಧ್ಯೆ ವಿಚಾರದಲ್ಲಿ ತನು, ಮನದ ಜತೆಗೆ ಪ್ರಾಣವನ್ನೂ ಒತ್ತೆ ಇಟ್ಟ ಲಾಲ್ ಕೃಷ್ಣ ಆಡ್ವಾಣಿ, ಜಿಯೇಂಗೆ ತೋ ಇಸ್ ಕೆ ಲಿಯೇ, ಮರೇಂಗೆ ತೋ ಇಸ್ ಕೆ ಲಿಯೇ ಎಂದ ಅಟಲ್ ಬಿಹಾರಿ ವಾಜಪೇಯಿ, ಹಿಂದುತ್ವದ ಆಧಾರದ ಮೇಲೆಯೇ ದೇಶದ ಜನರ ಹೃದಯದಲ್ಲಿ ನೆಲೆಸಿದ ಭಾಳಾ ಠಾಕ್ರೆ. ಹೀಗೆ ಹಿಂದುತ್ವಕ್ಕಾಗಿ ಹೋರಾಡಿದವರ ಹೆಸರು ಹೇಳುತ್ತ ಹೋದರೆ ಅದೇ ಒಂದು ಪುಸ್ತಕವಾದೀತು. ಆದರೆ, ಹಿಂದುತ್ವದ ವೇಷ ಹಾಕಲು ಹೊರಟಿರುವ ರಾಹುಲ್ ಗಾಂಧಿಯವರಿಗೆ ಈ ಮೇಲಿನ ಧೀಮಂತರ ಯಾವುದಾದರೂ ಒಂದು ಲಕ್ಷಣವಿದೆಯೇ? ಕಾಂಗ್ರೆಸ್ಸಿನ ನಿರ್ನಾಮಕ್ಕೇ ಪಣತೊಟ್ಟಂತಿರುವ ರಾಹುಲ್ ಗಾಂಧಿ ಹಿಂದೂಗಳ ರಕ್ಷಕರಾಗಬಲ್ಲರೇ? ಕಾಶ್ಮೀರದಲ್ಲಿ ಹಿಂದೂಗಳು ನಿರಾಶ್ರಿತರಾಗಲು ಕಾರಣರಾದ ಜವಾಹರ್ ಲಾಲ್ ನೆಹರೂ ಕುಡಿಯೊಂದು ಅದೇ ಹಿಂದೂಗಳ ಪರವಾಗಿ ನಿಲ್ಲುತ್ತಾರೆಯೇ? ಖಂಡಿತ ಇಲ್ಲ.
ಏಕೆಂದರೆ?
ನೆಹರೂ ಕಾಲದಿಂದಲೂ ಕಾಂಗ್ರೆಸ್ ಒಂದು ಸಮುದಾಯಕ್ಕೆ, ಅದರಲ್ಲೂ ಮುಸ್ಲಿಮರ ಓಲೈಕೆಯಲ್ಲೇ ನಿರತವಾಗಿದೆ. ಮುಸ್ಲಿಮರನ್ನು ಮೆಚ್ಚಿಸಲು ಜಿನ್ನಾ ಜತೆ ಸಖ್ಯ ಬೆಳೆಸಿದ ನೆಹರೂ, ಮಹಾತ್ಮ ಗಾಂಧೀಜಿಯವರ ತಲೆಯನ್ನೇ ಕೆಡಿಸಿದರು. ಅದೇ ಜಿನ್ನಾ ಮುಂದೆ ದೇಶವನ್ನೋ ಒಡೆದ. ಇನ್ನು, ಅದೇ ಓಲೈಕೆಗೆ ಮುಂದಾಗಿ ಕಾಶ್ಮೀರದಲ್ಲಿ ಶೇಖ್ ಅಬ್ದುಲ್ಲಾ, ಫಾರೂಕ್ ಅಬ್ದುಲ್ಲಾ ತಾಳಕ್ಕೆ ಕುಣಿದ ನೆಹರೂ, ಇಂದಿರಾ ಕಾಶ್ಮೀರವನ್ನು ಮಿನಿ ಪಾಕಿಸ್ತಾನ ಮಾಡಿದರು. ಹಿಂದೂಗಳನ್ನೇ ನಿರಾಶ್ರಿತರನ್ನಾಗಿ ಮಾಡಿದರು. ಮುಸ್ಲಿಮರನ್ನೇ ಅಭಿವೃದ್ಧಿ ಮಾಡದೆ, ಬರೀ ಮತಬ್ಯಾಂಕ್ ಮಾಡಿಕೊಂಡ ಕಾಂಗ್ರೆಸ್ ಈಗ ಅವರ ನಂಬಿಕೆಯನ್ನೇ ಉಳಿಸಿಕೊಂಡಿಲ್ಲ.
ಪರಿಸ್ಥಿತಿ ಹಾಗೂ ಐತಿಹ್ಯದ ಕುರುಹುಗಳು ಹೀಗಿರುವಾಗ, ಹಿಂದುತ್ವದ ವಿರುದ್ಧ ಸಣ್ಣದೊಂದು ಆಕ್ಷೇಪವನ್ನೇ ಇಟ್ಟುಕೊಂಡಿರುವ, ಹಿಂದೂಗಳ ಪರವಾಗಿ ಒಂದೇ ಒಂದು ಮಾತನಾಡದ ರಾಹುಲ್ ಗಾಂಧಿ ಎಂಬ ದುರಂತ ನಾಯಕ ಈಗ ದೇವಾಲಯಕ್ಕೆ ಭೇಟಿ ನೀಡಿ ಹಿಂದುತ್ವ ಅಜೆಂಡಾ ಮೇಲೆ ರಾಜಕಾರಣದಲ್ಲಿ ಮುನ್ನಡೆ ಸಾಧಿಸಲು ಹೊರಟಿರುವುದು ಅನುಮಾನಕ್ಕೀಡುಮಾಡದೇ ಇರದು. ಕಾಂಗ್ರೆಸ್ಸಿನಲ್ಲೇ ಹಿಂದೂಗಳ ನಂಬಿಕೆ ಪರ ನಿಂತ ಪಿ.ವಿ. ನರಸಿಂಹರಾವ್ ನಿದರ್ಶನವಿದ್ದರೂ, ನಿಷ್ಠೆಯ ವಿಚಾರದಲ್ಲಿ, ಅದರಲ್ಲೂ ಹಿಂದೂತ್ವದ ವಿಚಾರದಲ್ಲಿ ರಾಹುಲ್ ಗಾಂಧಿ ತೃಣ ನಂಬಿಕಸ್ಥರು. ಯಾವುದಕ್ಕೂ ಹಿಂದೂಗಳಾದ ನಾವು ಎಚ್ಚರದಿಂದಿರೋಣ.
-ಅವಿನಾಶ್ ಬೆಂಗಾಡಿ, ಮಂಗಳೂರು
Leave A Reply