ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ: ಆದೇಶ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್

ಲಖನೌ: ಎಲ್ಲ ಮದರಸಾಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಡಬೇಕು ಎಂದು ಉತ್ತರ ಪ್ರದೇಶದ ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ ಮುಸ್ಲಿಂ ಮೂಲಭೂತವಾದಿಗಳಿಗೆ ಹಿನ್ನಡೆಯಾಗಿದ್ದು, ಅಲಹಾಬಾದ್ ಹೈಕೋರ್ಟ್ ಅರ್ಜಿ ತಿರಸ್ಕರಿಸಿದೆ.
ಅಲೌಲ್ ಮುಸ್ತಾಫ ಎಂಬುವವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ದಿಲೀಪ್ ಬಾಬಾ ಸಾಹೇಬ್ ಭೋಸ್ಲೆ ಹಾಗೂ ಯಶ್ವಂತ್ ವರ್ಮಾ ಈ ತೀರ್ಪು ನೀಡಿದ್ದಾರೆ.
ಉತ್ತರ ಪ್ರದೇಶ ಸರ್ಕಾರ, ರಾಜ್ಯದ ಎಲ್ಲ ಶಾಲೆ, ಮದರಸಾಗಳಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಬೇಕು ಎಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅಲೌಲ್ ಕೋರ್ಟ್ ಮೊರೆ ಹೋಗಿದ್ದರು.
ರಾಷ್ಟ್ರಗೀತೆ ದೇಶದ ಇತಿಹಾಸ, ಸಂಸ್ಕೃತಿ, ಭ್ರಾತೃತ್ವ, ದೇಶಭಕ್ತಿ ಸಾರುತ್ತದೆ. ಅಲ್ಲದೆ ಇದು ಮಕ್ಕಳ ಬೆಳವಣಿಗೆ, ಏಕತಾ ಮನೋಭಾವ ಮೂಡಿಸಲು ಸಹಕಾರಿಯಾಗುತ್ತದೆ. ರಾಷ್ಟ್ರಗೀತೆ ಎಲ್ಲ ಜಾತಿ, ಧರ್ಮವನ್ನು ಮೀರಿರುವುದರಿಂದ ಹಾಡುವುದು ಕಡ್ಡಾಯ ಎಂದು ದ್ವಿಸದಸ್ಯ ನ್ಯಾಯಪೀಠ ತಿಳಿಸಿದೆ.
ರಾಷ್ಟ್ರಗೀತೆ ಹಾಡುವುದರಿಂದ ನಂಬಿಕೆಗೆ ಪೆಟ್ಟು ಬೀಳುತ್ತದೆ ಎಂಬ ಅರ್ಜಿದಾರರ ವಾದದಲ್ಲಿ ಹುರುಳಿಲ್ಲ ಹಾಗೂ ರಾಷ್ಟ್ರಗೀತೆ ಹಾಡಲು ಮಕ್ಕಳು ವಿರೋಧ ವ್ಯಕ್ತಪಡಿಸಿರುವ ಕುರಿತು ಸಾಕ್ಷ್ಯಗಳಿಲ್ಲ. ಹಾಗಾಗಿ ಅರ್ಜಿ ತಿರಸ್ಕರಿಸಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
Leave A Reply