ಎಲ್ಲಿಯ ನಿಷ್ಠುರವಾದಿ ಕಾರಂತಜ್ಜ, ಎಲ್ಲಿಯ ಇಬ್ಬಂದಿತನದ ಪ್ರಕಾಶ್ ರೈ?
ಎಲ್ಲಿಯ ನಮ್ಮ ಕಡಲ ತಡಿಯ ಭಾರ್ಗವ ನೇರ, ನಿಷ್ಠುರವಾದಿ ಕಾರಂತಜ್ಜ, ಎಲ್ಲಿಯ ಲಾಭನಷ್ಟದ ಲೆಕ್ಕಾಚಾರದ ಅನುಕೂಲಸಿಂಧು ಹೇಳಿಕೆ ಕೊಡುವ ಪ್ರಕಾಶ್ ರೈ ಆಲಿಯಾಸ್ ಪ್ರಕಾಶ್ ರಾಜ್? ಕಾರಂತರು ಎಲ್ಲೆಡೆ ಕಾರಂತರಾಗೇ ಬದುಕಿದರು. ಪಕ್ಕದ ರಾಜ್ಯಕ್ಕೆ ಹೋದಾಗ ಇವರ ಹಾಗೇ ರಾಜ್ ಎಂದು ಬದಲಿಸಿಕೊಂಡು ಶಿವರಾಮ್ ರಾಜ್ ಆಗಲಿಲ್ಲ.
ಕಾರಂತರು ನಾಸ್ತಿಕರಾದರೂ ತಮ್ಮ ನಂಬಿಕೆಯನ್ನು ಬೇರೆಯವರ ಮೇಲೆ ಹೇರಲಿಲ್ಲ. ಇನ್ನೊಬ್ಬರ ನಂಬಿಕೆಯನ್ನು ಕೀಳುಮಟ್ಟದಲ್ಲಿ ನೋಡಲಿಲ್ಲ. ಅವಹೇಳನ ಮಾಡಲಿಲ್ಲ. ಆದರೆ ಈ ಮನುಷ್ಯ ಕೇಸರಿಯನ್ನು ಗೌರವವಾಗಿ ಕಾಣುವ ನಮ್ಮ ಧಾರ್ಮಿಕ ನಂಬಿಕೆಯನ್ನು ಅವಹೇಳನ ಮಾಡಿ ಬಿಟ್ಟರು. ಖಾವಿ ವಸ್ತ್ರ ಧರಿಸಿದ ಮುಖ್ಯಮಂತ್ರಿಯನ್ನು ಪೂಜಾರಿ ಎಂದು ಕೇವಲವಾಗಿ ನೋಡುವ ದೃಷ್ಟಿಕೋನದಲ್ಲಿ ನೋಡಿ ಎಂದು ನಿಂದಿಸಿದರು. ಯಾಕೆ ದೇವಸ್ಥಾನದ ಪೂಜಾರಿಯಾದವರೂ ರಾಜ್ಯದ ಮುಖ್ಯಮಂತ್ರಿಯಾಗಬಾರದೇ?
ಆಡು ಮುಟ್ಟದ ಸೊಪ್ಪಿಲ್ಲ. ಕಾರಂತರು ಕೈಯಾಡಿಸದ ಕ್ಷೇತ್ರವಿಲ್ಲ. ಆದರೆ ಎಲ್ಲೂ ಕಾರಂತರು ಆಧಾರವಿಲ್ಲದೇ ಮಾತನಾಡಿಲ್ಲ. ಆದರೆ ಇವರು ಗೌರಿ ಹತ್ಯೆಯ ವಿಚಾರವಾಗಿ ನಿರಾಧಾರವಾಗಿ ಮಾತಾಡಿ ಬಿಟ್ಟರು.
ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಕಾರಂತರು ನೇರವಾಗಿ ತುರ್ತುಪರಿಸ್ಥಿತಿ ಹೇರಿದ್ದ, ಅದಕ್ಕೆ ಕಾರಣವಾಗಿದ್ದ ಇಂದಿರಾ ಗಾಂಧಿಯನ್ನು ಟೀಕಿಸಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಕೇಂದ್ರಕ್ಕೆ ತಮ್ಮ ಪ್ರಶಸ್ತಿ ವಾಪಸು ಕೊಟ್ಟರು. ಆದರೆ ಈ ಮನುಷ್ಯ ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆ ಹದಗೆಟ್ಟ ಬಗ್ಗೆ ಮಾತಾಡದೇ ಕೇಂದ್ರಕ್ಕೆ ಪ್ರಶಸ್ತಿ ವಾಪಾಸ್ ಕೊಡುವೆ ಎಂದೂ ಹೇಳಿ ಆಮೇಲೆ ಕೊಡೋಲ್ಲ ಎನ್ನುವ ಯೂಟರ್ನ್ ತೆಗೆದುಕೊಂಡರು. ಹೇಳಿ ಇದರಲ್ಲಿ ಪ್ರಕಾಶ್ ರೈ ಬದ್ಧತೆ ಇದೆ ಎಂದು ಎನಿಸುತ್ತದೆಯೇ?
ಕಾರಂತರು ಕರ್ನಾಟಕದ ನಾಡು ನುಡಿ, ನೆಲ-ಜಲ , ಪರಿಸರದ ಬಗ್ಗೆ ಆಪಾರ ಕಾಳಜಿ ಹೊಂದಿದವರು. ಆದರೆ ಅದೇ ಪ್ರಕಾಶ್ ರಾಜ್ ಕಾವೇರಿ ವಿಷಯ ಬಂದಾಗ ನುಣುಕಿಕೊಳ್ಳುತ್ತಾರೆ. ಅದೇ ಪಕ್ಕದ ತಮಿಳುನಾಡಿನಲ್ಲಿ ಕಾಂಗ್ರೆಸ್ ಪೋಷಿತ ಅರೆಬೆತ್ತಲೆ ವೇಷದ ರೈತರೆಂಬುವವರ ಜತೆ ಸೇರಿ ದೆಹಲಿಯಲ್ಲಿ ಪ್ರತಿಭಟನೆ ಮಾಡ್ತಾರೆ. ತನ್ನ ಅನ್ನದ ಬಟ್ಟಲಿಗೆ ಎಲ್ಲಿ ಧಕ್ಕೆಯಾಗುತ್ತದೆ ಎಂದು ತಮಿಳುನಾಡಿನ ಪ್ರಕೃತಿ ವೀಕೋಪದ ಸಂತ್ರಸ್ತರಿಗೆ ಸಹಾಯಹಸ್ತ ಚಾಚುತ್ತಾರೆ ವಿನಃ ಕರ್ನಾಟಕದಲ್ಲಾದ ಪ್ರಕೃತಿ ವಿಕೋಪದಲ್ಲಿ ಇವರು ತೊಡಗಿಕೊಂಡಿದ್ದು ನಾನಂತೂ ನೋಡಿಲ್ಲ. ಇವರ ತವರೂರಿನ ಪಕ್ಕದ ಪಶ್ಚಿಮಘಟ್ಟದ ಉಳಿವಿನ ಪರವಾಗಿ, ನೇತ್ರಾವತಿ ಉಳಿವಿನ ಪರವಾಗಿ ಒಮ್ಮೆಯೂ ಧ್ವನಿಯಾಗಿಲ್ಲ.
ಪರಮ ನಾಸ್ತಿಕರಾದ ಕಾರಂತರು ಸಾಲಿಗ್ರಾಮದ ದೇವಸ್ಥಾನದ ಪರ ನಿಂತವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿ ಎಂದು ಪ್ರಬಲವಾಗಿ ಪ್ರತಿಪಾದಿಸಿದವರು. ಆದರೆ ಈ ಮನುಷ್ಯ ರಾಮಮಂದಿರ ಸ್ಥಾಪನೆಯ ವಿರುದ್ದವಿರುವ ಕಮ್ಯುನಿಸ್ಟ್ ವೇದಿಕೆಯಲ್ಲಿ ಯೋಗಿ ಆದಿತ್ಯನಾಥರಿಂದ ಮೋದಿವರೆಗೆ ಬೈಯುತ್ತಾರೆ. ಅಲ್ಲಿಗೆ ರೈರ ಇಬ್ಬಂದಿತನ “ಪ್ರಕಾಶ”ಮಾನವಾಗುತ್ತದೆ.
ಕರಾವಳಿಯಲ್ಲಿ ಎರಡು ಕೋಮಿನ ಯುವಕರ ಹತ್ತಾರು ಹತ್ಯೆಗಳಾದರೂ ತುಟಿಪಿಟಿಕ್ ಅನ್ನದ ಈ ಖಳನಟ, ಗೌರಿ ಹತ್ಯೆಯಾದಾಗ ಕರ್ನಾಟಕದಲ್ಲಿ ಏನ್ ನಡೀತಾ ಇದೆ ಎಂದು ಕೇಂದ್ರದತ್ತ ಬೊಟ್ಟು ಮಾಡಿ ಬೊಬ್ಬೆ ಮಾಡುತ್ತಾರೆ. ಜೊತೆಗೆ ಅವರ ಜತೆಗಿನ ಸಾಹಿತಿಗಳು ಪ್ರಕಾಶ್ ರೈ ಪಕ್ಷಾತೀತವೆಂದರೂ ಆ ಮನುಷ್ಯ ಪಕ್ಷಪಾತಿ ಎನ್ನುವುದು ಅಷ್ಟೇ ದಿಟ.
ಕೋಟ ತಟ್ಟು ಪಂಚಾಯತ್ ಅಧ್ಯಕ್ಷರೇ, ಪ್ರತಿಷ್ಠಾನದವರೇ ನೀವು ಇಷ್ಟು ವರ್ಷ ಮಾಡಿಕೊಂಡು ಬಂದ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ. ಆದರೆ ಇನ್ನೂ ಕಾಲ ಮಿಂಚಿಲ್ಲ. ನಿಮ್ಮ ನಡವಳಿಕೆ , ಮಾತು ಸರಿಯಿಲ್ಲ. ನಾವು ತಿಳಿದಂತೆ ನೀವಿಲ್ಲವೆಂದು ಹೇಳಿ ಪ್ರಕಾಶ್ ರೈ ಆಲಿಯಾಸ್ ಪ್ರಕಾಶ್ ರಾಜ್ ಅವರನ್ನು ಪ್ರಶಸ್ತಿ ಪುರಸ್ಕಾರದಿಂದ ತಿರಸ್ಕರಿಸಿ.
ಕೊನೆ ಮಾತು
ಪ್ರಕಾಶ್ ರೈ ಒಬ್ಬ ದೊಡ್ಡ ನಟನೆಂಬ ಮಾನದಂಡದಿಂದ ಪ್ರಶಸ್ತಿ ಕೊಡುವುದಾದರೆ, ಪ್ರಕಾಶ್ ರೈ ಸ್ವತಃ ಹೇಳಿದ್ದಾರೆ ನನಗಿಂತ ದೊಡ್ಡ ನಟರಿದ್ದಾರೆ ಎಂದು. ಹಾಗಾಗಿ ಆ ಮಾನದಂಡದಿಂದಲೂ ಅವರು ಅನರ್ಹರು.
Leave A Reply