ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ ಸಿದ್ದರಾಮಯ್ಯನವರೇ, ಮೊದಲು ಗುಂಡಿ ಮುಚ್ಚಿ ಮಾರ್ರೆ
ರಸ್ತೆ ಮೇಲೆ ನಡೆದಾಡುವಾಗ ತಲೆ ಮೇಲೆ ವಿದ್ಯುತ್ ತಂತಿ ಕಡಿದು ಬೀಳಬಹುದು, ವಿದ್ಯುತ್ ನಿರೋಧಕ ಜಾಕೆಟ್ ಬಳಸಿ, ಬಸ್ ಆ್ಯಕ್ಸಿಡೆಂಟ್ ಆದಾಗ ಅನಾಹುತ ಸಂಭವಿಸಬಹುದು, ಬಸ್ಸಿನಲ್ಲಿ ಕೂತಾಗಲೂ ಹೆಲ್ಮೆಟ್ ಧರಿಸಿ, ಕೋಣೆಯಲ್ಲಿ ಕುಳಿತಾಗ ಭೂಕಂಪವಾಗಬಹುದು, ಆ್ಯಂಟಿ ಅರ್ಥ್ ಕ್ವೇಕ್ ಕೋಣೆಯಲ್ಲೇ ಕುಳಿತು ಕೆಲಸ ಮಾಡಿ…
ಮುಖ್ಯಮಂತ್ರಿ ಸಿದ್ದರಾಮಯ್ಯನವರು ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿದಾಗ ಈ ಜೋಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು…
ಆದರೆ, ಸಿದ್ದರಾಮಯ್ಯನವರ “ಜಾಣತನ” ಜಗಜ್ಜಾಹೀರಾಯ್ತು…
ಒಂದು ವಾರದ ಹಿಂದಷ್ಟೇ ಮೈಸೂರು ರಸ್ತೆಯ ಫ್ಲೈ ಓವರ್ ಮೇಲೆ ಗುಂಡಿಗಳಿಂದಾಗಿ ದಂಪತಿ ಮೃತಪಟ್ಟರು. ಭಾನುವಾರ ಬೆಳಗ್ಗೆ ಇದೇ ಮೈಸೂರು ರಸ್ತೆಯಲ್ಲಿ 34 ವರ್ಷದ ರಾಧಾ ಎಂಬುವವರು ಇದೇ ಗುಂಡಿಗಳಿಗೆ ಬಲಿಯಾಗಿದ್ದಾರೆ. ಒಂದೇ ವಾರದ ಅಂತರದಲ್ಲಿ ಮೈಸೂರು ರಸ್ತೆಯೊಂದರ ಗುಂಡಿಗಳಿಗೆ ಮೂವರು ಪ್ರಾಣ ತೆತ್ತಿದ್ದಾರೆ. ಬೆಂಗಳೂರಿನ ಯಾವುದೇ ಮೂಲೆಗೆ ಹೋದರು ಗುಂಡಿಗಳ ಮಧ್ಯೆಯೇ ರಸ್ತೆ ಇದೆ ಎನ್ನಿಸುವಷ್ಟರಮಟ್ಟಿಗೆ ಗುಂಡಿರಸ್ತೆಯಾಗಿ ಪರಿಣಮಿಸಿವೆ. ಅಪಘಾತಗಳು ನಿತ್ಯ ನಿರಂತರ ಎಂಬಂತಾಗಿವೆ.
ಇಷ್ಟಾದರೂ ರಾಜ್ಯದ ಉಸ್ತುವಾರಿ ವಹಿಸಿಕೊಂಡಿರುವ ಸಿದ್ದರಾಮಯ್ಯನವರು ಮಾತ್ರ ಮಗುಮ್ಮಾಗಿ ಕುಳಿತಿದ್ದಾರೆ. ಇವರ ಅವಧಿಯಲ್ಲೇ ಬೆಂಗಳೂರು ಅಭಿವೃದ್ಧಿಗೆ ನಗರಾಭಿವೃದ್ಧಿ ಖಾತೆ ರಚಿಸಿದ್ದಾರಾದರೂ, ಬೆಂಗಳೂರು ಪ್ಯಾರಿಸ್ ರೇಂಜಿಗೆ ಆಗದಿದ್ದರೂ, ಕನಿಷ್ಠ ರಸ್ತೆಯಂಥ ಮೂಲ ಸೌಕರ್ಯವೂ ಒದಗಿಸಿಲ್ಲ ಎಂಬುದೇ ದುರಂತ.
ಹಾಗಂತ, ಸಿದ್ದರಾಮಯ್ಯನವರು ಜಾರಿಗೆ ತಂದ, ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಯೋಜನೆಯನ್ನು ಟೀಕಿಸುತ್ತಿಲ್ಲ. ಆದರೆ, ಇಂಥ ನಿಯಮ ಜಾರಿ ಮಾಡುವ ಜತೆಗೆ ರಸ್ತೆಗಳನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಲ್ಲವೇ? ಕಾಲಕಾಲಕ್ಕೆ ದುರಸ್ತಿ ಮಾಡಿಸಬೇಕಲ್ಲವೇ?
ಬಿಬಿಎಂಪಿ ವರದಿ ಪ್ರಕಾರ ಬೆಂಗಳೂರಿನಲ್ಲಿ 15 ಸಾವಿರಕ್ಕೂ ಅಧಿಕ ಗುಂಡಿಗಳಿವೆಯಂತೆ. ಅಲ್ಲ ಸ್ವಾಮಿ, ರಸ್ತೆಯೇ ನೆಟ್ಟಗಿಡದೇ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿದರೆ ಏನು ಪ್ರಯೋಜನ? ಗುಂಡಿಗೆ ಒಂದು ಜೀವ ಎಂದರೂ 15 ಸಾವಿರ ಜನ ಸಾಯುತ್ತಾರೆ. ಆಗ ಹೆಲ್ಮೆಟ್ ಬಂದು ಜೀವ ಉಳಿಸುತ್ತದೆಯೇ?
ಮಳೆ ಬಂದರೆ ನೆನೆಯಬಹುದು ಎಂದು ತಾರಸಿ ದುರಸ್ತಿಗೊಳಿಸಬೇಕೆ ಹೊರತು, ಮನೆಯಲ್ಲಿ ಛತ್ರಿ ಇಟ್ಟುಕೊಳ್ಳುವುದು ಕಡ್ಡಾಯ ಎಂದು ನಿಯಮ ಜಾರಿಗೊಳಿಸುವುದಲ್ಲ ಸಿದ್ದರಾಮಯ್ಯನವರೇ. ನಿಮ್ಮ ಹೆಲ್ಮೆಟ್ ಯೋಜನೆ ಕೊಡೆ ಕಡ್ಡಾಯಗೊಳಿಸಿದಂತಿದೆ. ಮೊದಲು ಯೋಜನೆ ಜಾರಿಗೆ ಮುನ್ನ ಯೋಚಿಸಿ, ಅದಕ್ಕೂ ಮೊದಲು ಗುಂಡಿ ಮುಚ್ಚಿಸಿ ಮಾರ್ರೆ. ಇಲ್ಲದಿದ್ದರೆ ಗುಂಡಿಗೆ ಬಲಿ ಎಂಬ ಹೆಡ್ ಲೈನ್ ನೋಡಿ “ಎಡ”ಬಿಡಂಗಿಗಳು ಗೌರಿ ಫೋಟೊ ಇಟ್ಟು ಮೋದಿ ವಿರುದ್ಧ ಹೋರಾಟ ಮಾಡಿಯಾರು!
Leave A Reply