ಮಕ್ಕಳನ್ನು ಶಾಲೆಗೆ ಕಳಿಸದಿದ್ದರೆ ಪೋಷಕರು ಜೈಲಿಗೆ ಎಂದ ಉತ್ತರ ಪ್ರದೇಶ ಸಚಿವ
ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಎಂದರೇನೆ ಹಾಗೆ. ದಿಟ್ಟ ನಿರ್ಧಾರಕ್ಕೆ ಹೆಸರಾದ ಅವರು ಅಧಿಕಾರ ಸ್ವೀಕರಿಸುತ್ತಲೇ, ಅಕ್ರಮ ಖಸಾಯಿಖಾನೆಗಳ ಹೆಡೆಮುರಿಕಟ್ಟಿದರು. ಆ್ಯಂಟಿ ರೋಮಿಯೋ ಸ್ಕ್ವಾಡ್ ರಚಿಸಿ ಪುಂಡರ ಉಪಟಳಕ್ಕೆ ಕಡಿವಾಣ ಹಾಕಿದರು. ರೈತರ ಸಾಲ ಮನ್ನಾ ಮಾಡಿ ಬಾಯಿಮಾತಲ್ಲೇ ರೈತರ ಪರ ಎಂಬ ಮಾತು ಸುಳ್ಳಾಗಿಸಿದರು.
ಅಂಥಾ ಯೋಗಿ ಸರ್ಕಾರದ ಸಚಿವರೊಬ್ಬರು ಈಗ ಮತ್ತೊಂದು ದಿಟ್ಟ ನಿರ್ಧಾರ ಘೋಷಿಸಿದ್ದಾರೆ.
ಹೌದು, ಯಾವುದೇ ಪೋಷಕರು ಬಡತನದ ನೆಪವೊಡ್ಡಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೆ ಜೈಲಿಗೆ ಅಟ್ಟುವೆ ಎಂದು ಉತ್ತರ ಪ್ರದೇಶ ದಿವ್ಯಾಂಗರ ಕಲ್ಯಾಣ ಸಚಿವ ಓಂ ಪ್ರಕಾಶ್ ರಾಜ್ಬರ್ ಹೇಳಿದ್ದಾರೆ.
ಈ ಕುರಿತ ವೀಡಿಯೋ ಒಂದು ವೈರಲ್ ಆಗಿದ್ದು, “ಪ್ರತಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲೇಬೇಕು. ಇಲ್ಲದಿದ್ದರೆ ಪೊಲೀಸರು ನಿಮ್ಮ ಜೈಲಿಗೆ ಕಳುಹಿಸುತ್ತಾರೆ ಹಾಗೂ ಐದು ದಿನ ಊಟ, ನೀರು ಕೊಡುವುದಿಲ್ಲ” ಎಂದು ಎಚ್ಚರಿಸಿದ್ದಾರೆ.
ಸರ್ಕಾರದಿಂದ ಮಕ್ಕಳ ಶಿಕ್ಷಣಕ್ಕೆ ಸಕಲ ಸೌಲಭ್ಯ ನೀಡಲಾಗಿದೆ. ಇಷ್ಟಾದರೂ ಮಕ್ಕಳು ಶಿಕ್ಷಣದಿಂದ ವಂಚಿತರಾದರೆ ಹೊಣೆಯಾರು? ಅದಕ್ಕಾಗಿಯೇ ಈ ಹೇಳಿಕೆ ನೀಡಿದ್ದೇನೆ ಹಾಗೂ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಡವರ ಶೈಕ್ಷಣಿಕ ಏಳಿಗೆಗಾಗಿಯೇ ನಮ್ಮ ಸರ್ಕಾರ ನಾನಾ ಯೋಜನೆ ರೂಪಿಸಿದ್ದಾರೆ. ಆದರೆ ಅದು ಸದುಪಯೋಗವಾಗದಿದ್ದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ.
Leave A Reply