ಪಾಲಿಕೆಯ ಕಾಮಗಾರಿಗಳಲ್ಲಿ 20% ಕಮೀಷನ್ ಕಾರ್ಪೋರೇಟರ್ ಗಳಿಗೆ ಹೋಗುತ್ತದೆ!
ಯಾವುದೇ ಕಾಮಗಾರಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಯಬೇಕಾದರೆ ಅದರಲ್ಲಿ ಗುತ್ತಿಗೆದಾರ 20% ಕಮೀಷನ್ ಪಾಲಿಕೆಯ ಕಾರ್ಪೋರೇಟರ್ ಗಳಿಗೆ ಕೊಡಬೇಕಾಗುತ್ತದೆ. ಇನ್ನು ಒಂದಿಷ್ಟು ದೊಡ್ಡ ಮೊತ್ತ ಅಧಿಕಾರಿಗಳಿಗೆ ಕೊಡಬೇಕಾಗುತ್ತದೆ. ಹಣ ತೆಗೆದುಕೊಳ್ಳುವಾಗ ಅಧಿಕಾರಿಗಳು ಅದರಲ್ಲಿ ಶಾಸಕರಿಗೆ ಮತ್ತು ಸಚಿವರಿಗೆ ಕೊಡಬೇಕಾಗುತ್ತದೆ ಎಂದು ಹೇಳುತ್ತಾರೆ. ಸಚಿವ ರಮಾನಾಥ ರೈ ಅವರು ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕೆ ನನ್ನ ಬಳಿ ದಾಖಲೆ ಇಲ್ಲ. ಆದ್ದರಿಂದ ನಾನು ಸುಮ್ಮಸುಮ್ಮನೆ ಅವರ ಮೇಲೆ ಆರೋಪ ಹೊರಿಸುವುದಿಲ್ಲ. ಆದರೆ ಉಳಿದವರು ತೆಗೆದುಕೊಳ್ಳುತ್ತಾರೆ ಎನ್ನುವುದು ನೂರಕ್ಕೆ ನೂರು ನಿಜ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಹೇಳಿದ್ದಾರೆ.
ಬುಧವಾರ ಕರಾವಳಿ ಕರ್ನಾಟಕದ ಸ್ಥಳೀಯ ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್. ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್. ಹಾಗಂತ ಯಾರೇ ತಪ್ಪು ಮಾಡಿದರೂ ಹೇಳಬೇಕಾಗುವ ಅಗತ್ಯ ಇದೆ. ಎಲ್ಲಾ ಕಾರ್ಪೋರೇಟರ್ ಗಳು ಲಂಚ ತೆಗೆದುಕೊಂಡೇ ಕೆಲಸ ಮಾಡುತ್ತಾರೆ ಎಂದಲ್ಲ, ಆದರೆ ತೆಗೆದುಕೊಳ್ಳದಿರುವವರ ಪ್ರಮಾಣ ಭಾರೀ ಚಿಕ್ಕದು. ಹೆಚ್ಚಿನವರು ಮುಂಚೆ ಹೇಗಿದ್ದರು, ಈಗ ಹೇಗಿದ್ದಾರೆ ಎಂದು ನೋಡಿದರೆ ಗೊತ್ತಾಗುತ್ತೆ ಎಂದು ಮಾರ್ಮಿಕವಾಗಿ ಅವರು ನುಡಿದರು. 20% ಜನಪ್ರತಿನಿಧಿಗಳಿಗೆ, 10% ಅಧಿಕಾರಿಗಳಿಗೆ ಕೊಟ್ಟ ಮೇಲೆ ಗುತ್ತಿಗೆದಾರರ ಬಳಿ ಎಷ್ಟು ಉಳಿಯುತ್ತದೆ. ಇದರಿಂದ ಅವರು ಸಿಮೆಂಟ್ ಕಡಿಮೆ, ಮರಳು ಜಾಸ್ತಿ ಹಾಕಿ ಕಾಮಗಾರಿ ಮುಗಿಸಬೇಕಾಗುತ್ತದೆ. ಕಾಮಗಾರಿಗಳು ತುಂಬಾ ದಿನ ಉಳಿಯಲ್ಲ ಎಂದು ಅವರು ಹೇಳಿದರು. ಪಾಲಿಕೆಯಲ್ಲಿರುವ ನಗರ ಯೋಜನಾ ವಿಭಾಗದಲ್ಲಿರುವ ಅಧಿಕಾರಿಗಳ ಬಳಿ ಎರಡು ಮೂರು ಐಶಾರಾಮಿ ಫ್ಲಾಟ್ ಗಳು ಇವೆ. ಸಿಕ್ಕಾಪಟ್ಟೆ ಹಣ ಇದೆ. ಇದೆಲ್ಲ ಅವರು ನ್ಯಾಯಯುತವಾಗಿ ದುಡಿಯಲು ಸಾಧ್ಯವಿಲ್ಲ. ಎಲ್ಲವೂ ಲಂಚದ ಮಹಿಮೆ ಎಂದು ಅವರು ಹೇಳಿದರು. ಹಿಂದೆ ಹೀಗಿರಲಿಲ್ಲ. ಇತ್ತೀಚೆಗಂತೂ ಲಂಚವೇ ಹೆಚ್ಚು ಮಾತನಾಡುತ್ತದೆ. ಲಂಚ ತೆಗೆದುಕೊಂಡು ಕೆಲಸ ಮಾಡುವ ಅಧಿಕಾರಿಗಳ ಫೊಟೋಗಳನ್ನು ಹೊರಗೆ ನೇತಾಡಿಸಿದರೆ ಬುದ್ಧಿ ಬರುತ್ತದೆ ಎಂದು ಕೊನೆಯಲ್ಲಿ ಮಾಜಿ ಶಾಸಕರು ಅಭಿಪ್ರಾಯಪಟ್ಟರು.
Leave A Reply