ವಿಧಾನಸೌಧ ನಿರ್ಮಾಣವಾದದ್ದೇ 1.5 ಕೋಟಿ ರೂ.ಗಳಲ್ಲಿ, ಸಿದ್ದರಾಮಯ್ಯ ವ್ಯಯಿಸುತ್ತಿರುವುದು 10 ಕೋಟಿ!
ಬೆಂಗಳೂರು: ರಾಜ್ಯ ಸರ್ಕಾರದ ಅಧಿಕಾರ ಕೇಂದ್ರವಾದ, ಆಡಳಿತದ ಹೃದಯ ಭಾಗವಾದ ವಿಧಾನಸೌಧಕ್ಕೆ 60 ವರ್ಷ ತುಂಬಿದ ಸುವರ್ಣ ಘಳಿಗೆ ಸಂಭ್ರಮದಿಂದ ಆಚರಿಸುವುದು ಸಮಂಜಸ ಹಾಗೂ ಅದನ್ನು ನಿರ್ಮಿಸಿದ ಕೆಂಗಲ್ ಹನುಮಂತಯ್ಯನವರಿಗೆ ಸಲ್ಲಿಸುವ ಗೌರವಕ್ಕೆ ಸಮಾನ.
ಆದರೆ ಅದಕ್ಕೆ ಒಂದು ಮಿತಿ ಬೇಡವೇ? ಒಂದು ನಿರ್ದಿಷ್ಟ ಖರ್ಚು, ನಿರ್ದಿಷ್ಟ ಯೋಜನೆಯೊಂದಿಗೆ ಸರ್ಕಾರ ಮುಂದಡಿಯಿಡುವುದು ಬೇಡವೇ? ಯಾವುದೇ ಮುಂದಾಲೋಚನೆಯೇ ಇಲ್ಲದೆ ಶಾದಿ ಭಾಗ್ಯದಂಥ ಯೋಜನೆ ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರ ಯೋಜನೆಗಳೇ ಹೀಗೆಯೇ?
ವಜ್ರ ಮಹೋತ್ಸವದ ವಿಷಯಕ್ಕೇ ಬರುವುದಾದರೆ, ಮೊದಲು ಸರ್ಕಾರ ಊಟಕ್ಕೂ ಕೋಟಿ ರೂಪಾಯಿ ಖರ್ಚಿನ ಲೆಕ್ಕ ತೋರಿಸಿ ಒಟ್ಟು 26.87 ಕೋಟಿ ರೂಪಾಯಿಗಳಲ್ಲಿ ವಜ್ರಮಹೋತ್ಸವ ಆಚರಿಸಲು ನಿರ್ಧರಿಸಿತ್ತು. ಆದರೆ ರಾಜ್ಯಾದ್ಯಂತ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ 10 ಕೋಟಿ ರೂಪಾಯಿಗೆ ಇಳಿಸಿದ್ದಾರೆ. ಹಾಗಂತ ಇದೇನು ಕಡಿಮೆ ವೆಚ್ಚವಲ್ಲ. ಅದೂ ಒಂದು ದಿನಕ್ಕೆ 10 ಕೋಟಿ ರೂಪಾಯಿ ಖರ್ಚು ಎಂದರೆ ಸುಮ್ಮನೆಯೇ?
ನೆನಪಿರಲಿ, ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ನಿರ್ಮಿಸಲು ಆಗ ಖರ್ಚು ಮಾಡಿದ್ದು ಸುಮಾರು 1.5 ಕೋಟಿ ರೂಪಾಯಿ. ಹೌದು ಕಾಲಘಟ್ಟದ ವ್ಯತ್ಯಾಸದಲ್ಲಿ ರೂಪಾಯಿ ವ್ಯತ್ಯಾಸವಾಗುತ್ತದೆ ಎನ್ನೋಣ. ಹಾಗೆ ನೋಡಿದರೆ ಕೆಂಗಲ್ ಹನುಮಂತಯ್ಯನವರಿಗೆ ದುಂದು ವೆಚ್ಚ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದವು. ಹಾಗಾಗಿ, ಆಗ ವಿಧಾನಸೌಧ ನಿರ್ಮಿಸಲು 1.5 ಕೋಟಿ ರೂಪಾಯಿ ದುಬಾರಿಯಾದರೆ, ಈಗ ಒಂದು ದಿನದ ಕಾರ್ಯಕ್ರಮಕ್ಕೆ 10 ಕೋಟಿ ರೂಪಾಯಿ ವ್ಯಯಿಸುವುದೂ ದುಬಾರಿಯೇ.
ಇನ್ನು ಈ ವಜ್ರ ಮಹೋತ್ಸವದ ಆಚರಣೆಯಲ್ಲಿ ಸರ್ಕಾರದ ಲೆಕ್ಕಾಚಾರ ಹೇಗಿದೆ ನೋಡಿ. ಒಂದು ಊಟಕ್ಕೆ 2000 ರೂಪಾಯಿ ನಿಗದಿಪಡಿಸಿದ್ದನ್ನು 380ಕ್ಕೆ ನಿಗದಿಡಪಿಸಲಾಗಿದೆ ಎಂದು ತಿಳಿದು ಬಂದಿದೆ. ಸಾಕ್ಷ್ಯ ಚಿತ್ರ ನಿರ್ಮಾಣಕ್ಕೆ ಟಿ.ಎನ್.ಸೀತಾರಾಂ ಅವರಿಗೆ ನಿಗದಿಪಡಿಸಿದ್ದ 1.58 ಕೋಟಿ ರೂಪಾಯಿ ಬದಲಿಗೆ 50 ಲಕ್ಷ, ಮಾಸ್ಟರ್ ಕಿಶನ್ ಅವರಿಗೆ 1.02 ಕೋಟಿ ರೂ. ಬದಲಿಗೆ 40 ಲಕ್ಷ. ಹೀಗೆ ಎಲ್ಲ ಖರ್ಚುಗಳನ್ನೂ ಕತ್ತರಿ ಹಾಕಲಾಗಿದೆ.
ಇದನ್ನು ಮೊದಲೇ ಯೋಚಿಸಿದರೆ ಈಗಿರುವ 10 ಕೋಟಿ ರೂಪಾಯಿಯಲ್ಲೂ ಕಡಿತಗೊಳಿಸಬಹುದಿತ್ತಲ್ಲವೇ ಮುಖ್ಯಮಂತ್ರಿಯವರೇ? ಸರಳ ದಸರಾದಂತೆಯೇ ಈ ಕಾರ್ಯಕ್ರಮವನ್ನೂ ಆಚರಿಸಬೇಕು ಎಂಬ ಮನೋಭಾವ ಎಲ್ಲರೂ ಟೀಕಿಸಿದ ಮೇಲೆಯೇ ಅರಿವಾಯಿತೇ? ಹೀಗೆ ದುಂದು ವೆಚ್ಚ ತಡೆದು ಬೆಂಗಳೂರಿನ ಗುಂಡಿಗಳಾದರೂ ಮುಚ್ಚಿಸಿ ಜನರ ಜೀವ ಉಳಿಸುವ ಕಲ್ಪನೆಯೇಕೆ ನಿಮ್ಮ ಯೋಚನೆಗೆ ಬರಲಿಲ್ಲ?
ಇನ್ನು, ವಜ್ರಮಹೋತ್ಸವದ ಅನುದಾನ ಬಿಡುಗಡೆಗೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರಂಥವರೇ ನಿಮ್ಮ ಮನೆ ಬಾಗಿಲಿಗೆ ಬರುವಂತಾಗಿದೆ ಎಂದರೆ ನಿಮ್ಮ ಸಂಪುಟದ, ಸರ್ಕಾರದ ಘನವೆತ್ತವರೇ ಹಣದ ವಿಚಾರದಲ್ಲಿ ಹೇಗೆ ವರ್ತಿಸುತ್ತಿದ್ದಾರೆ, ಘನವೆತ್ತ ಸ್ಥಾನದ ಮರ್ಯಾದೆಯನ್ನು ಎಷ್ಟರಮಟ್ಟಿಗೆ ಉಳಿಸುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದೆ ಬಿಡಿ.
Leave A Reply