ಉದ್ಘಾಟನೆಯ ದಿನವೇ ಬಾಗಿಲು ಮುರಿತ: ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಶೀತಲ ಸಮರ!

ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಂಟ್ವಾಳದಲ್ಲಿ ಹತ್ತು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಿನಿ ವಿಧಾನಸೌಧದ ಉದ್ಘಾಟನೆ ಮಾಡಿದ್ದಾರೆ. ಅದರ ಬೆನ್ನಿಗೆ ಮಿನಿ ವಿಧಾನಸೌಧದ ಒಳಗೆ ಕಾರ್ಯಕತ್ತರು ನುಗ್ಗಿದ ರಭಸಕ್ಕೆ ವಿಧಾನಸೌಧದ ಬಾಗಿಲು ಮುರಿದಿದೆ.
ಉದ್ಘಾಟನೆಯಾದ ದಿನವೇ ಬಾಗಿಲು ಮುರಿಯಲು ಕಾರಣವೇನು ಎನ್ನುವುದರ ಕುರಿತು ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆ ಬಾಗಿಲು ಮಾಡಿಸಿದ ಗುತ್ತಿಗೆದಾರ ಕಳಪೆ ಗುಣಮಟ್ಟದ ಕಚ್ಚಾಪದಾರ್ಥವನ್ನು ಬಳಸಿರಬೇಕು ಎಂದು ಸಂಶಯ ಉಂಟಾಗಿದೆ. ಒಂದು ವೇಳೆ ಕಾರ್ಯಕತ್ತರು ಒಳಗೆ ಹೋಗುವ ರಭಸಕ್ಕೆ ಬಾಗಿಲು ಮುರಿಯಿತು ಎನ್ನುವುದಾದರೆ ಆ ಬಾಗಿಲು ಎಷ್ಟು ವರ್ಷ ಬಾಳಿಕೆ ಬರುತ್ತೆ ಎಂದು ಈಗಲೇ ಗೊತ್ತಾಗುತ್ತೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಕೋಟ್ಯಾಂತರ ರೂಪಾಯಿ ಯೋಜನೆಗಳು ಹೀಗೆ ಮೊದಲ ದಿನವೇ ತಮ್ಮ ಬಣ್ಣ ತೋರಿಸಿದರೆ ಏನು ಕಥೆ ಎನ್ನುವುದು ಸದ್ಯದ ಪ್ರಶ್ನೆ.
ಅತ್ತ ಮಿನಿ ವಿಧಾನಸೌಧದ ಬಾಗಿಲು ತುಂಡಾದರೆ ಇತ್ತ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಎದುರು ಮಿಂಚಬೇಕೆನ್ನುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಮುಖಂಡರ ಆಸೆಗೆ ಸಿಎಂ ತಣ್ಣೀರೆರೆಚಿದ ಘಟನೆ ಕೂಡ ನಡೆದಿದೆ. ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ಕಾದು ನಿಂತ ಐವನ್ ಡಿಸೋಜಾ ಬಣ ಮತ್ತು ಅಭಯಚಂದ್ರ ಜೈನ್ ಬಣಗಳು ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಮಾಧ್ಯಮಗಳ ಮುಂದೆ ಬಹಿರಂಗವಾಗಿ ತೋರಿಸಿದಂತೆ ಕಾಣುತ್ತಿತ್ತು. ಈ ಮಧ್ಯೆ ಸ್ಥಳೀಯ ಖಾಸಗಿ ವಾಹಿನಿಯೊಂದು ವಿಡಿಯೋ ತುಣುಕೊಂದನ್ನು ಪ್ರಸಾರ ಮಾಡಿದ್ದು ಅದರಲ್ಲಿ ಈ ಆಂತರಿಕ ಶೀತಲ ಸಮರ ನಡೆದಿರುವ ದೃಶ್ಯ ಪ್ರಸಾರವಾಗುತ್ತಿದೆ!