ನರೇಂದ್ರ ಮೋದಿ ಧರ್ಮಸ್ಥಳಕ್ಕೆ ಭೇಟಿ: ಭಾರಿ ಭದ್ರತೆ, ನಕ್ಸಲರ ಮೇಲೂ ಕಣ್ಣು
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 29ರಂದು ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭಾರಿ ಭದ್ರತೆ ಒದಗಿಸುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪಶ್ಚಿಮ ಘಟ್ಟದ ಕಾಡುಗಳ ನಕ್ಸಲರ ಉಪಟಳ ಇರುವ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದೆ.
ಭದ್ರತಾ ವ್ಯವಸ್ಥೆ ಕುರಿತು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಎಲ್ಲ ಪೊಲೀಸ್ ಠಾಣೆಗಳಿಗೆ ಪತ್ರ ಬರೆದಿದ್ದು, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ತಂಡ, ಒಂದು ನಕ್ಸಲ ನಿಗ್ರಹ ಪಡೆ ನಿಯೋಜಿಸಲಾಗಿದೆ. ಅದಾಗಲೇ ಬಾಂಬ್ ಪತ್ತೆ ದಳ ಒಂದು ಹಂತದ ಪರಿಶೀಲನೆ ನಡೆಸಿದೆ ಎಂದು ತಿಳಿದುಬಂದಿದೆ.
ಕಾರ್ಯಕ್ರಮ ನಡೆಯುವ ದಿನವಾದ ಅಕ್ಟೋಬರ್ 29ರಂದು ಉಜಿರೆಗೆ ಅಪಾರ ಜನಸಂಖ್ಯೆ ಆಗಮಿಸುವ ಹಿನ್ನೆಲೆಯಲ್ಲೂ ಜಿಲ್ಲಾಡಳಿತ ಭದ್ರತೆಗೆ ಸಿದ್ಧವಾಗಿದ್ದು 2500 ಪೊಲೀಸರು ಹಾಗೂ 160ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿದೆ.
ಆದಾಗ್ಯೂ ಬುಧವಾರ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಪ್ರಧಾನ ಮಂತ್ರಿಯವರ ವಿಶೇಷ ಭದ್ರತಾ ಪಡೆ ಮಂಗಳೂರಿಗೆ ಆಗಮಿಸಲಿದ್ದು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಭಾರಿ ಬಂದೋಬಸ್ತ್ ಏರ್ಪಡಿಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ.
Leave A Reply