ಗುಜರಾತ್ ಚುನಾವಣೆಯಲ್ಲಿ ಮತ್ತೆ ಅರಳಿದೆ ಕಮಲ: ಸಮೀಕ್ಷೆ
ದೆಹಲಿ: ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಗುಜರಾತಿನಲ್ಲಿದ್ದ ಬಿಜೆಪಿ ಪರ ಅಲೆ ಮೋದಿ ಪ್ರಧಾನಿಯಾದರೂ ಮುಂಬವರು ಚುನಾವಣೆಯಲ್ಲಿ ಮುಂದುವರಿಯುವ ಸಾಧ್ಯತೆ ಗೋಚರಿಸಿದ್ದು, ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿಯೇ ಗದ್ದುಗೆ ಏರಲಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಸಂಸ್ಥೆಗಳು ನಡೆಸಿದ ಚುನಾವಣೆ ಪೂರ್ವ ಸಮೀಕ್ಷೆ ನಡೆಸಿದ್ದು, ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರವರೆಗಿನ ಅವಧಿಯಲ್ಲಿ ರಾಜ್ಯದ ಎಲ್ಲ 182 ಕ್ಷೇತ್ರಗಳಲ್ಲಿ ಮತದಾರರ ಅಭಿಪ್ರಾಯ ಸಂಗ್ರಹಿಸಿದೆ. ಈ ಅಭಿಪ್ರಾಯ ಸಂಗ್ರಹಣೆಯ ಪ್ರಕಾರ ಬಿಜೆಪಿ 115-125 ಸ್ಥಾನ ಗಳಿಸಲಿದೆ ಎಂದು ತಿಳಿದುಬಂದಿದೆ.
ಅತ್ತ ದಶಕಕ್ಕೂ ಅಧಿಕ ಅವಧಿಯಿಂದ ಪ್ರತಿಪಕ್ಷ ಸ್ಥಾನದ ಕುರ್ಚಿ ಬಿಸಿ ಮಾಡುತ್ತಿರುವ ಕಾಂಗ್ರೆಸ್ಸಿಗೆ ಕೇವಲ 57 ರಿಂದ 65 ಸ್ಥಾನ ಲಭಿಸಲಿವೆ ಎಂದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಸಮೀಕ್ಷೆಗಾಗಿ ಗುಜರಾತಿನ 18,243 ಜನರನ್ನು ಸಂಪರ್ಕಿಸಲಾಗಿದ್ದು ಅದರಲ್ಲಿ ಶೇ.48ರಷ್ಟು ಜನ ಬಿಜೆಪಿಗೆ ಮತ ಹಾಕುವುದಾಗಿ ತಿಳಿಸಿದ್ದಾರೆ ಎಂದು ಸಮೀಕ್ಷೆಯಿಂದ ದೃಢಪಟ್ಟಿದೆ. ಉತ್ತರ ಪ್ರದೇಶ, ದೆಹಲಿ ಹಾಗೂ ಬಿಹಾರ ಚುನಾವಣೆ ವೇಳೆಯಲ್ಲೂ ಆಕ್ಸಿಸ್ ಮೈ ಇಂಡಿಯಾ ಸಂಸ್ಥೆ ನಡೆಸಿದ ಸಮೀಕ್ಷೆ ನಿಜವಾಗಿದ್ದವು. ಅಷ್ಟೇ ಅಲ್ಲ, 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಬಹಿರಂಗಗೊಳಿಸಿದ್ದು, ಅದರಂತೆಯೇ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಗದ್ದುಗೆ ಏರಿತು.
ಈ ಎಲ್ಲ ಕಾರಣಗಳಿಂದ ಇಂಡಿಯಾ ಟುಡೆ ಹಾಗೂ ಆಕ್ಸಿಸ್ ಮೈ ಇಂಡಿಯಾ ಸಂಸ್ಥೆಗಳು ಗುಜರಾತಿನಲ್ಲಿ ನಡೆಸಿರುವ ಸಮೀಕ್ಷೆ ನಿಜವಾಗಲಿದ್ದು, ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರುವ ಮೂಲಕ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿರುವ ಬಿಜೆಪಿ ಕನಸಿಗೆ ಗುಜರಾತ್ ಮತ್ತಷ್ಟು ಇಂಬು ನೀಡಲಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.
ಬುಧವಾರ ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಸಾಧ್ಯತೆ ಇದೆ.
Leave A Reply