ಗೋದಾಮುಗಳಲ್ಲಿ ಕೊಳೆಯುತ್ತಿದೆ ಅನ್ನಭಾಗ್ಯ ಯೋಜನೆಯ ಆಹಾರ ಪದಾರ್ಥಗಳು
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಅನ್ನಭಾಗ್ಯದ ಟನ್‍ಗಟ್ಟಲೇ ಆಹಾರ ಪದಾರ್ಥಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಆನೇಕಲ್, ಜಿಗಣಿ ಹಾಗೂ ಸರ್ಜಾಪುರದಲ್ಲಿರುವ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಗೋದಾಮುಗಳಲ್ಲಿ ಕೊಳೆಯುತ್ತಿದೆ. ಸರ್ಕಾರ ನೂರಾರು ಕೋಟಿ ರೂ. ನೀಡಿ ಖರೀದಿಸಿದ್ದಆಹಾರ ಪದಾರ್ಥಗಳು ವ್ಯರ್ಥವಾಗುತ್ತಿದೆ.
ಆನೇಕಲ್ ತಾಲೂಕಿನ ಕೇಂದ್ರ ಭಾಗವಾಗಿರುವ ಆನೇಕಲ್ ಪಟ್ಟಣದ ಗೋದಾಮಿನಲ್ಲಿ 331 ಕ್ವಿಂಟಾಲ್, ಜಿಗಣಿಯಲ್ಲಿ 125 ಕ್ವಿಂಟಲ್ ಹಾಗೂ ಸರ್ಜಾಪುರದಲ್ಲಿ 100 ಕ್ವಿಂಟಾಲ್ ಗೋಧಿ ಪತ್ತೆಯಾಗಿದ್ದು ಸಂಪೂರ್ಣವಾಗಿ ಹಾಳಾಗಿದ್ದು ಮನುಷ್ಯ ತಿನ್ನಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ, ಫಲಾನುಭವಿಗಳಿಗೆ ಸಿಗಬೇಕಾದ ಆಹಾರ ಇಲಿಗಳ ಪಾಲಾಗಿದೆ.
ಬಡ ಜನರ ಹಸಿವನ್ನು ನೀಗಿಸುವ ಪ್ರಮುಖ ಯೋಜನೆಯಾಗಿ ರಾಜ್ಯ ಸರ್ಕಾರ ಹೆಮ್ಮೆಯಿಂದ ಜಾರಿಗೆ ತಂದಿರುವ ಯೋಜನೆ ಇದಾಗಿದ್ದು, ಬಡವರ ಹಸಿವನ್ನು ನೀಗಿಸ ಬೇಕಾದ ಆಹಾರ ಕೊಳೆಯುತ್ತಿರುವ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಆಹಾರ ಪದಾರ್ಥಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
Leave A Reply