ಅಬ್ದುಲ್ ಕರೀಂ ತೆಲಗಿ ಸಾವು
ಛಾಪಾ ಕಾಗದ ಪ್ರಕರಣದ ಪ್ರಮುಖ ಆರೋಪಿ ಕರೀಂಲಾಲಾ ತೆಲಗಿ ಅಲಿಯಾಸ್ ಅಬ್ದುಲ್ ಕರೀಂ ತೆಲಗಿ ಹೆಸರೇ ಸಾಕಷ್ಟು ಜನರಿಗೆ ಮರೆತುಹೋಗಿತ್ತು. ಆದರೆ ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದ ತೆಲಗಿ ಅಕ್ಟೋಬರ್ ೨೬ರಂದು (ಇಂದು) ಮೃತಪಟ್ಟಿದ್ದಾನೆ. ಅನಾರೋಗ್ಯ ನಿಮಿತ್ತ ಒಂದು ವಾರದ ಹಿಂದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿತ್ತು.
ಮೂಲತಃ ಖಾನಾಪುರದವನಾದ ತೆಲಗಿ, ಎಂಟು ವರ್ಷ ದುಬೈನಲ್ಲಿದ್ದು ಭಾರತಕ್ಕೆ ಮರಳಿದ ನಂತರ ನಕಲಿ ಪಾಸ್‌ಪೋರ್ಟ್, ಛಾಪಾಕಾಗದ ತಯಾರಿಸುವುದರಲ್ಲಿ ತೊಡಗಿಕೊಂಡ. ನಕಲಿ ಛಾಪಾಕಾಗದದ ಉದ್ಯಮವನ್ನು ಈತ ಎಷ್ಟು ದೊಡ್ಡದಾಗಿ ಬೆಳೆಸಿದ್ದ ಅಂದರೆ ಈತ ೩೫೦ ಜನರನ್ನು ಇದೇ ಕೆಲಸಕ್ಕಾಗಿ ನೇಮಿಸಿಕೊಂಡಿದ್ದ. ಇವರು ಬ್ಯಾಂಕ್, ವಿಮಾ ಕಂಪೆನಿಗಳು ಸೇರಿದಂತೆ ವಿವಿಧೆಡೆ ನಕಲಿ ಛಾಪಾಕಾಗದಗಳನ್ನು ಮಾರಾಟ ಮಾಡುತ್ತಿದ್ದರು. ೨೦೦ ಕೋಟಿ ರು. ಮೌಲ್ಯದ ಛಾಪಾಕಾಗದ ಮಾರಾಟ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಈ ನಕಲಿ ದಂಧೆಯಲ್ಲಿ ಸರಕಾರಿ ನೌಕರರು ಹಾಗೂ ಪೊಲೀಸ್ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಭಾಗಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೦೧ರ ನವೆಂಬರ್‌ನಲ್ಲಿ ಈತನನ್ನು ರಾಜಸ್ಥಾನದ ಅಜ್ಮೇರ್‌ನಲ್ಲಿ ಬಂಧಿಸಲಾಗಿತ್ತು. ಅಂದಿನಿಂದಲೂ ಈತ ಜೈಲಿನಲ್ಲಿಯೇ ಇದ್ದ. ಈತನೊಂದಿಗೆ ಸಾಕಷ್ಟು ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂಬ ಸುದ್ದಿ ಇತ್ತಾದರೂ, ಯಾರ ಹೆಸರೂ ಹೊರಗೆ ಬರಲಿಲ್ಲ.
ಅಬ್ದುಲ್ ಕರೀಂ ತೆಲಗಿಗೆ ಏಡ್ಸ್ ಸೇರಿದಂತೆ ಹಲವು ರೋಗಗಳಿದ್ದವು ಎಂಬುದು ಈ ಹಿಂದೆಯೇ ವರದಿಯಾಗಿತ್ತು. ಐದಾರು ವರ್ಷಗಳ ಹಿಂದೆಯೇ ಈತನಿಗೆ ಏಡ್ಸ್ ಇರುವ ಸಂಗತಿ ಬಹಿರಂಗವಾಗಿ, ದೊಡ್ಡ ಸುದ್ದಿಯಾಗಿತ್ತು.
Leave A Reply