ಮನಮೋಹನರದ್ದು ಮೌನ, ಮೋದಿಯದ್ದು ಮಾತಿನ ಮೋಡಿ
ನೀವೊಬ್ಬ ಇತಿಹಾಸದ ವಿದ್ಯಾರ್ಥಿಯೋ, ರಾಜಕೀಯದ ಬಗ್ಗೆ ಆಸಕ್ತಿಯನ್ನೋ ಇಟ್ಟುಕೊಂಡಿದ್ದರೆ, ಜವಾಹರ್ ಲಾಲ್ ಮಾತಿಗೆ ನಿಂತರೆ ಲಕ್ಷಾಂತರ ಜನ ಸೇರುವುದು, ಬಿಸಿಲಿದ್ದರೂ ಪ್ರಧಾನಿ ಇಂದಿರಾ ಗಾಂಧಿ ಮಾತಿಗೆ ಜನ ಕಾಯುತ್ತಿದ್ದುದು, ಅಟಲ್ ಬಿಹಾರಿ ವಾಜಪೇಯಿ ಕವನ ಕೇಳಲು, ಭಾಷಣ ಆಲಿಸಲು ಲಕ್ಷ ಲಕ್ಷ ಜನ ಜಮಾಯಿಸುತ್ತಿದ್ದುದರ ಬಗ್ಗೆ ಓದಿರುತ್ತೀರಿ. ತುಸು ಹಿರಿಯರಾದರೆ ತುಂಬಿದ ಸಭೆಯಲ್ಲಿ ಈ ನಾಯಕರ ಮಾತು ಕಿವಿಯಾರೆ ಕೇಳಿರುತ್ತೀರಿ…
ಆದರೆ ಇವರ ನಂತರ ಮಾತಿನಲ್ಲಿ ಜನರನ್ನು ಹಿಡಿದಿಡುವವರು ಯಾರು? ಸೋನಿಯಾ ಗಾಂಧಿ? ರಾಹುಲ್ ಗಾಂಧಿ? ಲಾಲೂ ಪ್ರಸಾದ್ ಯಾದವ್? ಉದ್ಧವ್ ಠಾಕ್ರೆ? ಹೂಂ ಹೂಂ. ಅದು ನರೇಂದ್ರ ದಾಮೋದರ್ ದಾಸ್ ಮೋದಿ.
ಗುಜರಾತ್ ಅಭಿವೃದ್ಧಿ…
ಪ್ರಧಾನಿಯಾದ ಬಳಿಕ ಜನಧನ ಯೋಜನೆ…
ನೋಟು ನಿಷೇಧ…
ರೈತರ ಪರ ಯೋಜನೆ…
ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್…
ಸರಕು ಮತ್ತು ಸೇವಾ ತೆರಿಗೆ…
ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ…
ಹೀಗೆ ನರೇಂದ್ರ ಮೋದಿ ದೇಶಾದ್ಯಂತ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪುಟಗಟ್ಟಲೇ ಬರೆಯಬಹುದು. ಆದರೂ ನರೇಂದ್ರ ಮೋದಿ ಯೋಜನೆಗಳ ಹೊರತಾಗಿಯೂ ಜನರಿಗೆ ಆಪ್ತ ಹಾಗೂ ಹತ್ತಿರವಾಗುತ್ತಾರೆ. ಅದು ಮಾತಿನಿಂದ, ಮಾತಿನ ಮೋಡಿಯಿಂದ.
ನೀವು ಸಹ ಗಮನಿಸಿರಬಹುದು, ಅದು ಸಂಸತ್ತಿರಲಿ, ಸಾರ್ವಜನಿಕ ಸಭೆಯಲ್ಲಿರಲಿ, ಅದು ಅಮೆರಿಕವೇ ಆಗಿರಲಿ. ನರೇಂದ್ರ ಮೋದಿ ಮಾತನಾಡಲು ಆರಂಭಿಸಿದರೆ, ಎಲ್ಲ ರಾಜ್ಯ ಹಾಗೂ ರಾಷ್ಟ್ರೀಯ ಚಾನೆಲ್ ಗಳ ಪರದೆ ಮೋದಿ ಕಾಣಿಸಿಕೊಳ್ಳುತ್ತಾರೆ. ಮರುದಿನ ಅದೇ ಪತ್ರಿಕೆಯಲ್ಲಿ ಪ್ರಮುಖ ಸುದ್ದಿಯೂ ಆಗುತ್ತದೆ. ಅಷ್ಟಕ್ಕೂ ಒಬ್ಬ ನಾಯಕನಾದವನು ಮಾತನಾಡದೇ ಜನರಿಗೆ ಹತ್ತಿರವಾಗೋದು ಹೇಗೆ ಸಾಧ್ಯ? ನರೇಂದ್ರ ಮೋದಿ ಆಪ್ತವಾಗೋದು ಸಹ ಮಾತಿನ ಮೋಡಿಯಿಂದಲೇ.
ಮತ್ತದೇ ಅಭಿವೃದ್ಧಿ ವಿಚಾರಕ್ಕೆ ಬರುವುದಾದರೆ, ನರೇಂದ್ರ ಮೋದಿ ಕಳೆದ ಎರಡು ಅವಧಿಯ ಯುಪಿಎ ಅಥವಾ ಮನಮೋಹನ್ ಸಿಂಗ್ ಅವರಿಗಿಂತಲೂ ಉತ್ತಮ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಹಾಗೆಯೇ ಇದನ್ನು ಮಾತಿಗೂ ಹೋಲಿಸುವುದಾದರೆ, ಮನಮೋಹನ್ ಸಿಂಗ್ ಹಾಗೂ ನರೇಂದ್ರ ಮೋದಿ ಮಾಡಿದ ಭಾಷಣಗಳೊಂದಿಗೆ ತಾಳೆ ಹಾಕುವುದಾದರೆ, ನರೇಂದ್ರ ಮೋದಿಯವರೇ ಮುನ್ನಡೆ ಸಾಧಿಸುತ್ತಾರೆ…
ಹೌದು, ನರೇಂದ್ರ ಮೋದಿ ಅವರು ಪ್ರಧಾನಿಯಾದ ಈ 41 ತಿಂಗಳಲ್ಲಿ ಬರೋಬ್ಬರಿ ತಿಂಗಳಿಗೆ 19 ಭಾಷಣಗಳಂತೆ ಸಾರ್ವಜನಿಕ 775 ಭಾಷಣ ಮಾಡಿದ್ದಾರೆ. ಅದರಲ್ಲಿ 2014ರಲ್ಲಿ 31, 2015ರಲ್ಲಿ 264, 2016ರಲ್ಲಿ 207, 2017ರಲ್ಲಿ 169 ಭಾಷಣ ಮಾಡಿದ್ದಾರೆ. ಈ ಒಟ್ಟಾರೆ ಭಾಷಣಗಳಲ್ಲಿ ನರೇಂದ್ರ ಮೋದಿ 166 ಭಾಷಣಗಳನ್ನು ವಿದೇಶಗಳಲ್ಲಿ ಮಾಡಿದ್ದಾರೆ. ಹೀಗೆ ವಿದೇಶಗಳಲ್ಲಿ ಭಾಷಣ ಮಾಡಿ ಕೋಟ್ಯಂತರ ಅನಿವಾಸಿ ಭಾರತೀಯರ ಮನಗೆದ್ದಿದ್ದಾರೆ. ವೈರಿಗಳಿಗೂ ಬಿಸಿ ಮುಟ್ಟಿಸಿದ್ದಾರೆ. ಪಾಕಿಸ್ತಾನಕ್ಕೂ ತಪರಾಕಿ ಹಾಕಿದ್ದಾರೆ.
ಆದರೆ ಮೌನದಿಂದಲೇ ಹೆಸರಾಗಿದ್ದ ಹಾಗೂ ಮೌನಮೋಹನ್ ಸಿಂಗ್ ಎಂದೇ ಖ್ಯಾತಿಯಾಗಿದ್ದ ಡಾ.ಮನಮೋಹನ್ ಸಿಂಗ್ ಹತ್ತು ವರ್ಷಗಳಲ್ಲಿ ಮಾಡಿದ್ದು 1401 ಭಾಷಣ. ಅದರಲ್ಲಿ ಮೊದಲ ಅವಧಿಯಲ್ಲಿ 762 ಹಾಗೂ ಎರಡನೇ ಅವಧಿಯಲ್ಲಿ 639 ಸಾರ್ವಜನಿಕ ಭಾಷಣ ಮಾಡಿದ್ದಾರೆ. ಅಂದರೆ ತಿಂಗಳಿಗೆ 11ರಂತೆ ಭಾಷಣ ಮಾಡಿದ್ದಾರೆ. ಹಾಗೆಯೇ ಕೃತಿಯಲ್ಲೂ ಮನಮೋಹನ್ ಸಿಂಗ್ ಹಿನ್ನಡೆ ಸಾಧಿಸಿದ್ದಾರೆ.
ಮಾತು ಬೆಳ್ಳಿ, ಮೌನ ಬಂಗಾರ ಎಂಬ ಗಾದೆ ಮಾತಿದೆ. ಅದರೆ ರಾಜಕಾರಣಿಯಾದವನಿಗೆ, ಅದರಲ್ಲೂ ಪ್ರಧಾನಿಯಾದವರಿಗೆ ಮಾತೇ ಜೀವಾಳ. ಜನರಿಗೆ ವಿಚಾರ ಮುಟ್ಟಿಸಲು, ಅಭಿವೃದ್ಧಿಗೆ ಸಹಕಾರ ಪಡೆಯಲು, ಅಭಿವೃದ್ಧಿ ತಿಳಿಸಲು, ಅವರ ಮನಸೆಳೆಯಲು ರಾಜಕಾರಣಿಗೆ ಮಾತೇ ಆಧಾರ. ಅದನ್ನು ನರೇಂದ್ರ ಮೋದಿ ಅವರು ಸಾಬೀತುಪಡಿಸಿ ಜನನಾಯಕ ಎನಿಸಿದ್ದಾರೆ.
ಅಂದಹಾಗೆ, ನರೇಂದ್ರ ಮೋದಿ ಇದೇ ತಿಂಗಳು ಗುಜರಾತಿನಲ್ಲಿ ಮಾಡಿದ ಭಾಷಣಕ್ಕೆ ಆಗಮಿಸಿದವರ ಸಂಖ್ಯೆ 7 ಲಕ್ಷ. ಇದು ಮೋದಿ ಅವರ ಮಾತಿನ ಓಘ ಹಾಗೂ ಜನಪ್ರಿಯತೆಯ ವೇಗಕ್ಕೆ ಹಿಡಿದ ಕನ್ನಡಿ.
Leave A Reply