ಐ ಲವ್ ಪಾಕಿಸ್ತಾನ್ ಮುದ್ರಿತ ಬಲೂನ್ ಮಾರುತ್ತಿದ್ದವನ ಬಂಧನ
ಲಖನೌ: ಉತ್ತರ ಪ್ರದೇಶ ಕಾನ್ಪುರದ ಗೋವಿಂದ ನಗರದಲ್ಲಿ “ಐ ಲವ್ ಪಾಕಿಸ್ತಾನ” ಎಂದು ಬಲೂನ್ ಮೇಲೆ ಮುದ್ರಿಸಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಹಲವು ಬಲೂನ್ ಪ್ಯಾಕೆಟ್ ವಶಪಡಿಸಿಕೊಂಡಿದ್ದು, ಬೂಲೂನ್ ಗಳ ಮೇಲೆ ಐ ಲವ್ ಪಾಕಿಸ್ತಾನ್, ಹಬೀಬಿ, ಅಂದರೆ ನನ್ನ ಪ್ರೀತಿಯ, ನನ್ನ ನೆಚ್ಚಿನ ಎಂದು ಮುದ್ರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ವಿರುದ್ಧ ದೇಶದ ಸಮಗ್ರತೆಗೆ ಧಕ್ಕೆ ತಂದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರನ್ನು ಸನ್ನಿ ಮತ್ತು ಸಮೀರ್ ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶದ ಹಿಂದೂ ಯುವ ವಾಹಿನಿ ಸಂಘಟನೆಗೆ ಸೇರಿದ ಹಾಗೂ ವೃತ್ತಿಯಿಂದ ವಕೀಲರಾಗಿರುವ ಅಜಯ್ ಪ್ರತಾಪ್ ಸಿಂಗ್ ಎಂಬುವರು ತಮ್ಮ ಮಗನ ಜನ್ಮದಿನ ಹಿನ್ನೆಲೆಯಲ್ಲಿ ಬಲೂನ್ ಖರೀದಿಸಲು ತೆರಳಿದ್ದಾಗ, ಒಂದು ಅಂಗಡಿಯ ಬಲೂನ್ ಗಳ ಮೇಲೆ ಐ ಲವ್ ಪಾಕಿಸ್ತಾನ ಎಂದು ಮುದ್ರಿಸಿರುವುದನ್ನು ಕಂಡು ಮಾಹಿತಿ ನೀಡಿದ್ದಾರೆ. ಮಾಹಿತಿ ಅನ್ವಯ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವರ್ಮಾ ಮಾಹಿತಿ ನೀಡಿದ್ದಾರೆ.
ಬಂಧಿತ ಇಬ್ಬರಲ್ಲಿ ಒಬ್ಬ ಅಂಗಡಿ ಮಾಲೀಕನಾಗಿದ್ದು, ಇನ್ನೊಬ್ಬ ಸಹಾಯಕನಾಗಿದ್ದಾನೆ. ದೆಹಲಿಯಿಂದ ಬಲೂನ್ ಗಳನ್ನು ತರಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
Leave A Reply