ಅರಿಯಿರಿ ಕರಾಳ ದಿನ ಆಚರಿಸುವವರ ದುರುಳ ಮನ, ಇಲ್ಲಿದೆ ನೋಟು ನಿಷೇಧದಿಂದಾದ ಉಪಯೋಗ
ನೋಟು ನಿಷೇಧವೇ ದೊಡ್ಡ ಹಗರಣ ಎಂದರು ರಾಹುಲ್ ಗಾಂಧಿ. ಮಮತಾ ಬ್ಯಾನರ್ಜಿಯಂತೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿಪಕ್ಷದವರನ್ನು ಒಂದು ಮಾಡಿ ಭಾರತ ಬಂದ್ ಗೆ ಕರೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿರ್ಧಾರವನ್ನು ಕೆಟ್ಟ ನಿರ್ಧಾರ ಎಂದು ಜರಿದರು. ನೋಡಿ, ಜನ ಹೇಗ್ ಬ್ಯಾಂಕ್ ಎದುರು ಬಿಸಿಲಲ್ಲಿ ನಿಲ್ಲುವಂತಾಗಿದೆ ನೋಡಿ ಎಂದು ಬೊಬ್ಬೆ ಹಾಕಿದರು.
ಆದರೆ ಏನಾಯಿತು? ನೋಟು ನಿಷೇಧದ ಬಳಿಕ ಜನ ಒಳ್ಳೆಯ ನಿರ್ಧಾರ ಎಂದರು. ಬ್ಯಾಂಕ್ ಎದುರು ಮಾರುದ್ದ ಸಾಲಿನಲ್ಲಿ ನಿಂತು ದೇಶಕ್ಕಾಗಿ ಇಷ್ಟೂ ಮಾಡದಿದ್ದರೆ ಹೇಗೆ ಎಂದರು. ರಾಹುಲ್ ಗಾಂಧಿ ಮಾತು ಸುಳ್ಳಾಗಿಸಿದರು. ಭಾರತ್ ಬಂದ್ ವಿಫಲವಾಯಿತು. ಕೊನೆಗೆ ನೋಟು ನಿಷೇಧದ ಕುರಿತು ಒಳ್ಳೆಯ ಮಾತುಗಳು ಕೇಳಿಬಂದವು. ಕೇಂದ್ರ ಸರ್ಕಾರ ಕಪ್ಪು ಹಣದ ವಿರುದ್ಧ ಸಾರಿದ ಸಮರ ಯಶಸ್ವಿಯೂ ಆಯಿತು…
ಆದರೆ…
2016ರ ನವೆಂಬರ್ 8ರ ಬಳಿಕ ಬೊಬ್ಬೆ ಹಾಕಿ ಇಷ್ಟು ದಿನ ಸುಮ್ಮನಿದ್ದ ಪ್ರತಿಪಕ್ಷಗಳು ಈಗ ಮತ್ತೆ ಒಂದಾಗಿವೆ. ಅತ್ತ ಕೇಂದ್ರ ಸರ್ಕಾರ 2017ರ ನ.8ರಂದು ಕಪ್ಪು ಹಣ ವಿರೋಧಿ ದಿನ ಆಚರಿಸಲು ಹೊರಟರೆ, ಇತ್ತ ಪ್ರತಿಪಕ್ಷಗಳು ಕರಾಳ ದಿನ ಆಚರಿಸಲು ಹೊರಟಿವೆ…
ಏಕೆ?
ಹಾಗಾದರೆ ನೋಟು ನಿಷೇಧದಿಂದ ದೇಶಕ್ಕೆ ಒಳಿತಾಗದೆ ಕೆಡುಕಾಗಿದೆಯೇ? ಕಪ್ಪು ಹಣಕ್ಕೆ ಅಂಕುಶ ಬೀಳಲಿಲ್ಲವೇ? ನೋಟು ನಿಷೇಧದಿಂದಾದ ಉಪಯೋಗವೇ ಆಗಲಿಲ್ಲವೇ? ಇಂಥ ಪ್ರಶ್ನೆಗಳಿಗೆ ಅಂಕಿ ಅಂಶಗಳ ಸಮೇತ ಹುಡುಕಾಡಿದರೆ, ಈ ಕರಾಳ ದಿನ ಆಚರಿಸಲು ಹೊರಟಿರುವ ದುರುಳ ಮನಸ್ಸಿನವರ ಬುದ್ಧಿ ಏನು ಎಂಬುದು ಢಾಳಾಗುತ್ತದೆ. ಇಲ್ಲಿವೆ ನೋಡಿ ನೋಟು ನಿಷೇಧದಿಂದಾದ ಉಪಯೋಗಗಳು…
- ನೋಟು ನಿಷೇಧದ ಬಳಿಕ ದೇಶದ 500, 1000 ರೂಪಾಯಿ ಮೌಲ್ಯದ 15.44 ಲಕ್ಷ ಕೋಟಿ ರುಪಾಯಿಯಲ್ಲಿ 15.28 ಲಕ್ಷ ಕೋಟಿ ಬ್ಯಾಂಕಿಗೆ ವಾಪಸಾಗಿದೆ. ಅಂದರೆ ಶೇ.98.96ರಷ್ಟು ನೋಟುಗಳ ವಾಪಸಾಗಿವೆ. ಇದರಲ್ಲಿ ಕಪ್ಪು ಹಣವೂ ಇದ್ದು, ಪರಿಶೀಲಿಸಿದೆ ಬಿಡುವುದಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಇಷ್ಟು ಮೊತ್ತದಲ್ಲಿ ಕಾಳಧನಿಕರು ಸಿಕ್ಕರೆ ಲಾಭ ಯಾವ ದೇಶಕ್ಕೆ?
- ನೋಟು ನಿಷೇಧದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಉಗ್ರರಿಂದ ಹಣ ಹರಿದು ಬರುವುದು ಸ್ಥಗಿತವಾಗಿದೆ. ಹಾಗಾಗಿಯೇ ಅಲ್ಲಿ ಕಲ್ಲು ತೂರಾಟ ಪ್ರಕರಣ ಕಡಿಮೆಯಾಗಿವೆ. 2016ರಲ್ಲಿ 2,808 ಕಲ್ಲು ತೂರಾಟ ಪ್ರಕರಣ ದಾಖಲಾದರೆ, 2017ರಲ್ಲಿ ಆ ಸಂಖ್ಯೆ 664ಕ್ಕೆ ಇಳಿದಿದೆ. ಇದು ನೋಟು ನಿಷೇಧದ ಉಪಯೋಗವಲ್ಲವೇ?
- ಅಷ್ಟೇ ಅಲ್ಲ, ಉಗ್ರಚಟುವಟಿಕೆಗಳೂ ನಿಗ್ರಹವಾಗಿವೆ, ದಾಳಿಯಿಂದ ಮೃತಪಡುವ ಭಾರತೀಯರ ಸಂಖ್ಯೆಯೂ ಕಡಿಮೆಯಾಗಿದೆ. ಉಗ್ರರ ದಾಳಿಗೆ ಕಳೆದ ವರ್ಷ 247 ಜನ ಮೃತಪಟ್ಟಿದ್ದರು, ಈಗ ಆ ಸಂಖ್ಯೆ 172ಕ್ಕೆ ಇಳಿದಿದೆ. ಅತ್ತ ಉಗ್ರರಿಂದ ಹಣ ಪಡೆದ ಆರೋಪದಲ್ಲಿ ಪ್ರತ್ಯೇಕತಾವಾದಿಗಳ ವಿರುದ್ಧ ಎನ್ಐಎ ತನಿಖೆ ನಡೆಸುತ್ತದೆ. ನೋಟು ನಿಷೇಧದಿಂದ ದೇಶಕ್ಕಾದ ನಷ್ಟದ ಕುರಿತು ತಿಳಿಸುವಿರಾ?
- ಬರೀ ನೋಟು ನಿಷೇಧ ಅಷ್ಟೇ ಅಲ್ಲ, ಕಳೆದ ಏಪ್ರಿಲ್ ನಿಂದ ಸರ್ಕಾರ ಕಪ್ಪು ಹಣದ ವಿರುದ್ಧ ಕಾರ್ಯಾಚರಣೆ ಆರಂಭಿಸಿದೆ. ಇದುವರೆಗೆ 3 ಲಕ್ಷ ನಕಲಿ ಕಂಪನಿ ಗುರುತಿಸಿದ್ದು, ಅವುಗಳಲ್ಲಿ 2.10 ಲಕ್ಷ ಕಂಪನಿಗಳ ವಹಿವಾಟು ಪರಿಶೀಲನೆ ನಡೆಯುತ್ತಿದೆ. ಒಂದು ವೇಳೆ ಇದು ಸಾಬೀತಾದರೆ 2.10 ಲಕ್ಷ ನಕಲಿ ಕಂಪನಿಗಳ ನೋಂದಣಿ ರದ್ದಾಗುತ್ತದೆ. ಇದು ಇದು ಉಪಯೋಗಕಾರಿಯಲ್ಲವೇ?
- ನೋಟು ನಿಷೇಧದಿಂದ ಶ್ರೀಮಂತರ, ರೌಡಿಗಳ, ಅಧಿಕಾರದಲ್ಲಿರುವ ರಿಯಲ್ ಎಸ್ಟೇಟ್ ದಂಧೆಗೆ ಹೊಡೆತ ಬಿದ್ದಿದೆ. ಬೇಕಾಬಿಟ್ಟಿ ಹಣಕ್ಕೆ ಬಿಕರಿಯಾಗುತ್ತಿದ್ದ ಸೈಟುಗಳು ನ್ಯಾಯಬೆಲೆಗೆ ಮಾರಾಟವಾಗುತ್ತಿರುವುದು ಯಾರಿಗೆ ಲಾಭ?
- ನೋಟು ನಿಷೇಧದ ಬಳಿಕ 5 ಲಕ್ಷ ನೂತನ ತೆರಿಗೆದಾರರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಇಷ್ಟು ಜನ ತೆರಿಗೆದಾರರ ತೆರಿಗೆ ಹಣ ಯಾರ ಕಲ್ಯಾಣಕ್ಕಾಗಿ ಸರ್ಕಾರ ಬಳಸಿಕೊಳ್ಳುತ್ತದೆ ಎಂದು ವಿವರಿಸುವಿರಾ?
- ನೋಟು ನಿಷೇಧಕ್ಕೂ ಮೊದಲು ಪಾಕಿಸ್ತಾನದಿಂದ ನಕಲಿ ನೋಟುಗಳು ಹರಿದುಬರುತ್ತಿದ್ದವು. ಇದು ದೇಶದ ವಿತ್ತೀಯ ಕ್ಷೇತ್ರವನ್ನೇ ಬುಡಮೇಲು ಮಾಡುತ್ತದೆ ಎನ್ನಲಾಗುತ್ತಿತ್ತು. ಆದರೆ ನೂತನ ತಂತ್ರಜ್ಞಾನ ಅಳವಡಿಸಿದ ಹೊಸ ನೋಟುಗಳು ಬಂದ ಮೇಲೆ ನಕಲಿ ನೋಟುಗಳ ಹಾವಳಿ ತಪ್ಪಿದೆ. ನ.8ರಿಂದ ಇದುವರೆಗೆ 28 ಕೋಟಿ ಕೋಟಿ ರೂ. ನಕಲಿ ನೋಟು ಪತ್ತೆ ಹಚ್ಚಿ, ಚಲಾವಣೆ ತಡೆಯಲಾಗಿದೆ ಎಂದು ಇತ್ತೀಚೆಗೆ ಕೇಂದ್ರ ಸರ್ಕಾರವೇ ಹೇಳಿದೆ. ಇಷ್ಟು ನೋಟು ತಡೆದಿದ್ದರಿಂದ ಭಾರತಕ್ಕೆ ಉಪಯೋಗವಾಗದೆ ಪಾಕಿಸ್ತಾನಕ್ಕೆ ಲಾಭವಾಯಿತೆ ಪ್ರತಿಪಕ್ಷಗಳೇ…
ಹೀಗೆ ನೋಟು ನಿಷೇಧ ಎಂಬ ಒಂದೇ ಒಂದು ನಿರ್ಧಾರದಿಂದ ಹತ್ತು ಹಲವು ಉಪಯೋಗಗಳಾಗಿವೆ. ಜನ ಡಿಜಿಟಲ್ ಆಗುತ್ತಿದ್ದಾರೆ. ಆನ್ ಲೈನ್ ವಹಿವಾಟು ಹೆಚ್ಚಾಗುತ್ತಿದೆ. ದೇಶದ ಮೆಲ್ಲಗೆ ಬದಲಾಗುತ್ತಿದೆ. ಆದರೆ, ಅಧಿಕಾರಲಾಲಸೆಗಾಗಿ ಬಾಯಿಗೆ ಬಂದ ಹಾಗೆ ಮಾತನಾಡುವ ಪ್ರತಿಪಕ್ಷಗಳು ಆಚರಿಸಲು ಹೊರಟಿರುವ ಕರಾಳ ದಿನಕ್ಕೆ ಯಾರೂ ಬೆಂಬಲಿಸದಿರೋಣ. ಒತ್ತರಿಸಿ ಬರುತ್ತಿರುವ ಅಚ್ಛೇ ದಿನಗಳಲ್ಲಿ ನಾವೂ ಪಾಲುದಾರರಾಗೋಣ.
Leave A Reply