ಜಿಎಸ್ಟಿ, ನೋಟು ನಿಷೇಧ ಪರಿಣಾಮ: ಪ್ರಮುಖ 8 ವಲಯಗಳಲ್ಲಿ ಭಾರಿ ಬೆಳವಣಿಗೆ
ದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೋಟು ನಿಷೇಧ ಹಾಗೂ ಸರಕು ಮತ್ತು ಸೇವಾ ತೆರಿಗೆಯಂಥ ಪ್ರಮುಖ ಯೋಜನೆಗಳು ದೇಶದ ಪ್ರಮುಖ ಔದ್ಯಮಿಕ ವಲಯಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿವೆ.
ಇದಕ್ಕೆ ಪುಷ್ಟಿ ನೀಡುವಂತೆ ದೇಶದ ಪ್ರಮುಖ 8 ಔದ್ಯಮಿಕ ವಲಯಗಳಲ್ಲಿ ಭಾರಿ ಏರಿಕೆ ಕಂಡಿದ್ದು, ಸೆಪ್ಟೆಂಬರ್ ನಲ್ಲಿ ಶೇ.5.2ಕ್ಕೆ ಏರಿದೆ. ಇದು ಕಳೆದ ಆರು ತಿಂಗಳಲ್ಲೇ ಗರಿಷ್ಠ ಏರಿಕೆ ಎಂದು ಅಧಿಕೃತ ಮಾಹಿತಿಯಿಂದ ತಿಳಿದುಬಂದಿದೆ.
ಕಲ್ಲಿದ್ದಿಲು, ಕಚ್ಚಾತೈಲ, ನೈಸರ್ಗಿಕ ಅನಿಲ, ರಸಗೊಬ್ಬರ, ಸ್ಟೀಲ್, ಸಿಮೆಂಟ್, ಮರುಸಂಸ್ಕರಣ ಹಾಗೂ ವಿದ್ಯುತ್ ಉತ್ಪಾದನೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಅದರಲ್ಲೂ ಕಲ್ಲಿದ್ದಿಲು, ನೈಸರ್ಗಿಕ ಅನಿಲ, ಮರುಸಂಸ್ಕರಣ ಉತ್ಪನ್ನದಲ್ಲಿ ಶೇ.10.6ರಷ್ಟು ಏರಿಕೆ ಕಂಡು ಬಂದಿರುವುದು ದೇಶದ ಆರ್ಥಿಕ ಬೆಳವಣಿಗೆಗೆ ಪೂರಕ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಮಾರ್ಚ್ ನಲ್ಲಿ ಈ ವಲಯಗಳಲ್ಲಿ ಇಷ್ಟು ಪ್ರಮಾಣ ಏರಿಕೆ ಕಾಣಲಾಗಿತ್ತಾದರೂ ಬಳಿಕ ಕುಂಠಿತವಾಗಿ 2.6ಕ್ಕೆ ಕುಸಿದಿತ್ತು. ಆದರೆ ಈಗ ಚೇತರಿಕೆ ಕಂಡು ಆರು ತಿಂಗಳಲ್ಲೇ ಗರಿಷ್ಠ ಏರಿಕೆ ಕಂಡಿವೆ. ಆದಾಗ್ಯೂ, ಈ ಎಂಟು ವಲಯಗಳ ಉತ್ಪನ್ನ ಪ್ರಮಾಣ ಶೇ.41ರಷ್ಟಿದೆ ಎಂದು ತಿಳಿದುಬಂದಿದೆ.
ನೋಟು ನಿಷೇಧ, ಜಿಎಸ್ಟಿಯಿಂದ ದೇಶದ ವಿತ್ತೀಯ ವ್ಯವಸ್ಥೆ ಹಾಳಾಯಿತು ಎಂದು ಬೊಬ್ಬೆ ಹಾಕುತ್ತಿದ್ದವರ ಬಾಯಿಗೆ ಈ ಬೆಳವಣಿಗೆ ಖಾರ ಸುರಿದಂತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಚೇತರಿಕೆಯಾಗುವ ನಿರೀಕ್ಷೆ ಇದೆ.
Leave A Reply