ಬೆಳಗ್ಗೆ ರಾಷ್ಟ್ರಗೀತೆ, ಸಂಜೆ ವಂದೇ ಮಾತರಂ ಹಾಡಿ, ಹಾಡದವರು ಪಾಕಿಸ್ತಾನಕ್ಕೆ ಹೋಗಿ: ಮೇಯರ್ ದಿಟ್ಟ ಆದೇಶ
ಜೈಪುರ: ಜೈಪುರ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ ಬೆಳಗ್ಗೆ ರಾಷ್ಟ್ರಗೀತೆ ಹಾಗೂ ಸಂಜೆ ವಂದೇ ಮಾತರಂ ಹಾಡುವುದು ಕಡ್ಡಾಯ. ಯಾರಾದರೂ ಇದನ್ನು ವಿರೋಧಿಸುವವರಿದ್ದರೆ ಅವರು ಪಾಕಿಸ್ತಾನಕ್ಕೆ ಹೋಗಲು ಮುಕ್ತ ಎಂದು ಜೆಎಂಸಿ ಮೇಯರ್ ಅಶೋಕ್ ಲಾಹೋಟಿ ಹಾಗೂ ಆಯುಕ್ತ ರವಿ ಜೈನ್ ಸಿಬ್ಬಂದಿಗೆ ಆದೇಶ ಹೊರಡಿಸಿದ್ದಾರೆ.
ದೇಶದ ಬಗ್ಗೆ ಪ್ರೀತಿ ಹಾಗೂ ರಾಷ್ಟ್ರಭಕ್ತಿ ಮೂಡಿಸಲು, ಶಿಸ್ತು ಹಾಗೂ ಕೆಲಸದಲ್ಲಿ ಶ್ರದ್ಧೆ ಮೂಡಿಸಲು ಈ ಆದೇಶ ಹೊರಡಿಸಲಾಗಿದೆ ಎಂದು ಹೆಚ್ಚುವರಿ ಆಯುಕ್ತ ತಿಳಿಸಿದ್ದಾರೆ.
ಜೆಎಂಸಿ ಕೇಂದ್ರ ಕಚೇರಿಯಲ್ಲಿ ಬೆಳಗ್ಗೆ 9.50ಕ್ಕೆ ರಾಷ್ಟ್ರಗೀತೆ ಹಾಗೂ ಸಂಜೆ 5.55ಕ್ಕೆ ವಂದೇಮಾತರಂ ಹಾಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಆದೇಶದ ಹಿಂದೆ ಯಾವುದೇ ದುರುದ್ದೇಶ ಅಥವಾ ಶೀಘ್ರ ಯೋಜನೆ ಜಾರಿಯ ತರಾತುರಿಯಿಲ್ಲ. ಸರ್ಕಾರಿ ಕಚೇರಿಯಲ್ಲಿ ಸಕಾರಾತ್ಮಕ ಹಾಗೂ ಸ್ಫೂರ್ತಿಯಿಂದ ಕೆಲಸ ಮಾಡುವ ಚೈತನ್ಯ ಮೂಡಿಸಲು ಈ ಆದೇಶ ಹೊರಡಿಸಿದೆ. ರಾಷ್ಟ್ರಗೀತೆಗಿಂತ ಬೇರಾವ ಸ್ಫೂರ್ತಿಯ ಹಾಡು ಇದೆ? ಹಾಗಾಗಿ ಇದನ್ನು ಕಡ್ಡಾಯಗೊಳಿಸಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಬಿಜೆಪಿಯ ಅಶೋಕ್ ಲಾಹೋಟಿ ಕಳೆದ ಡಿಸೆಂಬರ್ ನಲ್ಲಿ ಆಯುಕ್ತರಾಗಿ ಆಯ್ಕೆಯಾಗಿದ್ದಾರೆ.
Leave A Reply