ಹಿಂದೂ ಉಗ್ರವಾದ ಕುರಿತು ಲೇಖನ; ಕಮಲ್ ಹಾಸನ್ ವಿರುದ್ಧ ಮಾನನಷ್ಟ ಮೊಕದ್ದಮೆ
ಹಿಂದೂ ಉಗ್ರವಾದದ ಅಸ್ತಿತ್ವದ ಕುರಿತು ತಳ್ಳಿಹಾಕುವಂತಿಲ್ಲ ಎಂದು ಹೇಳಿಕೆ ನೀಡಿದ್ದ ಕಮಲ್ ಹಾಸನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 500 (ಮಾನನಷ್ಟಕ್ಕೆ ಶಿಕ್ಷೆ ವಿಧಿಸುವುದು), 511, 298 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು), 295 ಎ (ಧಾರ್ಮಿಕ ಭಾವನೆ ಕೆರಳಿಸುವುದು) ಹಾಗೂ 505 (ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುವುದು) ಅನ್ವಯ ಕಮಲ್ ಹಾಸನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.
ಕಮ್ಲೇಶ್ ಚಂದ್ರ ತ್ರಿಪಾಠಿ ಎಂಬ ವಕೀಲ ಕಮಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದು, “ಹಿಂದೂ ಭಯೋತ್ಪಾದನೆ ಕುರಿತು ಕಮಲ್ ಹಾಸನ್ ಬಳಿ ಯಾವುದೇ ದಾಖಲೆಗಳಿದ್ದರೆ, ಅವುಗಳನ್ನು ಎನ್ಐಎ ಸೇರಿ ನಾನಾ ತನಿಖಾ ಸಂಸ್ಥೆಗಳಿಗೆ ಒದಗಿಸಲಿ. ಆದರೆ ಹೀಗೆ ಬೇಜವಾಬ್ದಾರಿಯುತವಾಗಿ ಮಾತನಾಡುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಹಿಡಿದ ಕನ್ನಡಿಯಾಗಿದೆ. ಅವರ ಮಾತುಗಳಿಗೆ ಸಂಪೂರ್ಣ ವಿರೋಧವಿದ್ದು, ತಕ್ಕ ಶಿಕ್ಷೆ ನೀಡಬೇಕು” ಎಂದು ಮೊಕದ್ದಮೆಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ದೂರು ಆಲಿಸಿರುವ ನ್ಯಾಯಾಲಯ, ಶನಿವಾರ ಈ ಕುರಿತು ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಆನಂದ ವಿಕಟನ್ ಎಂಬ ತಮಿಳು ವಾರಪತ್ರಿಕೆಗೆ ಲೇಖನ ಬರೆದಿದ್ದ ಕಮಲ್ ಹಾಸನ್, “ದೇಶದಲ್ಲಿ ಹಿಂದೂ ಉಗ್ರವಾದದ ಅಸ್ತಿತ್ವವನ್ನು ತಳಿಹಾಕುಂತಿಲ್ಲ” ಎಂದು ಉಲ್ಲೇಖಿಸಿದ್ದರು. ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಆದಾಗ್ಯೂ ಕಮಲ್ ಪರ ಪ್ರಕಾಶ್ ರೈ ಬ್ಯಾಟಿಂಗ್ ಮಾಡಿದ್ದರು. ಈಗ ಪ್ರಕರಣ ವಿಚಾರಣೆ ಹಂತಕ್ಕೆ ಬಂದಿದೆ.
Leave A Reply