ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಶಿಕ್ಷಣ ಸಂಸ್ಥೆ, ಗೋದಾಮುಗಳ ಮೇಲೆ ಲೋಕಾಯುಕ್ತ ದಾಳಿ, ಸರ್ಕಾರಕ್ಕೂ ಮುಜುಗರ
ತುಮಕೂರು: ಭ್ರಷ್ಟಾಚಾರ ನಿಗ್ರಹ ದಳ ರಚಿಸಿ ಲೋಕಾಯುಕ್ತ ಸಂಸ್ಥೆ ಬಲಹೀನಗೊಳಿಸಿದ್ದ ರಾಜ್ಯ ಸರ್ಕಾರಕ್ಕೆ ಲೋಕಾಯುಕ್ತ ಸಂಸ್ಥೆಯೇ ಬಿಸಿ ಮುಟ್ಟಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಸಂಬಂಧಿಸಿದ ಕೆಲ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ.
ಪರಮೇಶ್ವರ್ ಮಾಲೀಕತ್ವದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳು ಹಾಗೂ ಗೋದಾಮುಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನೆಲಮಂಗಲ ತಾಲೂಕು ಕುಲವನಹಳ್ಳಿ ವ್ಯಾಪ್ತಿಯ ಸಿದ್ಧಾರ್ಥ ವೈದ್ಯಕೀಯ ಕಾಲೇಜು, 70ಕ್ಕೂ ಅಧಿಕ ಗೋದಾಮುಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಇವುಗಳಿಂದ ತೆರಿಗೆ ಸಹ ಪಾವತಿಯಾಗುತ್ತಿಲ್ಲ ಎಂದು ಖಾಸಗಿ ವ್ಯಕ್ತಿಗಳು ಪಂಚಾಯತ್ ರಾಜ್ ಇಲಾಖೆಗೆ ದೂರು ಸಲ್ಲಿಸಿದ್ದರು.
8 ತಿಂಗಳ ಹಿಂದೆ ಸಲ್ಲಿಸಿದ್ದ ದೂರಿಗೆ ಸ್ಪಂದಿಸಿದ ಪಂಚಾಯತ್ ರಾಜ್ ಇಲಾಖೆ, ಲೋಕಾಯುಕ್ತ ಸಂಸ್ಥೆಗೆ ದೂರು ವರ್ಗಾಯಿಸಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ ಎಇಇ ಎಚ್.ಎಸ್.ಶ್ರೀನಿವಾಸ ಮೂರ್ತಿ ಮತ್ತು ಹಲವು ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಕುಲವನಹಳ್ಳಿ ವ್ಯಾಪ್ತಿಯಲ್ಲಿ ಕೆಲವು ಸಂಸ್ಥೆಗಳು ತೆರಿಗೆ ಪಾವತಿಸುತ್ತಿಲ್ಲ ಎಂದು ಸರ್ಕಾರ ಸೂಚಿಸಿದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಕಡತ ವಶಪಡಿಸಿಕೊಳ್ಳಲಾಗಿದೆ. ಯಾರನ್ನೂ ಗುರಿಯಾಗಿಸಿ ದಾಳಿ ನಡೆಸಿಲ್ಲ. ಶೀಘ್ರವೇ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ ಎಂದು ಶ್ರೀನಿವಾಸ ಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿರುವ ವೇಳೆ ಡಾ.ಜಿ.ಪರಮೇಶ್ವರ್ ಅವರಿಗೆ ಸಂಬಂಧಿಸಿದ ಕಚೇರಿ, ಶಿಕ್ಷಣ ಸಂಸ್ಥೆ ಹಾಗೂ ಗೋದಾಮುಗಳಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಮುಜುಗರ ತಂದಿದೆ. ಸರ್ಕಾರಕ್ಕೂ ಬಿಸಿ ತಟ್ಟಿದಂತಾಗಿದೆ.
Leave A Reply