ವಿಚಾರಣೆಗೆ ಹಾಜರಾಗುವಂತೆ ಡಿಕೆಶಿಗೆ ಐಟಿ ನೋಟಿಸ್
ಬೆಂಗಳೂರು: ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ ವೇಳೆ ಗುಜರಾತ್ ಶಾಸಕರಿಗೆ ಈಗಲ್ಟನ್ ರೆಸಾರ್ಟ್ ನಲ್ಲಿ ಆಶ್ರಯ ನೀಡಿ ಐಟಿ ಗುಮ್ಮಕ್ಕೆ ಗುರಿಯಾದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಈಗ ಮತ್ತೆ ಐಟಿ ತಲೆನೋವು ಶುರುವಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಡಿ.ಕೆ.ಶಿವಕುಮಾರ್ ಗೆ ಆದಾಯ ತೆರಿಗೆ ಇಲಾಖೆ ನೀಡುತ್ತಿರುವ ಏಳನೇ ನೋಟಿಸ್ ಇದಾಗಿದ್ದು, ಕುಟುಂಬ ಸಮೇತವಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಐಟಿ ಇಲಾಖೆ ನೋಟಿಸ್ ನಂತೆ ಸೋಮವಾರ ಡಿಕೆಶಿ ವಿಚಾರಣೆಗೆ ಹಾಜರಾಗಬೇಕು.
ಲೆಕ್ಕ ಪರಿಶೋಧಕರನ್ನು ಜತೆಯಲ್ಲಿ ಕರೆತರುವುದುಕ್ಕೆ ಐಟಿ ರೆಡ್ ಸಿಗ್ನಲ್ ನೀಡಿದ್ದು, ಕಾಂಗ್ರೆಸ್ ನಲ್ಲಿ ಭಾರಿ ಆಕ್ಷೇಪ ವ್ಯಕ್ತವಾಗಿದೆ. ಅಲ್ಲದೆ, ಲೆಕ್ಕಪರಿಶೋಧಕರನ್ನು ಕರೆತರಲು ನಿರಾಕರಿಸಿರುವುದು ಮುಂದಿನ ದಿನಗಳಲ್ಲಿ ಡಿಕೆಶಿಗೆ ಮತ್ತಷ್ಟು ಕಂಟಕ ಎದುರಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಹಾಗಾಗಿ ಕಾಂಗ್ರೆಸ್, ಇದು ಕೇಂದ್ರ ಸರ್ಕಾರದ ಸೇಡಿನ ರಾಜಕಾರಣಕ್ಕೆ ನಿದರ್ಶನ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಸಚಿವ ಡಿ.ಕೆ.ಶಿವಕುಮಾರ್, ಪತ್ನಿ ಉಷಾ, ತಾಯಿ ಗೌರಮ್ಮ ಹಾಗೂ ಇಬ್ಬರು ಮಕ್ಕಳ ಜತೆ ಐಟಿ ವಿಚಾರಣೆಗೆ ಹಾಜರಾಗಬೇಕು. ಇದುವರೆಗೂ ಡಿಕೆಶಿ ಕುಟುಂಬ ಸಮೇತ 6 ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ.
Leave A Reply