ಮುಸ್ಲಿಂ ಆಟೋ ಡ್ರೈವರ್ ಮಗನಾದ ಆತ ಟೀಂ ಇಂಡಿಯಾ ಸೇರಿದ ಹಾಗೂ ರಾಷ್ಟ್ರಗೀತೆ ಮೊಳಗುತ್ತಲೇ ಕಣ್ಣೀರಿತ್ತ
ನಾವಿಲ್ಲಿ ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಮೊಳಗಿದರೆ ಎದ್ದು ನಿಲ್ಲಬೇಕೋ, ಬೇಡವೋ ಎಂದು ಚಿಂತಿಸುತ್ತಿದ್ದರೆ, ನಾನು ನಿಲ್ಲಲ್ಲ, ಏಕೆ ನಿಲ್ಲಬೇಕು ಎಂದು ಕೆಲವರು ಬೊಬ್ಬೆ ಹಾಕುತ್ತಿದ್ದರೆ, ರಾಷ್ಟ್ರಗೀತೆ ಹಾಡಿಸೋಕೆ ಅದೇನು ಶಾಲೆಯೇ ಎಂದು ಎಲುಬಿಲ್ಲದ ನಾಲಗೆ ಹರಿಬಿಡುತ್ತಿದ್ದರೆ, ಅಲ್ಲೊಬ್ಬ 23ರ ಯುವಕ ಟೀಂ ಇಂಡಿಯಾ ಕ್ರಿಕೆಟ್ ತಂಡ ಸೇರಿದ್ದ.
ನಿನ್ನೆ ರಾಜ್ ಕೋಟ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಅಂತಾರಾಷ್ಟ್ರೀಯ ಟ್ವೆಂಟಿ ಟ್ವೆಂಟಿ ಪಂದ್ಯದ ಆರಂಭಕ್ಕೂ ಮುನ್ನ ಕೋಚ್ ರವಿಶಾಸ್ತ್ರಿ ಅವನಿಗೆ ಟೀಂ ಇಂಡಿಯಾದ ಕ್ಯಾಪ್ ಕೊಟ್ಟರು.
ನಂತರ, ಜನಗಣಮನ ಮೊಳಗುತ್ತಲೇ ಆತ ಭಾವನೆ ತಡೆದುಕೊಳ್ಳಲಾಗಲಿಲ್ಲ. ಕಣ್ಣಲ್ಲಿ ನೀರು ಜಿನುಗುತ್ತಿದ್ದವು.
ಆತನ ಹೆಸರು ಮೊಹಮ್ಮದ್ ಸಿರಾಜ್.
ಬಡ ಮುಸ್ಲಿಮ್ ಆಟೋ ಡ್ರೈವರನ ಮಗನಾದ ಸಿರಾಜ್ 2015ರಲ್ಲಿ ಪ್ರಥಮ ದರ್ಜೆ ಕ್ರಿಕೆಟಿಗೆ ಪದಾರ್ಪಣೆ ಮಾಡಿ, 2017ರಲ್ಲಿ ಐಪಿಎಲ್ ಗೂ ಕಾಲಿರಿಸಿದರು. ಆಗ ಬಂದ 2.4 ಕೋಟಿ ರೂ. ಕಂಡು ಖುಷಿಯಾದ ಈತ ಮೊದಲು ಅಪ್ಪ ಆಟೋ ಓಡಿಸುವುದನ್ನು ನಿಲ್ಲಿಸಿದ.
ಶನಿವಾರ ಆರಂಭವಾದ ಪಂದ್ಯದಲ್ಲಿ ಸಿರಾಜ್ ರಾಷ್ಟ್ರಗೀತೆ ಮೊಳಗುವಾಗ ಇದಕ್ಕಾಗಿಯೇ ಇಷ್ಟು ದಿನ ಶ್ರಮಿಸಿದೆ ಎಂಬ ಕಾರಣಕ್ಕಾಗಿಯೋ, ಕೊನೆಗೂ ಅಂತಾರಾಷ್ಟ್ರೀಯ ಪಂದ್ಯವೊಂದರ ಆರಂಭಕ್ಕೂ ಮೊದಲು ದೇಶಭಕ್ತಿ ಗೀತೆ ಕೇಳುವಂತಾಯಿತಲ್ಲ ಎಂಬ ಸಾರ್ಥಕ ಭಾವದಿಂದಲೋ, ದೇಶಕ್ಕಾಗಿ ಆಡುವ ಅವಕಾಶ ನನ್ನದಾಯಿತಲ್ಲ ಎಂಬ ಮನೋಭಾವನೆಯಿಂದಲೋ ಆತ ಸಿರಾಜ್ ಕಣ್ಣೀರಿಟ್ಟು ದೇಶದ ಮನಗೆದ್ದಿದ್ದಾನೆ.
ಈಗ ಸಿರಾಜ್ ರಾಷ್ಟ್ರಗೀತೆಗೆ ಕಣ್ಣೀರಟ್ಟ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಸಹ ವ್ಯಕ್ತವಾಗಿವೆ. ಸಿರಾಜ್ ದೇಶಭಕ್ತಿ ಹೀಗೆಯೇ ಇರಲಿ, ಆಶಿಶ್ ನೆಹ್ರಾ ಸ್ಥಾನವನ್ನು ಸಮರ್ಪಕವಾಗಿ ತುಂಬಿ ದೇಶಕ್ಕೆ ಕೀರ್ತಿ ತರಲಿ. ಹಾಗೆಯೇ ಗೆದ್ದಲು ಹಿಡಿದ ಮನಸ್ಸುಗಳಿಗೆ ಸಿರಾಜ್ ದೇಶಭಕ್ತಿ ಮಾದರಿಯಾಗಲಿ.
Leave A Reply