ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್: ಮೋದಿ ವಾಗ್ದಾಳಿ
ಶಿಮ್ಲಾ: ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್, ಅದರ ಗುರುತೇ ಭ್ರಷ್ಟಾಚಾರ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರ ರ್ಯಾಲಿ ನಡೆಸಿದ ಅವರು, ಕಾಂಗ್ರೆಸ್ಸಿನ ಭ್ರಷ್ಟಾಚಾರಕ್ಕೆ ಜನ ಬೇಸತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಜನರೇ ಸಿಡಿದೆದ್ದಿದ್ದು, ಈಗಾಗಲೇ ಯುದ್ಧ ಕಣದಿಂದ ಕಾಂಗ್ರೆಸ್ ಹಿಂದೆ ಸರಿದಿದೆ ಎಂದು ಜರಿದಿದ್ದಾರೆ.
ಹಲವು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಜನರ ಮನಸ್ಥಿತಿ, ಅಭಿಪ್ರಾಯ, ಒತ್ತಾಸೆ ಏನಿದೆ ಎಂಬುದು ಗೊತ್ತು. ಗಾಳಿ ಯಾವ ಕಡೆ, ಯಾರ ಕಡೆ ಬೀಸುತ್ತದೆ ಎಂಬುದು ಗೊತ್ತಾಗುತ್ತದೆ. ಆದರೆ ಈ ಬಾರಿಯ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿರುಗಾಳಿಯೇ ಇದೆ ಎಂದು ಮೋದಿ ಹೇಳಿದ್ದಾರೆ.
ಇದುವರೆಗೂ ಹಿಮಾಚಲ ಪ್ರದೇಶದಲ್ಲಿ ಏಕಾಭಿಮುಖವಾಗಿ ಚುನಾವಣೆ ನಡೆದಿಲ್ಲ. ಆದರೆ ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತಿರುವ ಜನ ಬಿಜೆಪಿಯನ್ನು ಏಕಾಭಿಮುಖವಾಗಿ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜೀವ್ ಗಾಂಧಿ ವಿರುದ್ಧವೂ ಟೀಕೆ
ನರೇಂದ್ರ ಮೋದಿ ಅವರು ರಾಜೀವ್ ಗಾಂಧಿ ಅವರನ್ನೂ ಟೀಕಿಸಿದ್ದಾರೆ. ಸರ್ಕಾರದ ಅನುದಾನದ ಒಂದು ರುಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಜನರಿಗೆ ತಲುಪುತ್ತದೆ ಎಂಬ ರಾಜೀವ್ ಹೇಳಿಕೆ ಟೀಕಿಸಿದ ಮೋದಿ, “ಕಾಂಗ್ರೆಸ್ ಆಡಳಿತಾವಧಿಯಲ್ಲಿ ಯಾವ ಪರಿ ಭ್ರಷ್ಟಾಚಾರ ಎಸಗಿದೆ ಎಂಬುದನ್ನೇ ರಾಜೀವ್ ಗಾಂಧಿ ಹೇಳಿದ್ದಾರೆ. ರಾಜೀವ್ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಎತ್ತಿದರಾದರೂ, ಪರಿಹಾರ ಕಂಡುಕೊಳ್ಳಲಿಲ್ಲ. ಅವರೇ ಹೇಳಿದಂತೆ, 85 ಪೈಸೆ ಎಲ್ಲಿ ಹೋಗುತ್ತಿತ್ತು” ಎಂದು ಪ್ರಶ್ನಿಸಿದರು.
Leave A Reply