ಹಿಂದೂ ಉಗ್ರವಾದದ ಬಗ್ಗೆ ಮಾತನಾಡುವವರು ದೇಶವಿರೋಧಿಗಳು: ಯೋಗಿ ಆದಿತ್ಯನಾಥ
ಲಖನೌ: ಬಲಪಂಥೀಯ ಹಿಂದೂ ಉಗ್ರವಾದದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳು ನಟ ಕಮಲ್ ಹಾಸನ್ ಹೇಳಿಕೆಗೆ ಟಾಂಗ್ ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, “ಹಿಂದೂ ಭಯೋತ್ಪಾದನೆ ಬಗ್ಗೆ ಮಾತನಾಡುವವರು ದೇಶವಿರೋಧಿಗಳು” ಎಂದು ಪ್ರತಿಕ್ರಿಯಿಸಿದ್ದಾರೆ.
ಹಣ ಮಾಡಲು ಹಾಗೂ ತಮ್ಮ ಮಾರುಕಟ್ಟೆ ಮೌಲ್ಯ ಹೆಚ್ಚಿಸಿಕೊಳ್ಳಲು ಮತ್ತು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂಥ ಹೇಳಿಕೆ ನೀಡುವ ಇವರು, ಭಾರತ ಹಾಗೂ ಹಿಂದೂಗಳ ವಿರುದ್ಧ ಮಾತನಾಡುವವರನ್ನು ರಕ್ಷಿಸುತ್ತಾರೆ ಎಂದು ಯೋಗಿ ಜರಿದಿದ್ದಾರೆ.
ಭಾರತದಲ್ಲಿ ಇರುವುದು ಸನಾತನ ಧರ್ಮ ಒಂದೇ. ಉಳಿದವರೆಲ್ಲ ಹಲವು ಸಂಸ್ಕೃತಿ ಹಾಗೂ ವಿಚಾರಗಳ ಅನುಯಾಯಿಗಳು ಅಷ್ಟೇ. ಹಾಗೆಯೇ ಪ್ರತಿಯೊಬ್ಬರಿಗೂ ತಮ್ಮ ಧರ್ಮ ಹಾಗೂ ಸಂಸ್ಕೃತಿ ಅನುಸರಿಸುವ ಹಕ್ಕಿದೆ ಎಂದಿದ್ದಾರೆ.
ಬಲಪಂಥೀಯ ಹಿಂದೂಗಳ ಭಯೋತ್ಪಾದನೆ ಅಸ್ತಿತ್ವ ಅಲ್ಲಗಳೆಯುವಂತಿಲ್ಲ ಎಂದು ಕಮಲ್ ಹಾಸನ್ ಪತ್ರಿಕೆಯೊಂದಕ್ಕೆ ಲೇಖನ ಬರೆದಿದ್ದರು. ಇಂಥ ವಿವಾದಾತ್ಮಕ ಹೇಳಿಕೆ ನೀಡಿರುವುದಕ್ಕೆ ಕಮಲ್ ಹಾಸನ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯವೇ ಆದೇಶ ನೀಡಿದೆ.
Leave A Reply